ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭದ್ರಾವತಿ ಘಟನೆಯನ್ನು ಬಿಜೆಪಿಯ ನಾಯಕರು ಸದನದಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಭದ್ರಾವತಿಯಲ್ಲಿ ಗೂಂಡಾಗಿರಿ ನಡೆದಿದೆ ಎಂದು ಸದನದಲ್ಲಿ ಶಾಸಕ ಸಂಗಮೇಶ್ ಅವರಿಗೆ ತೇಜೋವಧೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿಯ ಬಿಜೆಪಿಯ ಕಾರ್ಯಕರ್ತ ಗೋಕುಲ್ ಕೃಷ್ಣನ ಗೂಂಡಾ ವರ್ತನೆಯನ್ನು ಪ್ರಶ್ನೆ ಮಾಡದೇ ಆತನ ಪರವಾಗಿ ಸದನದಲ್ಲಿ ಬಿಜೆಪಿ ನಾಯಕರು ಚರ್ಚೆ ಮಾಡುತ್ತಿದ್ದಾರೆ. ನಮ್ಮ ಬಳಿ ಗೋಕುಲ ಕೃಷ್ಣ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ನಮ್ಮ ಪಕ್ಷದ ಹಿರಿಯ ನಾಯಕ ಕುಮಾರ್ ಅವರಿಗೆ ಫೋನ್ ಮಾಡಿ ಅವಾಚ್ಯವಾಗಿ ಮಾತನಾಡಿದ್ದಾನೆ. ಇದರ ಆಡಿಯೋ ನಮ್ಮ ಬಳಿ ಇದೆ. ಈ ಆಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಸದನದಲ್ಲಿ ಪ್ರಸಾರ ಮಾಡುತ್ತಾರಾ ಎಂದು ಸವಾಲೆಸೆದರು.
ಬಿಜೆಪಿ ಕಾರ್ಯಕರ್ತ ಗೋಕುಲ್ ಕಾಂಗ್ರೆಸ್ ಮುಖಂಡರಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಗೂಂಡಾಗಿರಿ ನಡೆಸಿದ್ದಾನೆ. ಅಲ್ಲದೇ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾನೆ .ಇತಂಹ ವ್ಯಕ್ತಿ ಪರವಾಗಿ ಬಿಜೆಪಿ ಪಕ್ಷದ ನಡೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.ಶಿವಮೊಗ್ಗ ಜಿಲ್ಲೆಯಲ್ಲಿ ಗೊಂದಲಗಳಾಗಬೇಕೆಂದು ಹೀಗೆ ಮಾಡುತ್ತಾರೆ. ಎಂಪಿಎಂ ಪ್ರಾರಂಭ ಮಾಡುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಈಗಾಗಲೇ ಬೃಹತ್ ಕೈಗಾರಿಕಾ ಸಚಿವರೊಂದಿಗೆ ಮಾತುಕತೆ ನಡೆದಿದೆ. ಶಿವಮೊಗ್ಗದಲ್ಲಿ ಗಲಾಟೆ ಮಾಡುವ ಪ್ರಯತ್ನಗಳು ವಿಫಲವಾದವು. ರಾಗಿಗುಡ್ಡದ ಪ್ರಕರಣ ಇಟ್ಟುಕೊಂಡು ಏನೇನೋ ಮಾಡಿದರು. ಚುನಾವಣೆಯಲ್ಲಿ ಹಿನ್ನೆಲೆ ಈ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಹೇಳಿದರು.
ಗೋಕುಲ್ ಮಾತನಾಡಿರುವ ಆಡಿಯೋ ಪ್ರಸ್ತಾವನೆ ಮಾಡಿ ಬಿಜೆಪಿಯವರು ಮಾತಾಡಲಿ. ಪುಂಡಪೋಕರಿಗಳನ್ನು ಪೋಷಿಸಬಾರದು. ಬಿಜೆಪಿಯವರ ನಡೆಯನ್ನು ಕಾಂಗ್ರೆಸ್ ಖಂಡಿಸುತ್ತೇವೆ. ಶಾಸಕ ಸಂಗಮೇಶ್ ಮೇಲೆ ಮಾಡುವ ತೇಜೋವಧೆಯನ್ನು ನಿಲ್ಲಿಸಬೇಕು. ಸಂಗಮೇಶ್ ಅವರನ್ನು ಸೋಲಿಸಲಾಗದೇ ಹೀಗೆ ಆರೋಪ ಮಾಡುತ್ತಿದ್ದಾರೆ ಎಂದು ಕುಟುಕಿದರು.- - - -14ಎಸ್‌ಎಂಜಿಕೆಪಿ03: ಆಯನೂರು ಮಂಜುನಾಥ್