ಸಾರಾಂಶ
ಬಳ್ಳಾರಿ: ರೈತರ ಸಂಕಷ್ಟಗಳ ಬಗ್ಗೆ ಧ್ವನಿ ಎತ್ತುವುದು ಬರೀ ರೈತ ಸಂಘಟನೆಗಳು, ಕೃಷಿ ಚಿಂತಕರ ಕೆಲಸ ಮಾತ್ರವಲ್ಲ. ಅನ್ನ ಉಣ್ಣೋ ಎಲ್ಲರೂ ಕೃಷಿ ಬಿಕ್ಕಟ್ಟು ಬಗ್ಗೆ ಮಾತನಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ಉಣ್ಣುವ ಅನ್ನವೂ ಹೊರ ದೇಶಗಳಿಂದ ತರಿಸಿಕೊಳ್ಳಬೇಕಾದ ದುಃಸ್ಥಿತಿಗೆ ಈ ದೇಶ ತಲುಪುತ್ತದೆ ಎಂದು ಹಿರಿಯ ರೈತ ಹೋರಾಟಗಾರ ಹಾಗೂ ಸಮಾಜಮುಖಿ ಚಿಂತಕ ಜೆ.ಎಂ. ವೀರಸಂಗಯ್ಯ ಎಚ್ಚರಿಸಿದರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಜರುಗಿದ "ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಮತ್ತು ರಾಜಕೀಯ ಅರ್ಥಶಾಸ್ತ್ರದ ಪ್ರಶ್ನೆ " ಕುರಿತು ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಳೆದ ಎರಡು ದಶಕದಲ್ಲಿ ಕೃಷಿ ಕ್ಷೇತ್ರದಲ್ಲಾದ ಬಿಕ್ಕಟ್ಟು ಮತ್ಯಾವ ಕ್ಷೇತ್ರದಲ್ಲಾಗಿಲ್ಲ. ಕೃಷಿ ಆಶ್ರಯಿಸಿದ ರೈತಾಪಿ ಕುಟುಂಬಗಳು ಆತ್ಮಹತ್ಯೆಗೆ ಶರಣಾಗುವ ದುಃಸ್ಥಿತಿ ಬಂದಿದೆ. ಯಾವುದೇ ದೇಶದ ಪ್ರಗತಿಗೆ ಕೈಗಾರಿಕೆ, ಕೃಷಿ ಕ್ಷೇತ್ರಗಳು ಎರಡು ಕಣ್ಣುಗಳು ಎಂದು ಬಣ್ಣಿಸಲಾಗುತ್ತದೆ. ಆದರೆ, ಕೈಗಾರಿಕಾ ಕ್ಷೇತ್ರಕ್ಕೆ ಸಿಕ್ಕ ಆದ್ಯತೆ, ಪ್ರೋತ್ಸಾಹಗಳು ಕೃಷಿ ಕ್ಷೇತ್ರಕ್ಕೆ ಸಿಗುತ್ತಿಲ್ಲ. ಕೃಷಿ ಉತ್ಪನ್ನ ಹೊರತುಪಡಿಸಿದ ಉಳದೆಲ್ಲ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ನಿಗದಿಗೊಳಿಸಲಾಗುತ್ತಿದೆ. ಆದರೆ, ಕೃಷಿ ಕ್ಷೇತ್ರ ಮಾತ್ರ ಬೆಂಬಲ ಬೆಲೆ ಅಥವಾ ನಿರ್ದಿಷ್ಟ ಬೆಲೆ ನಿಗದಿಯಿಂದ ಹೊರಗಿಡಲಾಗಿದೆ. ಒಂದೆಡೆ ರೈತರು ಕೃಷಿ ವಲಯದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಲೇ ಇದ್ದಾರೆ. ಮತ್ತೊಂದೆಡೆ ಸರ್ಕಾರಗಳು ಇಡೀ ಕೃಷಿ ವಲಯವನ್ನು ನಾಶಗೊಳಿಸುವ ಬಹುದೊಡ್ಡ ಹುನ್ನಾರ ನಡೆಸಿವೆ ಎಂದರು.
ಆಹಾರ ಸಂಸ್ಕೃತಿಯನ್ನೇ ಹಾಳು ಮಾಡುವ ಸರ್ಕಾರಗಳ ಅನೇಕ ನೀತಿಗಳ ವಿರುದ್ಧ ಇಂದಿಗೂ ರೈತರು ಹೋರಾಟಗಳನ್ನು ಕಟ್ಟುತ್ತಲೇ ಇದ್ದಾರೆ. ಆದರೆ, ಇಂದಿಗೂ ಬೆಂಬಲ ಬೆಲೆ ನಿಗದಿಯಾಗುತ್ತಿಲ್ಲ. ಬದಲಿಗೆ ರೈತ ಹೋರಾಟಗಳನ್ನು ದಾರಿ ತಪ್ಪಿಸುವ ಕೆಲಸ ಆಳುವ ಸರ್ಕಾರಗಳು ಮಾಡಿದವು. ಮಾಧ್ಯಮಗಳು ಸಹ ಇದೇ ತಪ್ಪೆಸಗಿದವು ಎಂದು ದೂರಿದರು.ಕೇಂದ್ರ ಜಾರಿಗೊಳಿಸಿದ ಅನೇಕ ಆರ್ಥಿಕ ನೀತಿಗಳಿಂದಾಗಿ ಕೃಷಿ ವಲಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಸ್ವಾಮಿನಾಥನ್ ವರದಿ ಜಾರಿಗೆ ಈವರೆಗೆ ಕ್ರಮ ವಹಿಸಲಾಗಿಲ್ಲ. ಸರ್ಕಾರ ರಚಿಸಿದ ಆಯೋಗ ನೀಡಿದ ವರದಿ ಜಾರಿಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕೃಷಿಗೆ ನೀಡುತ್ತಿದ್ದ ಸಬ್ಸಿಡಿಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಕೆ. ಮಂಜುನಾಥ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ ಉಪನ್ಯಾಸಕ್ಕೆ ಪ್ರತಿಕ್ರಿಯಿಸಿ, ಕೃಷಿ ವಲಯದ ಮೇಲಾಗಿರುವ ಸರ್ಕಾರದ ದಮನಕಾರಿ ನೀತಿಗಳು, ಪ್ರಾಕೃತಿಕ ವಿಕೋಪಗಳು ಹಾಗೂ ಕೃಷಿ ಬಗೆಗಿನ ಜ್ಞಾನದ ಕೊರತೆ ಕುರಿತು ತಿಳಿಸಿದರು.ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ಹುಚ್ಚೂಸಾಬ್ ಪ್ರಾಸ್ತಾವಿಕ ಮಾತನಾಡಿದರು. ಡಾ.ಶೋಭಾರಾಣಿ, ಎನ್.ಗಂಟೆಪ್ಪ ಶೆಟ್ಟಿ, ರಾಮಾಂಜಿನಪ್ಪ, ಡಾ.ಟಿ.ದುರ್ಗಪ್ಪ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ವಿಭಾಗಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೊನೆಯಲ್ಲಿ ಹಿರಿಯ ರೈತ ಹೋರಾಟಗಾರ ಜೆ.ಎಂ. ವೀರಸಂಗಯ್ಯ ಜೊತೆ ಕಾಲೇಜಿನ ವಿದ್ಯಾರ್ಥಿಗಳು ಸಂವಾದಿಸಿದರು.