ಸಾರಾಂಶ
ಯಲಬುರ್ಗಾ: ಅಂಗನವಾಡಿ ಕೇಂದ್ರದ ಶಾಲಾ ಪೂರ್ವ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದ್ದು, ಪ್ರತಿಯೊಬ್ಬ ಅಂಗನವಾಡಿ ಕೇಂದ್ರದ ಶಿಕ್ಷಕಿಯರು ಗುಣಮಟ್ಟ ಶಿಕ್ಷಣ ನೀಡಬೇಕು. ಅವರ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಕಲ್ಲೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಅಂಗನವಾಡಿ ಮಕ್ಕಳ ಕಲಿಕೆ, ಶಿಸ್ತು, ಸಮವಸ್ತ್ರ ಜತೆಗೆ ಗುಣಮಟ್ಟ ಆಹಾರ ಪೂರೈಕೆಯಾಗುತ್ತಿರುವುದನ್ನು ಗಮನಿಸಿ ಸಂತಸ ವ್ಯಕ್ತಪಡಿಸಿದರು.ಸರ್ಕಾರದ ಯೋಜನೆ ಪ್ರತಿಯೊಂದು ಮಗುವಿಗೆ ತಲುಪುವ ಹಾಗೆ ನೋಡಿಕೊಳ್ಳಬೇಕು. ತಾಲೂಕಿನಲ್ಲಿ ಮಕ್ಕಳಲ್ಲಿ ಪೌಷ್ಟಿಕತೆ ಕೊರತೆ ಆಗದ ಹಾಗೆ ಶಿಕ್ಷಕಿಯರು ಹೆಚ್ಚು ಕಾಳಜಿ ವಹಿಸಬೇಕು. ಆರೋಗ್ಯ ಇಲಾಖೆ ಗರ್ಭಿಣಿಯ ಮೊದಲನೇ ಹಂತದಲ್ಲಿ ಆಕೆಗೆ ವೈದ್ಯರು, ಆಶಾ ಕಾರ್ಯಕರ್ತೆಯರು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಬಾಲ ಕಾರ್ಮಿಕ, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆದು, ಮಕ್ಕಳನ್ನು ರಕ್ಷಿಸಲು ಅಧಿಕಾರಿಗಳು ನಿರಂತರ ತಪಾಸಣೆ ಕೈಗೊಳ್ಳುವ ಜತೆಗೆ ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸಬೇಕು ಎಂದರು.
ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಮಾತನಾಡಿ, ಮಕ್ಕಳಿಗೆ ಸಂವಿಧಾನಾತ್ಮಕವಾಗಿ ಸಿಗುವ ಹಕ್ಕು ದೊರೆಯುವಂತೆ ಮಾಡುವುದು ಎಲ್ಲರ ಕರ್ತವ್ಯ. ಶಾಲೆಯ ಮಕ್ಕಳಿಗೆ, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸೊಳ್ಳೆ ನಿಯಂತ್ರಣ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಬೇಕು. ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ಮಕ್ಕಳ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಹೇಳಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದಪ್ಪ ಮಾಳೆಕೊಪ್ಪ ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪೂರ್ವ ಶಿಕ್ಷಣ ಮಕ್ಕಳಿಗೆ ಮೈಲುಗಲ್ಲುಯಾಗಿದ್ದು, ಮಕ್ಕಳ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಬಿಇಒ ಕೆ.ಟಿ. ನಿಂಗಪ್ಪ, ಪಿಎಸ್‌ಐ ವಿಜಯಪ್ರತಾಪ, ಬಿಸಿಎಂ ಶಿವಶಂಕರ ಕರಡಕಲ್, ಅಕ್ಷರ ದಾಸೋಹ ಅಧಿಕಾರಿ ಎಂ.ಎಫ್. ಕಳ್ಳಿ, ಪಿಡಿಒ ರೇಣುಕಾ, ಮೇಲಿಚಾರಕರಾದ ಸವಿತಾ ಆರೇರ, ಅಶೋಕಗೌಡ್ರ, ಪ್ರಭಾರಿ ಆರೋಗ್ಯ ಇಲಾಖೆ ಅಧಿಕಾರಿ ಡಾ. ಅಂಬರೀಶ್ ನರೇಗಲ್ ಇದ್ದರು.