ಸಾರಾಂಶ
ಭಟ್ಕಳ: ರಾಜ್ಯದಲ್ಲಿ ಆಳುತ್ತಿರುವ ಕಾಂಗ್ರೆಸ್ ಸರ್ಕಾರದ ಮಾನ, ಮರ್ಯಾದೆ ದೇಶ ಮಟ್ಟದಲ್ಲಿ ದಿನಂಪ್ರತಿ ಹರಾಜಾಗುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ಕೊಡದೇ ದಿನ ದೂಡುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಬುಧವಾರ ಸಂಜೆ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೇಲೆ ಬಹುದೊಡ್ಡ ಆರೋಪ ಕೇಳಿ ಬಂದಾಗ ಹುದ್ದೆ ತ್ಯಜಿಸಬೇಕಿತ್ತು. ಆದರೆ ಅವರು ಹಾಗೆ ಮಾಡದೇ ಮತ್ತೆ ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ. ತಕ್ಷಣ ತಮ್ಮ ಹುದ್ದೆ ತ್ಯಜಿಸಬೇಕು ಎಂದರು.ಸುದೀರ್ಘವಾದ ರಾಜಕೀಯ ಅನುಭವ ಇರುವವರು ಹಾರಿಕೆಯ ಉತ್ತರ ಕೊಡುವುದು ಅವರ ಘನತೆ, ಗೌರವಕ್ಕೆ ಸರಿ ಕಾಣುವುದಿಲ್ಲ. ಅನುಭವ ಇರುವವರು ಹಾರಿಕೆಯ ಉತ್ತರವನ್ನು ನೀಡಬಾರದು ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಶಾಸಕ ಮುನಿರತ್ನ ಅವರು ತಪ್ಪು ಮಾಡಿದ್ದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮವಾಗಲಿ. ಆದರೆ ರಾಜ್ಯ ಸರ್ಕಾರ ಅವರ ಮೇಲೆ ತೆಗೆದುಕೊಂಡ ಕ್ರಮ ಎಂತವರಿಗಾದರೂ ಸೇಡಿನ ರಾಜಕೀಯ ಎಂದು ಅರಿವಾಗುತ್ತದೆ. ಅವರು ತಪ್ಪು ಮಾಡಿದ್ದರೆ ಅವರಿಗೆ ನೋಟಿಸ್ ಕೊಟ್ಟು ಕ್ರಮ ಜರುಗಿಸುವುದಕ್ಕೆ ಅವಕಾಶ ಇತ್ತು. ಆದರೆ ಅದ್ಯಾವುದನ್ನೂ ಮಾಡದೇ ಎಲ್ಲೋ ಹೋಗುತ್ತಿದ್ದವರನ್ನು ಎಳೆದು ತಂದು ಜೈಲಿನಲ್ಲಿ ಕೂರಿಸುವ ಕ್ರಮ ಮಾತ್ರ ಸರಿಯಲ್ಲ ಎಂದರು.
ಅಲ್ಪಸಂಖ್ಯಾತರ ಓಲೈಕೆಯಲ್ಲಿ ರಾಜ್ಯದ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವ ಮುಖ್ಯಮಂತ್ರಿಯವರು ಅತಿಯಾದ ಓಲೈಕೆ ರಾಜ್ಯದ ಕೆಲವು ಕಡೆ ಅಹಿತಕರ ಘಟನೆಗೆ ಕಾರಣವಾಯಿತು ಎಂದ ಅವರು, ಮಂಡ್ಯ, ಮಂಗಳೂರು ಹಾಗೂ ಚಿಕ್ಕಮಗಳೂರು ಘಟನೆಗಳು ಖಂಡನೀಯ. ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಾಲ್ಮೀಕಿ ನಿಗಮದ ಹಗರಣ ಮುಚ್ಚಿಕೊಳ್ಳಲು ಚಿತ್ರನಟ ದರ್ಶನ್ ಅವರ ವಿಚಾರಣೆಯ ವಿವರಗಳನ್ನು ಬಹಿರಂಗಪಡಿಸಿ ಜನರ ಭಾವನೆಗಳನ್ನು ಅತ್ತಕಡೆಗೆ ತಿರುಗಿಸುವ ಕುತಂತ್ರ ಮಾಡಿದ್ದಾರೆ ಎಂದರು.ಯಾರೇ ಆಗಲಿ ನಮ್ಮ ದೇಶದಲ್ಲಿದ್ದುಕೊಂಡು ಬೇರೆ ದೇಶದ ಧ್ವಜ ಹಾರಿಸುತ್ತಾರೆ ಎಂದರೆ ಪೊಲೀಸರು ಅವರ ಮೇಲೆ ಸುಮೋಟೋ ಪ್ರಕರಣ ದಾಖಲಿಸಬೇಕು. ಅದಕ್ಕೆ ನಮ್ಮ ದೇಶದಲ್ಲಿ ಅವಕಾಶ ಕೊಡಬಾರದು ಎಂದೂ ಕಾಗೇರಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ, ರಾಜೇಶ ನಾಯ್ಕ, ಶ್ರೀಕಾಂತ ನಾಯ್ಕ, ಕಿಶನ್ ಬಲ್ಸೆ, ಶ್ರೀನಿವಾಸ ನಾಯ್ಕ ಮುಂತಾದವರಿದ್ದರು.