ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಕನ್ನಡ ಕಲಿತರೆ ಕೀಳರಿಮೆ ಉಂಟಾಗುತ್ತಿದೆ. ಕನ್ನಡ ಭಾಷೆ ಅನ್ನದ ಭಾಷೆಯಾಗುತ್ತಿಲ್ಲ. ಹೀಗಾಗಿ ಕನ್ನಡದ ಮೇಲೆ ವಿಶ್ವಾಸ ಕಳೆದುಕೊಳುತ್ತಿದ್ದೇವೆ ಎಂಬ ವಾದ ಕೆಲವರದ್ದಾಗಿದ್ದರೆ, ಇನ್ನು ಕೆಲವರು, ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕನ್ನಡ ಸಮೃದ್ಧವಾಗಿದೆ. ಕನ್ನಡ ಕಲಿಸುವ ಶಿಕ್ಷಕರು, ಕಲಿಯುವ ಮಕ್ಕಳು ಸಾಕಷ್ಟಿದ್ದಾರೆ. ಕನ್ನಡಕ್ಕೆ ಸಾಕಷ್ಟು ಅವಕಾಶಗಳೂ ಇವೆ. ಹೀಗಾಗಿ, ಕನ್ನಡ ಭಾಷೆಯ ಬಗ್ಗೆ ಭಯ ಬೇಡವೇ ಬೇಡ ಎಂಬ ವಾದಗಳೂ ಇವೆ..!ಇಲ್ಲಿಯ ಆಲೂರು ವೆಂಕಟರಾವ್ ಸಭಾಭವನದಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಭಾನುವಾರ ಆಯೋಜಿಸಿದ್ದ ಸಾಹಿತ್ಯ ಸಹವಾಸದಲ್ಲಿ, ಪ್ರಸ್ತುತ ಸಂದರ್ಭದಲ್ಲಿ ಕನ್ನಡ ಭಾಷೆಯ ಸವಾಲುಗಳು ಮತ್ತು ಸಾಧ್ಯತೆಗಳು ಗೋಷ್ಠಿಯಲ್ಲಿ ಇಂತಹವೊಂದು ಚರ್ಚೆ ನಡೆಯಿತು.
ಲೇಖಕರು ಹಾಗೂ ನಿವೃತ್ತ ಇಂಗ್ಲೀಷ ಪ್ರಾಧ್ಯಾಪಕ ಓ.ಎಲ್. ನಾಗಭೂಷಣಸ್ವಾಮಿ, ಕನ್ನಡ ಕಲಿತರೆ ಹೊಟ್ಟೆಪಾಡು ನಡೆಯೋದಿಲ್ಲ, ಇಂಗ್ಲೀಷ್ ಮಾಧ್ಯಮದಲ್ಲಿಯೇ ಕಲಿಯಬೇಕು ಎಂಬ ತಪ್ಪಕಲ್ಪನೆ ನಮ್ಮಲ್ಲಿದೆ. ಹೀಗಾಗಿ ಕನ್ನಡದ ಮೇಲಿನ ವಿಶ್ವಾಸ ಹೊರಟಿದೆ. ಒಂದು ಹಂತದಲ್ಲಿ ಯಾವ ಕಾರಣಕ್ಕಾಗಿ ಕನ್ನಡದ ಅರಿವಿನ ಬಾಗಿಲು ಮುಚ್ಚುತ್ತಿದ್ದೇವೆ ಎಂಬುದನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಾವು ಇಂಗ್ಲೀಷ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಭಾಷೆಯಲ್ಲಿಯೇ ಸಾಹಿತ್ಯ ರಚಿಸಿದ್ದೇವೆ. ಜಾಗತೀಕರಣದ ಹಿನ್ನೆಲೆಯಲ್ಲಿ ಶಿಕ್ಷಣ, ಸಾಹಿತ್ಯ ಕಳೆದು ಹೋಗಿದೆ. ಪರೀಕ್ಷೆಗಳು ಬರೀ ಅಂಕಗಳಿಗೆ ಮಾತ್ರ ಸೀಮಿತವಾಗಿದ್ದು, ಕಲಿಕೆ, ಓದು ಮಾಯವಾಗುತ್ತಿದೆ. ಆದ್ದರಿಂದ ಕನ್ನಡಕ್ಕೆ ಮತ್ತೇ ಶಕ್ತಿ, ಕಸುವು ತುಂಬುವ ಬೆಳವಣಿಗೆಗಳು ಆಗಬೇಕು. ಜಗತ್ತಿನಲ್ಲಿ ನಡೆಯುತ್ತಿರುವ ಹೊಸ ಪ್ರಯೋಗಗಳನ್ನು ಕನ್ನಡದ ಹುಡುಗರಿಗೆ ತಿಳಿಸುವ ಕಾರ್ಯವಾಗಬೇಕು. ಕನ್ನಡ ಓದಿ, ಬರೆಯುವ ವಿಷಯವಾಗಿ ಸಮಾಜ ಹಠ ತೊಡಬೇಕು ಎಂದು ಪ್ರತಿಪಾದಿಸಿದರು.ಅಧಿಕಾರ, ಅಂತಸ್ತಿನ ಹಿನ್ನೆಲೆಯಲ್ಲಿ ಮಕ್ಕಳಿಗೆ ಇಂಗ್ಲೀಷ್ ದಾರಿ ತೋರಲಾಗುತ್ತಿದೆ. ಯಾರಿಗೂ ಕನ್ನಡ ಬೇಕಾಗದ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಆತಂಕವಾಗಿ ನಮ್ಮನ್ನು ಕಾಡುತ್ತಿದೆ. ಕನ್ನಡಕ್ಕಾಗಿಯೇ ಕಸಾಪ, ವಿಶ್ವವಿದ್ಯಾಲಯಗಳ ಕನ್ನಡದ ವಿಭಾಗಗಳು, ಕನ್ನಡ ಅಧ್ಯಾಪಕರು ಇದ್ದರೂ ಕನ್ನಡಕ್ಕೆ ಅಪಾಯ ಬಂದಿರುವುದು ಬೇಸರದ ಸಂಗತಿ. ಕನ್ನಡ ಕಲಿಸುವ ವಿಚಾರದಲ್ಲಿ ಬದಲಾವಣೆ ತರಬೇಕು. ಕಲಿಸುವುದಕ್ಕಿಂತ ಹೆಚ್ಚು ಮಕ್ಕಳು ಸ್ವಯಂ ಪ್ರೇರಿತರಾಗಿ ಕನ್ನಡ ಕಲಿಯುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತಿ ಅಬ್ದುಲ್ ರಶೀದ್ ಮಾತನಾಡಿ, ಮುಂದಿನ ತಲೆಮಾರಿಗೆ ಕನ್ನಡ ಭಾಷೆ ನಶಿಸಿ ಹೋಗಲಿದೆ ಎಂಬ ಕಲ್ಪನೆ ತಪ್ಪು. ಯಾರಿಂದಲೂ ಕನ್ನಡ ಮುಗಿಸಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಕನ್ನಡ ಮತ್ತಷ್ಟು ವಿಸ್ತಾರವಾಗಿ ಬೆಳೆಯಲಿದೆ ಎಂಬ ನಂಬಿಕೆ ನಮಗಿದೆ. ಕನ್ನಡಕ್ಕೆ ಜ್ಞಾನದ ಹೆದ್ದಾರಿ ತೆರೆದುಕೊಂಡಿದ್ದು ನಮ್ಮ ಮಕ್ಕಳನ್ನು ಆ ಹೆದ್ದಾರಿಯಲ್ಲಿ ನಡೆಯುವಂತೆ ಮಾಡಲಾಗುತ್ತಿದೆ. ಕನ್ನಡಕ್ಕೆ ಸಾಕಷ್ಟು ಭವಿಷ್ಯವಿದ್ದು ಮತ್ತಷ್ಟು ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತುಮಕೂರು ವಿವಿ ಪ್ರಾಧ್ಯಾಪಕ ಡಾ. ಎನ್.ಎಸ್. ಗುಂಡೂರ ನಿರ್ವಹಿಸಿದರು. ಡಾ. ಹ.ವೆಂ. ಕಾಖಂಡಕಿ ನಿರೂಪಿಸಿದರು.ಇದಾದ ನಂತರ ಬೇಂದ್ರೆಯವರೊಂದಿಗೆ ಒಡನಾಟದ ನೆನಪುಗಳು, ಬೇಂದ್ರೆಯವರ ಆಯ್ದ ಕವಿತೆಗಳ ವಾಚನ, ಬೇಂದ್ರೆಯವರ ಕುರಿತು ಹಾಗೂ ಕನ್ನಡ ಭಾಷೆಯ ಕುರಿತು ಯು.ಆರ್. ಅನಂತಮೂರ್ತಿಯವರ ವಿಡಿಯೋ ಉಪನ್ಯಾಸ ನಡೆಯಿತು. ಸಮಾರೋಪದಲ್ಲಿ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಸಮೀರ ಜೋಶಿ, ಡಾ.ಕೃಷ್ಣಾ ನಾಯಕ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))