ಸಾರಾಂಶ
ಹುಬ್ಬಳ್ಳಿ ನಗರದ ಪ್ರಮುಖ ಆಕರ್ಷಣೆಯ ವೃತ್ತವಾಗಿರುವ ಚೆನ್ನಮ್ಮ ವೃತ್ತದಲ್ಲಿ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಪೂರ್ಣಗೊಂಡ ಬಳಿಕ ವೃತ್ತದಲ್ಲಿರುವ ಚೆನ್ನಮ್ಮಳ ಪ್ರತಿಭೆಯನ್ನು ಎತ್ತರದಲ್ಲಿ ಪ್ರತಿಷ್ಠಾಪಿಸಲು ಕ್ರಮಕೈಗೊಳ್ಳಬೇಕು.
ಹುಬ್ಬಳ್ಳಿ:
ದಿಟ್ಟ ಹೋರಾಟಗಾರ್ತಿಯಾಗಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮಳ ಹೋರಾಟದ ಮನೋಭಾವ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹುಬ್ಬಳ್ಳಿ ವಿಶ್ವ ಕನ್ನಡ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮಳ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷರ ಬೆವರಿಳಿಸಿದ ಚೆನ್ನಮ್ಮಳ ನಾಡಿನಲ್ಲಿ ಜನಿಸಿದ ನಾವೇ ಪುಣ್ಯವಂತರು. ಬ್ರಿಟಿಷರ ವಿರುದ್ಧ ಹೋರಾಡಿ ಮೊದಲ ಜಯಗಳಿಸಿ ಇಂದಿಗೆ 200 ವರ್ಷ ಪೂರೈಸಿದ್ದು, ಎಲ್ಲರೂ ಸಂಭ್ರಮದಿಂದ ಈ ವಿಜಯೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.ಎತ್ತರದಲ್ಲಿ ಪ್ರತಿಷ್ಠಾಪಿಸಿ:
ನಗರದ ಪ್ರಮುಖ ಆಕರ್ಷಣೆಯ ವೃತ್ತವಾಗಿರುವ ಚೆನ್ನಮ್ಮ ವೃತ್ತದಲ್ಲಿ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಪೂರ್ಣಗೊಂಡ ಬಳಿಕ ವೃತ್ತದಲ್ಲಿರುವ ಚೆನ್ನಮ್ಮಳ ಪ್ರತಿಭೆಯನ್ನು ಎತ್ತರದಲ್ಲಿ ಪ್ರತಿಷ್ಠಾಪಿಸಲು ಕ್ರಮಕೈಗೊಳ್ಳಬೇಕು. ಹು-ಧಾ ಮಹಾನಗರ ಪಾಲಿಕೆ ಈ ಕುರಿತು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು. ಸದನದಲ್ಲಿ ಈ ಕುರಿತು ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೊರಟ್ಟಿ ಭರವಸೆ ನೀಡಿದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಚೆನ್ನಮ್ಮ ಮಹತ್ವದ ಪಾತ್ರ ವಹಿಸಿದ್ದಾರೆ. ನಾಡಿನ ಜನರ ಏಳಿಗೆಗಾಗಿ ಜೀವದ ಹಂಗು ತೊರೆದು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಚೆನ್ನಮ್ಮಳ ವ್ಯಕ್ತಿತ್ವವವನ್ನು ಎಲ್ಲ ಮಹಿಳೆಯರೂ ಪಾಲಿಸಲಿ ಎಂದರು.
ನ. 18ರಂದು ಸಭೆ:ಮೇಯರ್ ರಾಮಣ್ಣ ಬಡಿಗೇರ ಮಾತನಾಡಿ, ಚೆನ್ನಮ್ಮ ವೃತ್ತದಲ್ಲಿರುವ ಮೂರ್ತಿಯನ್ನು ಎತ್ತರದಲ್ಲಿ ಪ್ರತಿಷ್ಠಾಪನೆ ಕುರಿತು ಚರ್ಚಿಸಲು ನ. 18ರಂದು ಪಾಲಿಕೆಯಲ್ಲಿ ಜನಪ್ರತಿನಿಧಿಗಳು, ಅಭಿಮಾನಿಗಳ ಸಭೆ ಕರೆಯಲಾಗುವುದು. ಎಲ್ಲರ ಸಲಹೆ ಪಡೆದು ನಿರ್ಣಯ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಉಪಮೇಯರ್ ದುರ್ಗಮ್ಮ ಬಿಜವಾಡ, ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು. ವಿಶ್ವ ಕನ್ನಡ ಬಳಗದ ಸಂಸ್ಥಾಪಕ ಅಧ್ಯಕ್ಷ ಸದಾಶಿವ ಚೌಶೆಟ್ಟಿ, ಉಪಾಧ್ಯಕ್ಷ ಪ್ರಸನ್ನ ಕುಲಕರ್ಣಿ, ಡಾ. ರಮೇಶ ಮಹೇವಪ್ಪನವರ, ಸಂತೋಷ ವೆರ್ಣೆಕರ, ವೆಂಕಟೇಶ ಕಾಟವೆ, ತಾರಾದೇವಿ ವಾಲಿ, ಡಾ. ಸುವರ್ಣಲತಾ ಗದಿಗೆಪ್ಪಗೌಡರ, ದತ್ತುಸಾ ಕಲಬುರ್ಗಿ, ಶಂಕರ ಪಾಟೀಲ, ರತ್ನಮ್ಮ ಚೌಶೆಟ್ಟಿ, ಎಸಿಪಿ ಶಿವಪ್ರಕಾಶ ನಾಯ್ಕ ಸೇರಿದಂತೆ ಹಲವರಿದ್ದರು.