ಸಿಮೆಂಟ್‌ ರ್ಖಾನೆಗಳು ಕನ್ನಡ ಶಾಲೆ ದತ್ತು ಪಡೆಯಲಿ: ಡಾ.ಭಾಸ್ಕರ್‌

| Published : Feb 27 2024, 01:35 AM IST

ಸಿಮೆಂಟ್‌ ರ್ಖಾನೆಗಳು ಕನ್ನಡ ಶಾಲೆ ದತ್ತು ಪಡೆಯಲಿ: ಡಾ.ಭಾಸ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯಲ್ಲಿನ ಸಿಮೆಂಟ್‌ ಕಾರ್ಖಾನೆಗಳು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಲಿ ಎಂದು ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ.ಭಾಸ್ಕರ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಸುಣ್ಣದ ಕಲ್ಲಿನ ನಾಡು ಕಲಬುರಗಿಯಲ್ಲಿ ನೆಲೆಯೂರಿರುವ ಸಿಮೆಂಟ್ ಕಾರ್ಖಾನೆಗಳು ಇಲ್ಲಿನ ನೀರು, ಗಾಳಿ ಬಳಸಿ ಲಾಭ ಮಾಡಿಕೊಳ್ಳುತ್ತಿವೆ. ಇವು ತಮ್ಮ ಲಾಭದಲ್ಲಿ ಈ ನೆಲ ಮಾತೃಭಾಷೆ ಕನ್ನಡ ಶಾಲೆಗಳನ್ನು ದತ್ತು ಪಡೆದು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ.ಭಾಸ್ಕರ್ ಕರೆ ನೀಡಿದ್ದಾರೆ.

ಕಲಬುರಗಿ ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ವೇದಿಕೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಕಲಬುರಗಿ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಖಾನೆಯವರು ಶಾಲೆ ದತ್ತು ಪಡೆಯಲು ಸಾಧ್ಯವಾಗದಿದ್ದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಿ. ಇದಕ್ಕೆಂದೆ ಕಾರ್ಪಸ್ ಫಂಡ್ ಮೀಸಲಿರಿಸಬೇಕು. ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡುವ ಮೂಲಕ ಪ್ರದೇಶದ ಅಭಿವೃದ್ಧಿಗೂ ಕಂಪನಿಗಳು ಮುಂದಾಗಬೇಕೆಂಬುದು ತಮ್ಮ ಬಯಕೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸ್ವಂತ ಕಟ್ಟಡದಲ್ಲಿ ಕನ್ನಡ ಶಾಲೆ ತೆರೆಯುವ ಮೂಲಕ ಕನ್ನಡ ಉಳಿಸುವ ಕೆಲಸ ಮಾಡಬೇಕು. ಸಾಹಿತ್ಯ ಭವನಗಳು ಸದಾ ಕ್ರಿಯಾಶೀಲವಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಬೇಕೆಂದು ಆಶಯ ವ್ಯಕ್ತಪಡಿಸಿದ ಸಮ್ಮೇಳನಾಧ್ಯಕ್ಷರು, ಈ ಭಾಗಕ್ಕೆ ನೀಡಲಾದ 371ಜೆ ಪರಿಣಾಮಕಾರಿ ಅನುಷ್ಠಾನವಾಗಬೇಕು ಮತ್ತು ಇದರ ಲಾಭ ಜನ ಹೆಚ್ಚು ಪಡೆಯಬೇಕು ಎಂದರು.

ತೊಗರಿ ಬೆಳೆಗೆ ಗಂಗಾ ಕಲ್ಯಾಣ ನೀಡಿ:

ಜಿಲ್ಲೆಯಲ್ಲಿ ರೈತರು ತೊಗರಿಯನ್ನೆ ಹೆಚ್ಚು ನಂಬಿದ್ದಾರೆ. ಹೀಗಾಗಿ ಸರ್ಕಾರವು ತೊಗರಿ ಬೆಳೆಯುವ ಎಲ್ಲಾ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸಬೇಕು. ಅಲ್ಲಲ್ಲಿ ನದಿಗಳಿಗೆ ಚೆಕ್ ಡ್ಯಾಂ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

371ಜೆ ಬಗ್ಗೆ ಅಸಹನೆ ಬೇಡ: ಹಿರಿಯ ಸಾಹಿತಿ ಪ್ರೊ. ರಾಜಪ್ಪ ಧಳವಾಯಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಂವಿಧಾನಬದ್ಧವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ದೊರೆತ 371(ಜೆ) ಮೀಸಲು ಬಗ್ಗೆ ಇತರೆ ಭಾಗದಲ್ಲಿ ಅಸಹನೆ ಇದೆ. ಇದು ಸರಿಯಲ್ಲ. ಹಿಂದುಳಿದ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೀಸಲು ಪೂರಕವಾಗಿದೆ. ಇದಕ್ಕೆ ಕಾರಣೀಕರ್ತರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥೆ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್.ಅಪ್ಪಾ ಮಾತನಾಡಿ, ಕಲಬುರಗಿ ಸಾಹಿತ್ಯದ ಗಣಿಯಾಗಿದೆ. ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು ಮಾನವನಲ್ಲಿ ಧಾರ್ಮಿಕ ಸಂಸ್ಕಾರ ಹುಟ್ಟು ಹಾಕಿದರೆ, ನುಡಿ ಜಾತ್ರೆ ಮಾತೃ ಭಾಷೆ, ನಾಡಿನ ಸಾಹಿತ್ಯದ ಸಂಸ್ಕಾರ ತಿಳಿಸುತ್ತದೆ ಎಂದ ಅವರು ವಿಜಯಕುಮಾರ ತೇಗಲತಿಪ್ಪ ಅವರ ಸಾರಥ್ಯದಲ್ಲಿ ಕಲಬುರಗಿಯನ್ನು ಸಾಂಸ್ಕೃತಿಕ ಜಿಲ್ಲೆ ಮಾಡಲು ಹೊರಟಿದ್ದು ಸಂತಸದ ವಿಚಾರ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಕಲ್ಯಾಣರಾವ ಜಿ. ಪಾಟೀಲ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಷಕುಮಾರ ಹೊಸಮನಿ ಅವರು ಸಹ ಮಾತನಾಡಿದರು.

ಇದಕ್ಕು ಮುನ್ನ ರಾಷ್ಟ್ರಧ್ವಜ ಮತ್ತು ನಾಡ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮತ್ತು ತಾಲೂಕು ಕಸಾಪ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಪರಿಷತ್ ಧ್ವಜಾರೋಹಣ ಮಾಡಿದರು.

ಊಟಕ್ಕೆ ಪಲಾವ್, ಮಜ್ಜಿಗೆ: ಎರಡು ದಿನಗಳ ಸಾಹಿತ್ಯ ಸಮ್ಮೇಳನಕ್ಕೆ ಬರುವ ಕನ್ನಡ ಆಸಕ್ತರಿಗೆ ಉಣಬಡಿಸಲು ಪಲಾವ್, ಮಜ್ಜಿಗೆ, ಹುಗ್ಗಿ ವ್ಯವಸ್ಥೆ ಮಾಡಲಾಗಿದೆ.

ವರ್ಣರಂಜಿತ ಮೆರವಣಿಗೆ:

ಇದಕ್ಕು ಮುನ್ನ ಎರಡು ದಿನ ಸಮ್ಮೇಳನದ ವರ್ಣರಂಜಿತ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರರಾದ ವಿಶಾಲ ಎಸ್. ಧರ್ಗಿ ಅವರು ಚಾಲನೆ ನೀಡಿದರು. ಮೆರವಣಿಗೆ ಡಾ. ಎಸ್.ಎಂ.ಪಂಡಿತ್ ರಂಗಮಂದಿರವರೆಗೆ ಸಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದತ್ತಪ್ಪ ಸಾಗನೂರ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಡಾಕಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ್ಯ ರಾಜು ಲೇಂಗಟಿ, ಕಸಾಪದ ಯಶವಂತರಾಯ ಅಷ್ಟಗಿ, ಶಿವರಾಜ ಅಂಡಗಿ, ಸಿದ್ಧಣ್ಣ ಬಾಳಿ ಸೇರಿದಂತೆ ಸಾವಿರಾರು ಕನ್ನಡಾಭಿಮಾನಿಗಳು ನುಡಿ ತೇರಿನ ಜಾತ್ರೆಗೆ ಸಾಕ್ಷಿಯಾದರು.

ಸಂಕಥನ ಸೇರಿ 5 ಕೃತಿ ಬಿಡುಗಡೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಧರ್ಮಣ್ಣ ಧನ್ನಿ ಅವರ ಸಂಪಾದಕತ್ವದಲ್ಲಿ ಮೂಡಿಬಂದ ಸಂಕಲನ, ಲೇಖಕ ಸಿ.ಎಸ್.ಆನಂದ ಅವರ ಮಾವು ಮಲ್ಲಿಗೆ (ದ್ವಿಪದಿಗಳ ಸಂಕಲನ), ಪ್ರಾಧ್ಯಾಪಕ ಡಾ. ಬಸವರಾಜ ಸಿ. ಅವರ ವಿರಚಿತ ದಲಿತ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆಗಳ ಸಂಘರ್ಷ, ಚಿತ್ರಕಲಾವಿದ ಡಾ.ಬಸವರಾಜ ಎಸ್. ಕಲೆಗಾರ ಅವರ ಜನಪದ ಕೌದಿಯ ಚಿತ್ತಾರ ಹಾಗೂ ಸಹಾಯಕ ಪ್ರಾಧ್ಯಾಪಕ ಡಿ. ಗಿರೇಗೌಡ ಅರಳಿಹಳ್ಳಿ ಅವರ ಬಹುಧಾರೆ ಕೃತಿಗಳನ್ನು ಇಂದಿಲ್ಲಿ ಲೋಕಾರ್ಪಣೆಗೊಳಿಸಲಾಯಿತು.