ಮಕ್ಕಳು ತಮ್ಮ ಸುತ್ತಮುತ್ತ ನಡೆಯುವ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶಗಳ ಕುರಿತು ಸ್ಪಷ್ಟ ಜ್ಞಾನ ಹೊಂದಿರಬೇಕು.
ಸುರಕ್ಷಿತ ಬಚಪನ್ ಅಭಿಯಾನದಡಿ ಕಾನೂನು ಅರಿವು-ನೆರವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ರೋಣಮಕ್ಕಳ ರಕ್ಷಣೆ, ಅವರ ಸುರಕ್ಷತೆ ಮತ್ತು ಕಾನೂನು ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರೋಣ ಪಟ್ಟಣದ ಪಿ.ಎಂ. ಶ್ರೀ ಸರ್ಕಾರಿ ಬಾಲಕಿಯರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರೋಣ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸುರಕ್ಷಿತ ಬಚಪನ್ ಅಭಿಯಾನದಡಿ ಕಾನೂನು ಅರಿವು-ನೆರವು ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಎಂಎಫ್ ಸಿ ಹಿರಿಯ ದಿವಾಣಿ ನ್ಯಾಯಾಧೀಶ ಮಹಾದೇವಪ್ಪ ಎಚ್., ಇಂದಿನ ಸಮಾಜದಲ್ಲಿ ಮಕ್ಕಳ ಸುರಕ್ಷತೆ ಅತ್ಯಂತ ಗಂಭೀರ ಹಾಗೂ ಪ್ರಮುಖ ವಿಷಯವಾಗಿದೆ. ಮಕ್ಕಳು ತಮ್ಮ ಸುತ್ತಮುತ್ತ ನಡೆಯುವ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶಗಳ ಕುರಿತು ಸ್ಪಷ್ಟ ಜ್ಞಾನ ಹೊಂದಿರಬೇಕು. ಅಪರಿಚಿತರ ಅಥವಾ ಪರಿಚಯವಿರುವವರ ವರ್ತನೆಯಲ್ಲಿ ಯಾವುದಾದರೂ ಅನುಮಾನ ಕಂಡುಬಂದ ಕೂಡಲೇ ತಮ್ಮ ಪೋಷಕರಿಗೆ ಅಥವಾ ಶಿಕ್ಷಕರಿಗೆ ನಿರ್ಭಯವಾಗಿ ತಿಳಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಸರ್ಕಾರ ಜಾರಿಗೆ ತಂದಿರುವ ಪೋಕ್ಸೋ ಕಾಯ್ದೆ ಕುರಿತು ಮಕ್ಕಳಿಗೆ ಅರಿವು ಅತೀ ಮುಖ್ಯವಾಗಿದೆ. ಮಕ್ಕಳು ಯಾವುದೇ ಅಂಜಿಕೆ ಅಥವಾ ಹಿಂಜರಿಕೆಯಿಲ್ಲದೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು ಎಂದು ಕರೆ ನೀಡಿದರು.ಸುರಕ್ಷಿತ ಬಚಪನ್ ಅಭಿಯಾನದ ಕುರಿತು ವಿಶೇಷ ಉಪನ್ಯಾಸ ನೀಡಿದ ವಕೀಲ ಜೆ.ಬಿ. ಹೆಬ್ಬಳ್ಳಿಮಠ, ಮಕ್ಕಳ ರಕ್ಷಣೆಯಲ್ಲಿ ಸಮಾಜದ ಪಾತ್ರ ಪ್ರಮುಖವಾಗಿದೆ. ಮಕ್ಕಳು ದೇಶದ ಭವಿಷ್ಯವಾಗಿದ್ದು, ಅವರನ್ನು ದೈಹಿಕ ಮತ್ತು ಮಾನಸಿಕ ಶೋಷಣೆಯಿಂದ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಹಾಗೂ ವ್ಯವಸ್ಥೆಯ ಆದ್ಯ ಕರ್ತವ್ಯ ಎಂದರು. ಬಾಲಾಪರಾಧ ತಡೆಗಟ್ಟುವಿಕೆ, ಮಕ್ಕಳ ಹಕ್ಕುಗಳು ಮತ್ತು ಸಂವಿಧಾನ ನೀಡಿರುವ ಮೂಲಭೂತ ರಕ್ಷಣೆಗಳ ಕುರಿತು ಅವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕಾನೂನು ಸೇವಾ ಪ್ರಾಧಿಕಾರ ಉಚಿತವಾಗಿ ಅರಿವು ಮೂಡಿಸಲಿದೆ ಎಂದರು.ಶಿಕ್ಷಣ ಸಂಯೋಜಕ ಮಲ್ಲನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ಎಚ್.ಬಿ. ಕಿತ್ತಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎಂ.ಎಚ್. ಮುಲ್ಲಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಎಸ್. ರಾಯನಗೌಡ್ರ, ಸುಜ್ಞಾನಿ ಉಂಡಿ ಮುಂತಾದವರಿದ್ದರು.