ಮಾರುತಿ ಶಿಡ್ಲಾಪೂರ

ಹಾನಗಲ್ಲ: ಕೇವಲ ಕೃಷಿ ಆಧಾರಿತ ಉದ್ಯೋಗ ಅವಲಂಬನೆಯಲ್ಲಿರುವ ಹಾನಗಲ್ಲ ತಾಲೂಕಿಗೊಂದು ಕೈಗಾರಿಕಾ ಹಬ್ ಸೃಷ್ಟಿಸಬೇಕು, ಉದ್ಯೋಗಾಕಾಂಕ್ಷಿಗಳ ವಲಸೆ ತಪ್ಪಿಸಲು ಇದೊಂದು ಸುವರ್ಣಾವಕಾಶವಾಬೇಕು ಎಂಬ ಒತ್ತಡ ಆರಂಭವಾಗಿದೆ.

ರಾಜ್ಯದಲ್ಲಿಯೇ ಅತಿ ದೊಡ್ಡದಾಗಿರುವ ಹಾನಗಲ್ಲ ತಾಲೂಕಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿಲ್ಲ. ಕೃಷಿಯೂ ಬಹುತೇಕ ಯಂತ್ರಾಧಾರಿತವಾಗುತ್ತಿದೆ. ಬಹುತೇಕ ಸುಶಿಕ್ಷಿತರು ಬೆಂಗಳೂರು ಸೇರಿದಂತೆ ದೊಡ್ಡ ಪಟ್ಟಣಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಹಾನಗಲ್ಲ ತಾಲೂಕಿನಲ್ಲಿಯೇ ಕೈಗಾರಿಕಾ ಹಬ್ ನಿರ್ಮಾಣ ತೀರಾ ಅಗತ್ಯವಿದೆ ಎಂಬ ಬೇಡಿಕೆ ಕೇಳಿ ಬರುತ್ತಿದೆ.

ಹಾನಗಲ್ಲ ತಾಲೂಕಿನಲ್ಲಿ ನೂರಾರು ಎಕರೆ ಸರ್ಕಾರಿ ಜಮೀನು ಒಂದೇ ಕಡೆ ಸಿಗುತ್ತವೆ. ಇಂತಹ ಜಾಗದಲ್ಲಿ ಸಣ್ಣ ಕೈಗಾರಿಕೆಗಳು ಆರಂಭವಾದರೆ ಯುವ ಉದ್ಯೋಗಿಗಳಿಗೆ ಒಳ್ಳೆಯ ಆಸರೆಯಾದೀತು ಎಂಬ ಆಭಿಪ್ರಾಯವಿದೆ.

ಹಾನಗಲ್ಲ ತಾಲೂಕಿನಲ್ಲಿ ಮಾವು, ಶುಂಠಿ, ಭತ್ತ, ಗೋವಿನಜೋಳ, ಸೋಯಾಅವರೆ, ಅಡಕೆ, ಬಾಳೆ, ದ್ವಿದಳ ಧಾನ್ಯ ಹೇರಳವಾಗಿ ಬೆಳೆಯುತ್ತದೆ. ಇದಕ್ಕೆ ಇಲ್ಲಿಯೇ ಮಾರುಕಟ್ಟೆ ನಿರ್ಮಾಣ ಮಾಡಿದರೆ, ಉಪ ಉತ್ಪನ್ನಗಳನ್ನಾಗಿ ಮಾಡಿ ಉತ್ತಮ ಮಾರುಕಟ್ಟೆ ಮಾಡಲು ಸಾಧ್ಯ. ಇತ್ತೀಚೆಗೆ ಇಲ್ಲಿ ಕಾಳುಮೆಣಸು, ಯಾಲಕ್ಕಿ, ಸೂರ್ಯಕಾಂತಿ, ತಾಳೆ ಬೆಳೆಗಳಿಗೂ ಆದ್ಯತೆ ಸಿಗುತ್ತಿದೆ. ಇವನ್ನು ಬಳಸಿಕೊಂಡು ಉದ್ಯಮ ಆರಂಭಿಸಲು ಸಾಧ್ಯ.


ಇಲ್ಲೊಂದು ದೊಡ್ಡ ಪ್ರಮಾಣದ ಗಾರ್ಮೆಂಟ್ ಆಗಬೇಕೆಂಬ ಕನಸು ನನಸಾಗಲಿಲ್ಲ. ಮಾವು ಸಂಸ್ಕರಣ ಘಟಕಕ್ಕೆ ಜಾಗ ಗುರುತಿಸಿ ದಶಕದ ಕಾಲ ಸವೆದಿದೆ. ಇಲ್ಲಿರುವ ಒಂದು ಸಕ್ಕರೆ ಕಾರ್ಖಾನೆ ಹಲವು ದಶಕಗಳ ಹಿಂದೆಯೇ ಮುಚ್ಚಿ ಹೋಗಿದೆ. ಈ ಮೊದಲಿದ್ದ ೨೫-೩೦ ಅಕ್ಕಿಗಿರಣಿಗಳು ಬಂದ್ ಆಗಿ, ಐದಾರು ಉಳಿದಿವೆ. ಹಾನಗಲ್ಲ ತಾಲೂಕಿನಲ್ಲಿ ವಾಣಿಜ್ಯ ವ್ಯಾಪಾರ, ಕೈಗಾರಿಕಾ ಉದ್ದೇಶದಿಂದ ಹೆಜ್ಜೆ ಹಾಕಲು ಅವಕಾಶ ಕಲ್ಪಿಸದಿರುವುದೇ ಹಿನ್ನಡೆಗೆ ಕಾರಣವಾಗಿದೆ.

ತಾಲೂಕಿನಲ್ಲಿ ಹಲವು ಕಡೆ ಇರುವ ಸರ್ಕಾರಿ ಜಾಗಗಳನ್ನು ಕೈಗಾರಿಕೆಗಳಿಗಾಗಿ ಗುರುತಿಸಿ, ಅಲ್ಲಿಯೇ ಹತ್ತಾರು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶವಾದರೆ ಅದೊಂದು ಔದ್ಯೋಗಿಕ ಕ್ರಾಂತಿಯೇ ಆಗಬಲ್ಲದು. ತಾಲೂಕಿನಲ್ಲಿ ನೂರಾರು ಎಂಜಿನಿಯರಿಂಗ್‌ ಓದಿ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಇಂತಹ ಜಾಗಗಳನ್ನು ಕಾನೂನು ಪರಿಧಿಯಲ್ಲಿ ನೀಡುವುದಾದರೆ ತಾಲೂಕನ್ನು ಕೈಗಾರಿಕಾ ಕ್ಷೇತ್ರವನ್ನಾಗಿ ಮಾರ್ಪಡಿಸಲು ಸಾಧ್ಯ ಎಂಬ ಚರ್ಚೆಗಳಿವೆ.

ಈಗಾಗಲೇ ಇಲ್ಲಿ ಸಣ್ಣ ಸಣ್ಣ ನಟ್‌ಬೋಲ್ಟ್‌ ತಯಾರಿಕೆ, ಕಸಬರಗಿ ತಯಾರಿಕೆ, ಉಪ್ಪಿನಕಾಯಿ, ಸಾವಯವ ಗೊಬ್ಬರ, ಬ್ಯಾಗ್, ರೊಟ್ಟಿ-ಚಟ್ನಿ, ಐಸ್‌ಕ್ರೀಮ್, ಅಲ್ಯುಮಿನಿಯಮ್ ಬಾಗಿಲು ಕಿಟಕಿ, ಅಣಬೆ ಬೇಸಾಯ, ಹೈನುಗಾರಿಕೆ, ಅವಲಕ್ಕಿ ಮಂಡಕ್ಕಿ, ರೇಷ್ಮೆ ಕೃಷಿ, ಅಲ್ಯುಮಿನಿಯಮ್ ಫೈಬ್ರಿಕೇಷನ್, ಕಟ್ಟಿಗೆಯ ಬಾಗಿಲು ಕಿಟಕಿ ಸೇರಿದಂತೆ ಹತ್ತು ಹಲವು ಉತ್ಪಾದನೆಗಳು ಯಾವುದೇ ಪ್ರಚಾರವಿಲ್ಲದೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿವೆ. ಇವೆಲ್ಲದಕ್ಕೂ ಕೈಗಾರಿಕಾ ಸ್ವರೂಪ ನೀಡಿದಲ್ಲಿ ಒಂದೆಡೆ ಹೂಡಿಕೆದಾರರಿಗೆ, ಇನ್ನೊಂದೆಡೆ ಉದ್ಯೋಗ ಅರಸುವವರಿಗೂ ಒಳ್ಳೆಯ ಅವಕಾಶ ನೀಡಲು ಸಾಧ್ಯ.

ಯೋಚನೆ ಆವಶ್ಯ: ಹಾನಗಲ್ಲ ತಾಲೂಕಿನಲ್ಲಿ ಮಾನವ ಸಂಪನ್ಮೂಲ ಹಾಗೂ ಬಹಳಷ್ಟು ಕಚ್ಚಾ ಸಾಮಗ್ರಿಗಳ ಲಭ್ಯತೆ ಇರುವುದರಿಂದ ಸರ್ಕಾರಗಳು ಹೂಡಿಕೆದಾರರಿಗೆ ಅವಕಾಶ ನೀಡಿ, ಸೌಲಭ್ಯ ಒದಗಿಸಿದರೆ ಇಲ್ಲಿ ಅತ್ಯುತ್ತಮ ಕೈಗಾರಿಕಾ ಹಬ್ ನಿರ್ಮಾಣ ಸಾಧ್ಯ. ಇದಕ್ಕೆ ಸರ್ಕಾರಗಳ ಇಚ್ಛಾಶಕ್ತಿ ಬೇಕು. ಯುವ ಉದ್ಯೋಗಾಕಾಂಕ್ಷಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಥದ್ದೊಂದು ಯೋಜನೆ ಯೋಚನೆ ತೀರ ಅವಶ್ಯ ಎಂದು ಉದ್ಯಮಿ ರವಿಚಂದ್ರ ಪುರೋಹಿತ ಹೇಳುತ್ತಾರೆ.

ಪ್ರಾಮಾಣಿಕ ಪ್ರಯತ್ನ ಆಗಲಿ: ಕೈಗಾರಿಕೆಗಳ ಮೂಲಕ ಈಗ ಯುವಕರಿಗೆ ಉತ್ತಮ ಉದ್ಯೋಗಾವಕಾಶ ಸಾಧ್ಯ. ಎಲ್ಲ ಮೂಲ ಸೌಕರ್ಯಗಳಿರುವ ಈ ತಾಲೂಕಿನಲ್ಲಿ ಉದ್ಯಮಿಗಳಿಗೆ ಅವಕಾಶ ನೀಡಿದರೆ ಇಲ್ಲಿ ಅತ್ಯುತ್ತಮ ಉದ್ಯೋಗಾವಕಾಶ ಸಾಧ್ಯ. ಇದಕ್ಕಾಗಿ ಹತ್ತಾರು ವರ್ಷಗಳಿಂದ ಯತ್ನ ನಡೆದಿದೆ. ಆದರೆ ಸರ್ಕಾರದ ಮೂಲಕ ಪ್ರಾಮಾಣಿಕ ಕೆಲಸ ಆಗಬೇಕಿದೆ ಎಂದು ಕೃಷಿಕ ವಿಜಯಕುಮಾರ ದೊಡ್ಡಮನಿ ಹೇಳುತ್ತಾರೆ.