ಮನೆಮನೆಗಳಲ್ಲಿ ಭಗವದ್ಗೀತೆ ಅಧ್ಯಯನ ನಡೆಯಲಿ

| Published : Nov 30 2024, 12:46 AM IST

ಸಾರಾಂಶ

ಪಿಂಜಾರ ಕಾಲೋನಿಯಲ್ಲಿರುವ ಬಿ.ಎಸ್.ಸೆಂಟ್ರಲ್ ಶಾಲೆಯಲ್ಲಿ ಭಗವದ್ಗೀತಾ ಶ್ಲೋಕ ಪಠಣಕೇಂದ್ರದಲ್ಲಿ ನಿವೃತ್ತದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಇಡೀ ವಿಶ್ವದಲ್ಲಿಯೇ ಭಗವದ್ಗೀತೆ ಅತ್ಯಂತ ಶ್ರೇಷ್ಠವಾಗಿದೆ. ಇದರಿಂದ ಮನುಷ್ಯ ಮಾನವೀಯ ಮೌಲ್ಯಗಳನ್ನು ಬಿತ್ತುವ ಮತ್ತು ಸನ್ಮಾರ್ಗದ ಜೀವನಕ್ಕೆ ಅಡಿಪಾಯ ಹಾಕಬಹುದು. ಈ ಹಿನ್ನೆಲೆಯಲ್ಲಿ ಸಾರ್ವತ್ರಿಕವಾಗಿ ಪ್ರತಿಯೊಬ್ಬರ ಮನೆಮನೆಗಳಲ್ಲಿ ಭಗವದ್ಗೀತೆ ಕುರಿತು ಅಧ್ಯಯನ ನಡೆಯಬೇಕಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಆಶಯ ವ್ಯಕ್ತಪಡಿಸಿದರು.

ಪಟ್ಟಣದ ಪಿಂಜಾರ ಕಾಲೋನಿಯಲ್ಲಿರುವ ಬಿ.ಎಸ್.ಸೆಂಟ್ರಲ್ ಶಾಲೆಯಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಯತಿವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-2024 ಸಂಬಂಧಿ ಶ್ಲೋಕ ಪಠಣಕೇಂದ್ರದಲ್ಲಿ ಮಾತನಾಡಿದರು.

ಅಧರ್ಮಕ್ಕೆ ಸಂಖ್ಯೆ ಜಾಸ್ತಿಯಿದ್ದರೂ ಜಯಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆಉತ್ತಮ ನಿದರ್ಶನಗಳೆಂದರೆ ಕೌರವರೆ. ಕಡಿಮೆ ಸಂಖ್ಯೆ ಹೊಂದಿದ್ದ ಪಾಂಡವರು ನ್ಯಾಯದ ಮಾರ್ಗದಲ್ಲಿ ನಡೆದುಕೊಂಡಿದ್ದರಿಂದ ಗೆಲುವು ಸಾಧಿಸಲು ಸಾಧ್ಯವಾಯಿತು. ಮಹಾಭಾರತದ ಕಥೆ ಇಂದಿಗೂ ಜೀವಂತವಾಗಿರಲು ಅದರ ಆದರ್ಶವೇ ಕಾರಣವಾಗಿದೆ. ಆದರ್ಶಗಳನ್ನು ಅರಿತು ಬದುಕಬೇಕಿದೆ ಎಂದು ಹೇಳಿದರು.

ಪ್ರಾಚಾರ್ಯ ರುತು. ಆರ್‌ ಮಾತನಾಡಿ, ನೈತಿಕತೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾಗಿದೆ. ಯಾವಾಗಲೂ ಉತ್ತಮ ಮಾತುಗಳನ್ನೇ ಕೇಳುತ್ತಾ, ಉತ್ತಮ ವಿಚಾರವನ್ನೇ ಆಲಿಸಿ, ಚಿಂತಿಸಿ, ಅನುಸರಿಸಿ ನಡೆದಲ್ಲಿ ಮಾತ್ರ ಬದುಕು ಉಜ್ವಲವಾಗಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಉಪಾಧ್ಯಕ್ಷ ಬಿ.ಪಿ.ಕುಲಕರ್ಣಿ, ಶಿಕ್ಷಕ ಸಾವಿತ್ರಿ ಅಂಬಿಗೇರ, ಶಿವಕುಮಾರ ಸಾರದಳ್ಳಿ, ಸವಿತಾ ರಾಠೋಡ, ವಿದ್ಯಾ ಅಮಾಸೆಗೌಡರ್, ಶಶಿಕಲಾ ರಾಮವಡಗಿ, ಲಕ್ಷ್ಮೀ ಬೋಳಶೆಟ್ಟಿ, ರಂಜಿತಾ ಹೆಗಡೆ, ಸಂಚಾಲಕ ರಾಮಚಂದ್ರ ಹೆಗಡೆ ಸೇರಿದಂತೆ ಇತರರು ಹಾಜರಿದ್ದರು.