ಬೂದಿಕೋಟೆಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಿ

| Published : Dec 27 2024, 12:48 AM IST

ಸಾರಾಂಶ

ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿ ಕೇಂದ್ರ ಸ್ಥಾನವಾದ ಬೂದಿಕೋಟೆ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಿಕೊಟ್ಟರೆ ಹೋಬಳಿಯಲ್ಲಿ ವಾಸ ಇರುವ ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ಜನ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ತುಂಬಾ ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನ ಬೂದಿಕೋಟೆ ಕೇಂದ್ರ ಸ್ಥಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಅಂಜಲಿದೇವಿರವರಿಗೆ ಮನವಿ ಪತ್ರ ನೀಡಿದರು.

ಈ ವೇಳೆ ಮಾತನಾಡಿದ ಹೂವರಸನಹಳ್ಳಿ ರಾಜಪ್ಪ ಬೂದಿಕೋಟೆ ಹೋಬಳಿಯು ತಾಲೂಕಿನ ಗಡಿ ಹೋಬಳಿಯಾಗಿದ್ದು, ತಮಿಳುನಾಡು ಗಡಿಗೆ ಹೊಂದಿಕೊಂಡಿದ್ದು ತೀರಾ ಹಿಂದುಳಿದ ಹೋಬಳಿಯಾಗಿದೆ. ಹೋಬಳಿಯ ಗ್ರಾಮಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದಿಳಿದ ವರ್ಗಗಳ ಜನ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ ಎಂದರು.

ಪರಿಶಿಷ್ಟರ ಅಭಿವೃದ್ಧಿಗೆ ಪೂರಕ

ಆದ್ದರಿಂದ ಬೂದಿಕೋಟೆ ಹೋಬಳಿ ಕೇಂದ್ರ ಸ್ಥಾನವಾದ ಬೂದಿಕೋಟೆ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಿಕೊಟ್ಟರೆ ಹೋಬಳಿಯಲ್ಲಿ ವಾಸ ಇರುವ ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ಜನ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ತುಂಬಾ ಅನುಕೂಲವಾಗಲಿದೆ. ಜೊತೆಗೆ ಬೂದಿಕೋಟೆ ಹೋಬಳಿ ಭಾಗದ ದಲಿತರು ಸಾಂಸ್ಕೃತಿಕ, ಶೈಕ್ಷಣಿಕಕ್ಕೆ ಸಂಬಂಧಿಸಿದಂತೆ ಮುಂದುವರಿಯಲು ಹಾಗೂ ವಿಚಾರ ಸಂಕಿರಣಗಳು ಮತ್ತು ಸಭೆ-ಸಮಾರಂಭಗಳನ್ನು ನಡೆಸಿಕೊಳ್ಳಲು ತುಂಬಾ ಅನುಕೂಲವಾಗಲಿದೆ. ಆದ್ದರಿಂದ ಬೂದಿಕೋಟೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸುವಂತೆ ಮನವಿ ಮಾಡಿದರು.

ಈ ವೇಳೆ ಸಂಘಟನೆಯ ತಾಲೂಕು ಸಂಚಾಲಕರಾದ ಹಿರೇಕರಪ್ಪನಹಳ್ಳಿ ರಾಮಪ್ಪ ಸಂಘಟನಾ ಸಂಚಾಲಕರಾದ ಸಿದ್ದನಹಳ್ಳಿ ಯಲ್ಲಯ್ಯ, ಮಾರುತಿ ಪ್ರಸಾದ್ ಎಂ, ಬೂದಿಕೋಟೆ ಮಧುಸೂದನ್, ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕರಾದ ನಾರಾಯಣಪುರ ಕವಿತಾ ಸಂಘಟನಾ ಸಂಚಾಲಕರಾದ ಬಂಗಾರಪೇಟೆ ವಿಜಯಲಕ್ಷ್ಮಿ, ಕತ್ತಿಹಳ್ಳಿ ಪ್ರತಿಭಾ ಖಜಾಂಚಿ ಭಾವರಹಳ್ಳಿ ಸುಕನ್ಯ, ಮುಖಂಡರಾದ ಕೆ ರಾಮಮೂರ್ತಿ, ದೇವಗಾನಹಳ್ಳಿ ವೆಂಕಟೇಶ, ಬೊಯನಹಳ್ಳಿ ವೆಂಕಟಪತಿ ಇದ್ದರು.