ಸಾರಾಂಶ
ಗದಗ: ಬಡ ಜನರು ಆರ್ಥಿಕವಾಗಿ ಸ್ವಾವಲಂಬನೆ ಬದುಕು ನಡೆಸಲು ಬ್ಯಾಂಕ್‌ಗಳು ಸಹಕಾರಿಯಾಗಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಜರುಗಿದ ಲೀಡ್ ಬ್ಯಾಂಕ್‌ನ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರದಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳ ಆರ್ಥಿಕ ಸೌಲಭ್ಯ ಬ್ಯಾಂಕ್‌ಗಳ ಮುಖಾಂತರ ನಿಗದಿತ ಕಾಲ ಮಿತಿಯಲ್ಲಿಯೇ ದೊರಕಿಸಿದರೆ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಬಡ ಜನರು ಹಾಗೂ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ನವರ ಸರಿಯಾದ ಮಾರ್ಗದರ್ಶನ, ಸಹಕಾರ ಅಗತ್ಯವಾಗಿದೆ. ಬ್ಯಾಂಕ್ ವಿಶ್ವಾಸಾರ್ಹತೆ ಹೆಚ್ಚಾಗುವ ರೀತಿಯಲ್ಲಿ ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಡೆದುಕೊಳ್ಳಬೇಕು. ಗದಗ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ರೈತರಿಗೆ ಸಾಲ ನೀಡುವಾಗ ವಿನಾ ಕಾರಣ ವಿಳಂಬ ಮಾಡಬಾರದು. ಜಿಲ್ಲೆಯಲ್ಲಿ ಕೈಮಗ್ಗ ಮತ್ತು ಜವಳಿ ಉದ್ದಿಮೆಗಳಿಗೆ ಹೆಚ್ಚು ಪ್ರೊತ್ಸಾಹಿಸಬೇಕು. ಕೈಮಗ್ಗದ ಉದ್ದಿಮೆದಾರರ ಸಭೆ ಕೈಗೊಂಡು ಕೈಮಗ್ಗ ಮತ್ತು ಜವಳಿ ಉದ್ದಿಮೆಗಳ ಪರಿಣಾಮಕಾರಿ ಅಭಿವೃದ್ಧಿಗೆ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಬೇಕು. ಬ್ಯಾಂಕ್ ನವರು ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಿದರೆ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ನಿರ್ದೇಶನ ನೀಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್.ಎಂ.ವಿ. ಮಾತನಾಡಿ, ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್‌ನ 182 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಎಚ್‌ಡಿಎಫ್‌ಸಿಯ ಹೊಸ ಶಾಖೆಗಳು ಜಿಲ್ಲೆಯ ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ ಹಾಗೂ ನರಗುಂದದಲ್ಲಿ ತೆರೆಯಲಾಗಿದೆ. ಜಿಲ್ಲೆಯ ಸಾಲ ಠೇವಣಿ ಅನುಪಾತ 95.94 % ಆಗಿರುತ್ತದೆ. ಎಲ್ಲ ಬ್ಯಾಂಕಿನ ನಿಯಂತ್ರಣಾಧಿಕಾರಿಗಳು ಸಾಲ ಠೇವಣಿ ಅನುಪಾತ ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ.ಜಿಲ್ಲೆಯಲ್ಲಿ ಪ್ರಸಕ್ತ ವಾರ್ಷಿಕ ಸಾಲ ಯೋಜನೆಯಡಿ 30-6-2024 ರವರೆಗೆ ಕೃಷಿ ಸೇರಿದಂತೆ ಆದ್ಯತಾ ವಲಯಕ್ಕೆ ₹120832.31 ಲಕ್ಷ ಸಾಲ ನೀಡಿಕೆಯಾಗಿದೆ. ತಾಲೂಕಾವಾರು (ಲಕ್ಷ ಗಳಲ್ಲಿ) ಗದಗ –55973.08, ಗಜೇಂದ್ರಗಡ-5934.98, ಲಕ್ಷ್ಮೇಶ್ವರ–5984.74, ಮುಂಡರಗಿ-9553.72, ನರಗುಂದ-15252.8, ರೋಣ-19416.65, ಶಿರಹಟ್ಟಿ- 8716.34 ಸಾಲ ನೀಡಿಕೆಯಾಗಿದೆ.
ಜಿಲ್ಲೆಯಲ್ಲಿ 2024ರ ಜೂನ್ ಅಂತ್ಯದವರೆಗೆ ಮುದ್ರಾ ಸಾಲ ಯೋಜನೆಯಡಿ ಶಿಶು ಯೋಜನೆಯಲ್ಲಿ 50116 ಅರ್ಜಿಗಳು ಸ್ವೀಕರಿಸಿ ₹10936.72 ಲಕ್ಷ, ಕಿಶೋರ ಯೋಜನೆಯಡಿ 34032 ಅರ್ಜಿಗಳು ಸ್ವೀಕರಿಸಿ ₹33850.85 ಲಕ್ಷ ಹಾಗೂ ತರುಣ ಯೋಜನೆಯಡಿ 1532 ಅರ್ಜಿಗಳನ್ನು ಸ್ವೀಕರಿಸಿ ₹9395.20 ಲಕ್ಷ ವಿತರಿಸಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಉದ್ಯೊಗಿನಿ, ಪಿಎಂಇಜಿಪಿ (ಪ್ರೈಮ್ ಮಿನಿಸ್ಟರ್ ಎಂಪ್ಲಾಯಮೆಂಟ್ ಜನರೇಶನ್ ಪ್ರೋಗ್ರಾಮ್ ), ಪಿಎಂ ಸ್ವನಿಧಿ, ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಭರತ್.ಎಸ್., ನಬಾರ್ಡದ ಎಜಿಎಂ ಮಹಾದೇವ ಕೀರ್ತಿ, ಆರ್‌ಬಿಐದ ವೆಂಕಟರಾಮಯ್ಯ. ಟಿ.ಎಸ್, ನಾಗಸುಬ್ಬಾ ರೆಡ್ಡಿ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು ಇದ್ದರು.