ಸಾರಾಂಶ
ಹಗರಿಬೊಮ್ಮನಹಳ್ಳಿ ಪಟ್ಟಣದ ವಿಶ್ವಕರ್ಮ ಭವನದಲ್ಲಿ ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಪ್ರಥಮ ಆಶಾ ಕಾರ್ಯಕರ್ತೆಯರ ತಾಲೂಕು ಸಮ್ಮೇಳನ ನಡೆಯಿತು.
ಹಗರಿಬೊಮ್ಮನಹಳ್ಳಿ: ಪಟ್ಟಣದ ವಿಶ್ವಕರ್ಮ ಭವನದಲ್ಲಿ ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಪ್ರಥಮ ಆಶಾ ಕಾರ್ಯಕರ್ತೆಯರ ತಾಲೂಕು ಸಮ್ಮೇಳನ ನಡೆಯಿತು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಡಾ. ಪ್ರಮೋದ ಮಾತನಾಡಿ, ಆಶಾ ಕಾರ್ಯಕರ್ತೆಯರ ಜೀವನ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ. ಆಶಾ ಕಾರ್ಯಕರ್ತೆಯರಿಗೆ ಏನೇ ಬಿರುದು, ಸನ್ಮಾನ ಲಭಿಸಿದರೂ ಅತ್ಯಂತ ಕನಿಷ್ಠ ವೇತನಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ಪ್ರೋತ್ಸಾಹಧನದ ಹೆಸರಲ್ಲಿ ಅವರ ಶೋಷಣೆ ನಿತ್ಯ ನಿರಂತರವಾಗಿ ನಡೆಯುತ್ತಿದೆ. ೧೦-೧೫ ವರ್ಷಗಳಿಂದ ದುಡಿಯುತ್ತಿದ್ದರೂ, ಸರ್ಕಾರ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ತಯಾರಿಲ್ಲ. ಕನಿಷ್ಠಪಕ್ಷ ಕಾರ್ಮಿಕರೆಂದೂ ಪರಿಗಣಿಸಲು ಸಹ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇವರು ಜೀವನಪೂರ್ತಿ ಅಭದ್ರತೆಯಲ್ಲಿ ಜೀವನ ಕಳೆಯುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯೆ ಎ. ಶಾಂತಾ ಮಾತನಾಡಿ, ಎಲ್ಲ ಸರ್ಕಾರಗಳು ಕಾರ್ಮಿಕರ ಹಿತವನ್ನು ಬಲಿಕೊಟ್ಟು ದೊಡ್ಡ ದೊಡ್ಡ ಉದ್ಯಮಪತಿಗಳ ಸೇವೆ ಮಾಡುತ್ತಾ ಬಂದಿವೆ. ಹೋರಾಟದಿಂದ ಗಳಿಸಿಕೊಂಡ ಎಲ್ಲ ಕಾರ್ಮಿಕ ಹಕ್ಕುಗಳನ್ನು ಒಂದೊಂದಾಗಿ ಕಿತ್ತುಕೊಳ್ಳುತ್ತಾ, ಕಾರ್ಮಿಕರ ಹಾಗೂ ದುಡಿಯುವ ಜನರ ಬದುಕನ್ನು ಮೂರಾಬಟ್ಟೆ ಮಾಡಿವೆ ಎಂದರು.
ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಕೆ.ಎಸ್. ಗೌರಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಜುಳಾ, ಅನ್ನಪೂರ್ಣಾ, ನಾಗರತ್ನಾ, ಕೆ.ಎಂ. ಪ್ರತಿಭಾ, ಗಂಗಮ್ಮ, ಮಧುಮಾಲತಿ, ಎಚ್. ಮಂಜುಳಾ ಇತರರಿದ್ದರು. ಜಯಲಕ್ಷ್ಮೀ, ಲಕ್ಷ್ಮೀದೇವಿ ಕಾರ್ಯಕ್ರಮ ನಿರ್ವಹಿಸಿದರು.