ವ್ಯಸನ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳ ಧ್ಯೇಯವಾಗಲಿ: ಕಲ್ಲಪ್ಪಣ್ಣ ಸಬರದ

| Published : Jan 02 2024, 02:15 AM IST

ವ್ಯಸನ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳ ಧ್ಯೇಯವಾಗಲಿ: ಕಲ್ಲಪ್ಪಣ್ಣ ಸಬರದ
Share this Article
  • FB
  • TW
  • Linkdin
  • Email

ಸಾರಾಂಶ

ಮುಧೋಳ: ಹಿರಿಯ ನಾಗರಿಕರ ವೇದಿಕೆ, ವಚನ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಹಾಗೂ ಎಂ.ಕೆ. ಕಾಲೇಜು ವತಿಯಿಂದ ಸೋಮವಾರ ಎಂ.ಕೆ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಜರುಗಿತು. ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ ಮಾತನಾಡಿ, ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ, ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಲಿದೆ ಎಂದರು.

ಕನ್ನಡ ಪ್ರಭ ವಾರ್ತೆ ಮುಧೋಳ

ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ, ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಲಿದೆ ಎಂದು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ ಹೇಳಿದರು.

ಹಿರಿಯ ನಾಗರಿಕರ ವೇದಿಕೆ, ವಚನ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಹಾಗೂ ಎಂ.ಕೆ. ಕಾಲೇಜು ವತಿಯಿಂದ ಸೋಮವಾರ ಎಂ.ಕೆ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಶರೀರದಲ್ಲಿ ಸಾಕಷ್ಟು ದುಷ್ಟಪರಿಣಾಮ ಬೀರಲಿದೆ. ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ತೊಡಗುವ ಮದ್ಯ ಅಥವಾ ಕಡಿಮೆ ಬೆಲೆಗೆ ಸಿಗುವ ಪಾನ್ ವಸ್ತುಗಳ ಸೇವನೆ ಕೊನೆಗೆ ಮಾರಕ ಗಾಂಜಾ, ಅಫೀಮು, ಕೊಕೇನ್ ದಾಸರನ್ನಾಗಿಸುತ್ತದೆ, ಮೆದುಳಿನಲ್ಲಿ ಬದಲಾವಣೆ ತಂದು ಇನ್ನಷ್ಟು ಸೇವಿಸುವಂತೆ ಪ್ರೇರೇಪಿಸಿ ಕೊನೆಗೆ ವ್ಯಸನಿಗಳನ್ನಾಗಿಸುತ್ತದೆ, ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವ ವ್ಯಸನ ಅಪಘಾತಗಳಿಗೂ ಕಾರಣವಾಗುವುದು ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ಸಿದ್ದು ದಿವಾಣ ಮಾತನಾಡಿ ಮಾದಕ ವಸ್ತುಗಳನ್ನು ಬಳಸುತ್ತಿರುವವರಿಗೆ ಅವುಗಳ ಮಾರಕ ಪರಿಣಾಮದ ಕುರಿತು ತಿಳಿವಳಿಕೆ ನೀಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮುಂದಾಗಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಎನ್.ಬಿ.ಮುರಗೋಡ ಮಾತನಾಡಿ, ಅಮಲು ಪದಾರ್ಥ ಸೇವನೆ ಇಂದಿನ ಯುವ ಜನಾಂಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕ ಮೂಡಿಸುತ್ತಿದ್ದು, ಅಮಲು ಸೇವನೆ ಒಂದು ರೀತಿಯ ಫ್ಯಾಷನ್ ಎಂಬುದಾಗಿ ತಿಳಿದ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗಿ ನಿರಂತರ ಉಪಯೋಗ ಮಾಡುತ್ತಿದ್ದಾರೆ. ತಿಳಿವಳಿಕೆ, ತರಗತಿ ಆಯೋಜನೆಯಿಂದ ಜಾಗೃತಿ ಮೂಡಿಸಲು ಸಾಧ್ಯ, ಜೀವನದ ಗುರಿ ಹಾಗೂ ಹಾದಿ ತಪ್ಪಿಸುವ ಮಾದಕ ವ್ಯಸನ ಹಾಗೂ ವ್ಯಸನಿಗಳಿಂದ ದೂರವಿದ್ದು, ಉತ್ತಮ ಹವ್ಯಾಸ ಬೆಳೆಸಿ ಉತ್ತಮ ಭವಿಷ್ಯ ರೂಪಿಸುವಂತೆ ಕರೆ ನೀಡಿದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ ಪಸಾರ ಮಾತನಾಡಿ, ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನವಾದ ಆಗಸ್ಟ್ 1ರಂದು ರಾಜ್ಯ ಸರ್ಕಾರ ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತಿದೆ, ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಸಾರ್ವಜನಿಕರು ಹಾಗೂ ಯುವ ಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆ ಪ್ರೇರಣೆಯಾಗಲಿದೆ ಎಂದರು.

ನಿವೃತ್ತ ಪ್ರಾದ್ಯಾಪಕ ಡಾ.ವಿ.ಎಚ್. ಮೂಲಿಮನಿ ಮಾತನಾಡಿ, ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ಯಾವ್ಯಾವ ತೊಂದರೆಗಳಾಗಲಿವೆ ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು.

ಎಂ.ಕೆ.ಕಾಲೇಜಿನ ಸಂಸ್ಥಾಪಕ ಪ್ರಲ್ಹಾದ ಕುಮಕಾಲೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ.ವಿಶ್ವನಾಥ ಮುನವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಆನಂದ ಡೋಣಿ ನಿರೂಪಿಸಿದರು. ಭೀಮಶಿ ಇಂಗಳೆ ಸ್ವಾಗತಿಸಿದರು. ಎಸ್.ಎಸ್. ಘಂಟಿಮಠ ಪರಿಚಯಿಸಿದರು. ಪರಸು ರಡ್ಯಾರೆಟ್ಟಿ ವಂದಿಸಿದರು. ಕೆ.ಜಿ.ವಂದಾಲ ಪ್ರಾರ್ಥಿಸಿದರು.