ಎಲ್ಲ ಧರ್ಮಪೀಠಗಳು ಒಗ್ಗೂಡಿ ಹೋರಾಡಲಿ: ರಾಘವೇಶ್ವರ ಶ್ರೀ

| Published : Aug 28 2024, 01:01 AM IST

ಎಲ್ಲ ಧರ್ಮಪೀಠಗಳು ಒಗ್ಗೂಡಿ ಹೋರಾಡಲಿ: ರಾಘವೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸನ್ಯಾಸ ಸ್ವೀಕಾರ ಮಾಡುವಾಗಲೇ ಯಾರಿಗೂ ನಾವು ತೊಂದರೆ ಮಾಡುವುದಿಲ್ಲ ಎಂಬ ದೃಢ ಪ್ರತಿಜ್ಞೆ ಕೈಗೊಳ್ಳಬೇಕಾಗುತ್ತದೆ. ಸನ್ಯಾಸ ಎನ್ನುವುದು ಒಂದರ್ಥದಲ್ಲಿ ನಿರುಪದ್ರವ ವ್ರತ ಎಂದು ರಾಘವೇಶ್ವರ ಭಾರತೀ ಶ್ರೀಗಳು ತಿಳಿಸಿದರು.

ಗೋಕರ್ಣ: ಭಾರತದ ಸನಾತನ ಧರ್ಮವನ್ನು ಉಳಿಸಿಕೊಳ್ಳಬೇಕಾದರೆ ಎಲ್ಲ ಧರ್ಮಪೀಠಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗೂಡಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಅವರು 38ನೇ ದಿನ ಸತ್ಯಮೇವ ಜಯತೇ ಅನಾವರಣ ನೆರವೇರಿಸಿ ಆಶೀರ್ವಚನ ನೀಡಿದರು.

ಅದ್ವೈತ ಎನ್ನುವುದು ಬಾಹ್ಯಾರ್ಥದ ಸಿದ್ಧಾಂತವಾಗಿ ಉಳಿಯದೇ ಜೀವನದ ಎಲ್ಲ ಹಂತಗಳಲ್ಲಿ ಅನ್ವಯವಾಗಬೇಕು. ಎಲ್ಲ ಜೀವಗಳು, ಜನರು, ಸಮಾಜ ಎಲ್ಲರಲ್ಲೂ ಒಮ್ಮತದ ಭಾವ ಮೂಡಬೇಕು ಎಂದು ಅಭಿಪ್ರಾಯಪಟ್ಟರು.

ರಾಗ ದ್ವೇಷಗಳಿಗೂ ಪರಂಪರೆ ಇರುತ್ತದೆ ಎನ್ನುವುದಕ್ಕೆ ಇಂದಿನ ಅನಾವರಣ ನಿದರ್ಶನ. ಸಂಸ್ಥಾನಕ್ಕೆ ಯಾರ ಮೇಲೂ ದ್ವೇಷ ಇಲ್ಲ. ನಮ್ಮ ಪರಂಪರೆಯಲ್ಲಿ ಇದುವರೆಗೆ ಯಾವುದೇ ಯತಿಗಳು ಯಾರನ್ನೂ ಶಪಿಸಿದ, ಅಥವಾ ಬೇರೆ ಸಂಸ್ಥೆ, ಮಠಗಳ ಮೇಲೆ ಆಕ್ರಮಣ ನಡೆಸಿದ ನಿದರ್ಶನ ಇಲ್ಲ. ಆದರೆ, ಮಠದ ಮೇಲೆ ಸಾಲು ಸಾಲು ಆಕ್ರಮಣಗಳು, ದಾಳಿಗಳು ನಡೆದಿವೆ. ಇಷ್ಟಾಗಿಯೂ ಎಲ್ಲ ಕಾಲದಲ್ಲಿ ಶಿಷ್ಯಭಕ್ತರು ದೃಢವಾಗಿ ಮಠದ ಪರವಾಗಿ ನಿಂತಿದ್ದಾರೆ ಎಂದು ಬಣ್ಣಿಸಿದರು.

ಈ ಆಕ್ರಮಣಗಳು ಮೊಘಲರು, ಬ್ರಿಟಿಷರು ಅಥವಾ ಅನ್ಯ ಮತ ಜಾತಿಯವರಿಂದ ಆದದ್ದಲ್ಲ. ನಮ್ಮೊಳಗಿನಿಂದಲೇ ಇಂಥ ದಾಳಿಗಳು ನಡೆದಿವೆ. ಬೇರೆ ಬೇರೆ ಮಠಗಳಿಂದ ಆಗಿರುವಂಥದ್ದು. ವಾಸ್ತವವಾಗಿ ಮಠ ರಾಗ- ದ್ವೇಷ ಮೀರಿ ಆಳುವಂಥ ಪೀಠ. ಈ ಸಿಂಹಾಸನ ರಾಗ- ದ್ವೇಷ ಮೀರುವಂಥದ್ದು. ರಾಗ- ದ್ವೇಷಗಳನ್ನು ಮೀರಿ ಬೆಳೆಯುವುದೇ ನೈಜ ಯತಿಧರ್ಮ ಎಂದು ವಿಶ್ಲೇಷಿಸಿದರು.

ಸನ್ಯಾಸ ಸ್ವೀಕಾರ ಮಾಡುವಾಗಲೇ ಯಾರಿಗೂ ನಾವು ತೊಂದರೆ ಮಾಡುವುದಿಲ್ಲ ಎಂಬ ದೃಢ ಪ್ರತಿಜ್ಞೆ ಕೈಗೊಳ್ಳಬೇಕಾಗುತ್ತದೆ. ಸನ್ಯಾಸ ಎನ್ನುವುದು ಒಂದರ್ಥದಲ್ಲಿ ನಿರುಪದ್ರವ ವ್ರತ. ಅಶೋಕೆಯಲ್ಲಿ ಆದಿಗುರು ಶಂಕರರು ಮಠ ಸ್ಥಾಪನೆ ಮಾಡುವಾಗ ಶಂಕರರಿಗೆ ಕಂಡುಬಂದ ದೃಶ್ಯ ದ್ವೇಷವನ್ನು ಮೀರುವಂಥದ್ದು. ಹುಲಿಯೇ ಹುಲ್ಲೆಗೆ ಹಾಲುಣಿಸುವಂಥದ್ದು. ಅಂತೆಯೇ ಶೃಂಗೇರಿ ಇತಿಹಾಸ ತೆಗೆದುಕೊಂಡರೆ ಕಪ್ಪೆಗೆ ಹಾವು ನೆರಳು ನೀಡಿದ ದೃಶ್ಯ. ಅದು ಎಲ್ಲ ದ್ವೇಷವನ್ನು ಮೀರಬೇಕು ಎನ್ನುವ ಆಶಯ. ಅದು ಶಂಕರರ ಸಿದ್ಧಾಂತ. ಧರ್ಮಪೀಠಗಳು ಅಹಿಂಸಾ ತತ್ವವನ್ನು ಅನುಸರಿಸವಂತಾಗಬೇಕು ಎಂದರು.

ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಕಾರ್ಯದರ್ಶಿ ಜಿ.ಕೆ. ಮಧು, ಅರವಿಂದ ಬಂಗಲಗಲ್ಲು, ಶ್ರೀಶ ಶಾಸ್ತ್ರಿ, ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಮೋಹನ ಹರಿಹರ ಮತ್ತಿತರರು ಉಪಸ್ಥಿತರಿದ್ದರು.