ಸಾರಾಂಶ
ದಲಿತರ ಮನೆಯಲ್ಲಿ ಫ್ರಿಡ್ಜ್, ಟಿವಿ, ಬಂಗಾರ ಇಲ್ಲದಿದ್ದರೂ ಬೇಸರ ಪಡಬೇಕಾಗಿಲ್ಲ. ಆದರೆ ಅಂಬೇಡ್ಕರ್ ಪುಸ್ತಕ, ವಿಚಾರಧಾರೆ ಇಟ್ಟುಕೊಳ್ಳಬೇಕು.
ಕಾರವಾರ: ಅಂಬೇಡ್ಕರ್ ಕರೆ ನೀಡಿದ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಸಂದೇಶ ರಾಜ್ಯದ ಮೂಲೆ ಮೂಲೆಯಲ್ಲಿರುವ ದಲಿತರ ಎದೆ ತಲುಪಬೇಕು ಎಂದು ಕರ್ನಾಟಕ ದಲಿತ ಕಲಾ ಮಂಡಳಿ ಸಂಚಾಲಕ ಪಿಚ್ಚಳ್ಳಿ ಶ್ರೀನಿವಾಸ ತಿಳಿಸಿದರು.
ಉತ್ತರ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ವತಿಯಿಂದ ಭಾನುವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಿತರಾಗಿ, ಸಂಘರ್ಷಿತರಾಗಿ, ಸಂಘಟಿತರಾಗಿ ಚಾರಿತ್ರಿಕ ಘೋಷಣೆಗಳ ಶತಮಾನೋತ್ಸವ ಜಾಗೃತಿ ಅಭಿಯಾನ ಹಾಗೂ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಡೀ ಪ್ರಪಂಚವೇ ಇಂದು ಅಂಬೇಡ್ಕರ್ ಕಡೆ ನೋಡುತ್ತಿದೆ. ಆದರೆ ಅಂಬೇಡ್ಕರ್ ಅವರನ್ನು ಅರಿಯಲು 50 ವರ್ಷ ಬೇಕಾಯಿತು. ಮಹಾರಾಷ್ಟ್ರ ಸರ್ಕಾರ ಗಟ್ಟಿ ಮನಸ್ಸು ಮಾಡಿ ಅಂಬೇಡ್ಕರ್ ವಿಚಾರ ದೇಶಕ್ಕೆ ಹಂಚಿದ್ದಕ್ಕೆ ಧನ್ಯವಾದಗಳು ಎಂದರು.ದಲಿತರ ಮನೆಯಲ್ಲಿ ಫ್ರಿಡ್ಜ್, ಟಿವಿ, ಬಂಗಾರ ಇಲ್ಲದಿದ್ದರೂ ಬೇಸರ ಪಡಬೇಕಾಗಿಲ್ಲ. ಆದರೆ ಅಂಬೇಡ್ಕರ್ ಪುಸ್ತಕ, ವಿಚಾರಧಾರೆ ಇಟ್ಟುಕೊಳ್ಳಬೇಕು. ಅವರೇ ನಮಗೆ ಚಿನ್ನ, ವಜ್ರ ಇದ್ದಂತೆ. ಅಂಬೇಡ್ಕರ್ ಇಲ್ಲದೇ ಇದ್ದಿದ್ದರೆ ನಮ್ಮ ಬದುಕು ಇರುತ್ತಿರಲಿಲ್ಲ. ಅವರೇ ನಮ್ಮ ದೇವರಿದ್ದಂತೆ ಎಂದು ಅಭಿಪ್ರಾಯಪಟ್ಟರು.
ದಲಿತ ಚಳವಳಿಯ ಕಿಚ್ಚು ಮುಂದುವರಿಸಬೇಕು. ಇದಕ್ಕೆ ದಲಿತ ನೌಕರರು ಕಣ್ಣಾಗಬೇಕು. ಸಮಾಜದಲ್ಲಿ ಉತ್ತಮವಾಗಿ ಬದುಕಬೇಕಾದರೆ ಅಂಬೇಡ್ಕರ್ ಸಮಾಜಕ್ಕೆ ಕೊಟ್ಟ ಮೂರು ಮುತ್ತಿನ ಸೂತ್ರಗಳಾದ ಶಿಕ್ಷಣ, ಸಂಘಟನೆ, ಹೋರಾಟವನ್ನು ಪಾಲಿಸೋಣ ಎಂದರು.ರಾಜ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನ ರಕ್ಷಣೆಯೇ ನಮ್ಮ ರಕ್ಷಣೆಯಾಗಿದೆ. ಆದರೆ ಇದೇ ಸಂವಿಧಾನದ ಶಕ್ತಿಯಿಂದ ಜನಪ್ರತಿನಿಧಿಯಾಗಿ ಆಯ್ಕೆಯಾದ ಕೆಲವರು ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಎನ್ನುತ್ತಿದ್ದಾರೆ. ಇಡೀ ದೇಶದ ಜನರ ಶ್ರೇಷ್ಠ ಗ್ರಂಥ ಅಂಬೇಡ್ಕರ್ ಬರೆದ ಸಂವಿಧಾನವಾಗಿದೆ ಎಂದರು.ಅಂತಾರಾಷ್ಟ್ರೀಯ ಜಾನಪದ ಕಲಾವಿದ ಸಿ.ಎಂ. ನರಸಿಂಹಮೂರ್ತಿ, ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ನಗರಸಭೆ ಪೌರಾಯುಕ್ತ ಜಗದೀಶ್ ಹುಲಗೆಜ್ಜಿ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಕೆ.ಎನ್. ರವಿಕುಮಾರ, ಸಂಘಟನೆಯ ಅಧ್ಯಕ್ಷ ಜಿ.ಡಿ. ಮನೋಜ್ ಮೊದಲಾದವರು ಇದ್ದರು.