ಸಾರಾಂಶ
ತ್ರಿಭಾಷಾ ಸೂತ್ರ, ದ್ವಿಭಾಷಾ ಸೂತ್ರ, ಮಾಧ್ಯಮ ಯಾವುದಿರಬೇಕು ಎನ್ನುವುದು ಸಂಘರ್ಷ ಹುಟ್ಟುಹಾಕಿದೆ. ರಾಜ್ಯದ ಅಧಿಕೃತ ಭಾಷೆಯನ್ನೇ ಎಲ್ಲ ಶಾಲೆಗಳಲ್ಲಿ ಕನ್ನಡ ಪ್ರಥಮವಾಗಿ ಕಲಿಸುವಂತಾಗಬೇಕು
ಹುಬ್ಬಳ್ಳಿ: ಎಲ್ಲ ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸುವಂತೆ ಸುಗ್ರೀವಾಜ್ಞೆ ಹೊರಡಿಸಬೇಕು. ಆಗ ಮಾತ್ರ ಕನ್ನಡ ಮಾಧ್ಯಮದ ಶಾಲೆಗಳು ಉದ್ಧಾರವಾಗುತ್ತವೆ.
ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಹುಬ್ಬಳ್ಳಿ ನಗರ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ ಅವರ ಖಡಕ್ ಮಾತುಗಳು.ತ್ರಿಭಾಷಾ ಸೂತ್ರ, ದ್ವಿಭಾಷಾ ಸೂತ್ರ, ಮಾಧ್ಯಮ ಯಾವುದಿರಬೇಕು ಎನ್ನುವುದು ಸಂಘರ್ಷ ಹುಟ್ಟುಹಾಕಿದೆ. ರಾಜ್ಯದ ಅಧಿಕೃತ ಭಾಷೆಯನ್ನೇ ಎಲ್ಲ ಶಾಲೆಗಳಲ್ಲಿ ಕನ್ನಡ ಪ್ರಥಮವಾಗಿ ಕಲಿಸುವಂತಾಗಬೇಕು. ಎಲ್ಲ ಪ್ರಾದೇಶಿಕ ಸರ್ಕಾರಗಳ ನೀತಿ ಒಂದೇ ಆಗಿರಬೇಕು. ಅಂದರೆ ಮಾತ್ರ ರಾಜ್ಯ ಭಾಷೆಗಳು ಬೆಳೆಯುತ್ತವೆ; ಉಳಿಯುತ್ತವೆ ಎಂದರು.
ವಿವಿಧ ರಾಜ್ಯಗಳಿಂದ ಬಂದು ಇಲ್ಲಿ ನೆಲೆಯೂರಿರುವವರಿಗೆ ಸರ್ಕಾರ ಮತ್ತು ಸ್ವಯಂ ಸೇವಾ ಕನ್ನಡ ಪರ ಸಂಘಟನೆಗಳು ಉಚಿತವಾಗಿ ಕನ್ನಡ ಕಲಿಸುವ ವ್ಯವಸ್ಥೆ ಮಾಡುವುದು ಅವಶ್ಯ. ಕನ್ನಡ ಕಲಿತು ವ್ಯವಹಾರ ಮಾಡುವುದು ಅವರಿಗೂ, ಕನ್ನಡಿಗರಿಗೂ ಅನುಕೂಲ. ಸಂವಿಧಾನದ 351ನೇ ಅನುಚ್ಛೇದದಲ್ಲಿ ಹಿಂದಿ ಭಾಷೆಗೆ ಆದ್ಯತೆ ನೀಡುವ ಅವಕಾಶವಿದ್ದರೂ ಅದು ಹೇರಿಕೆಯ ಮತ್ತು ದಬ್ಬಾಳಿಕೆಯ ರೂಪದಲ್ಲಿ ಜಾರಿಗೆ ಬರಬಾರದಷ್ಟೇ ಎಂದರು.ಕೇವಲ ಕಥೆ, ಕವನ, ಕಾದಂಬರಿ, ಪ್ರಬಂಧ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತಿಗಳು ಹಾಗೂ ವಿಮರ್ಶಕರು ಕಾಲ ಕಳೆಯದೆ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕು. ಸಾಮೂಹಿಕವಾಗಿ ಧ್ವನಿ ಎತ್ತಬೇಕು ಎಂದರು.