ಸಾರಾಂಶ
ಬ್ಯಾಡಗಿ: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರ್ತಿಸುವ ಕಾರ್ಯ ನಡೆಯಬೇಕಾಗಿದೆ ಸೂಕ್ತ ವೇದಿಕೆಗಳಿಲ್ಲದೇ ಬಹಳಷ್ಟು ಪ್ರತಿಭೆಗಳು ಪ್ರಾರಂಭಿಕ ಹಂತದಲ್ಲೇ ಅರಳುವ ಮುನ್ನವೇ ಕಮರಿ ಹೋದ ಉದಾಹರಣೆಗಳಿವೆ. ಹೀಗಾಗಿ ರೋಟರಿ ಸಂಸ್ಥೆಯು ವಿವಿಧೆಡೆ ಇಂತಹ ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ರೋಟರಿ ಕ್ಲಬ್ಬಿನ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಹೇಳಿದರು.
ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿರುವ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸ್ನೇಹ ಸದನದಲ್ಲಿ ರೋಟರಿ ಕ್ಲಬ್ ವತಿಯಿಂದ ಅಂಗನವಾಡಿ ಮಕ್ಕಳ ನೃತ್ಯ ಪ್ರದರ್ಶನ ಮತ್ತು ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪಟ್ಟಣದ ಗಾಂಧಿನಗರ, ಸಂಗಮೇಶ್ವರ ನಗರ, ಇಸ್ಲಾಂಪುರ, ಶಿವಪುರ ಬಡಾವಣೆಯ ಒಟ್ಟು 4 ಕ್ಲಸ್ಟರಗಳ ಅಂಗನವಾಡಿ ಮಕ್ಕಳು ನೃತ್ಯ ಪ್ರದರ್ಶನ ನಡೆಯಿತು.
ಸ್ನೇಹ ಸದನದ ನಿರ್ದೇಶಕಿ ಸಿಸ್ಟರ್ ರೂಪ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಇಂತಹ ಸಾಂಸ್ಕೃತಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಆರಂಭಿಸುವಂತೆ ಸಲಹೆ ನೀಡಿದ ಅವರು, ಅದಾಗ್ಯೂ ಅಂಗನವಾಡಿ ಶಿಕ್ಷಕಿ ಸರಸ್ವತಿ ಕಳೆದ 4 ವರ್ಷಗಳಿಂದ ಸತತವಾಗಿ ಸ್ನೇಹ ಸದನದಲ್ಲಿ ಅಂಗನವಾಡಿಗಳ ಮಕ್ಕಳ ನೃತ್ಯ ಪ್ರದರ್ಶನಕ್ಕೆ ನಡೆಸುವುದಷ್ಟೇ ಅಲ್ಲ ವಿಜೇತರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ ಎಂದರು.ಇದೇ ವೇಳೆ ನೃತ್ಯ ಪ್ರದರ್ಶನ ಮಾಡಿದ ಪ್ರತಿಯೊಬ್ಬ ಮಕ್ಕಳಿಗೂ ರೋಟರಿ ಕ್ಲಬ್ ವತಿಯಿಂದ ಪ್ರಶಸ್ತಿ ಪತ್ರ ಮತ್ತು ಟಿಫನ್ ಬಾಕ್ಸ್ ಗಿಫ್ಟ್ ಮತ್ತು ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಬೂದಿಹಾಳಮಠ, ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಸದಸ್ಯರಾದ ಕಿರಣ ಮಾಳೇನಹಳ್ಳಿ, ಸತೀಶ ಅಗಡಿ, ಇನ್ನರ್ವಿಲ್ ಕ್ಲಬ್ಬಿನ ಸದಸ್ಯರಾದ ಪುಷ್ಪಾ ಇಂಡಿಮಠ, ಶಿಕ್ಷಕಿಯರಾದ ಸರಸ್ವತಿ, ರಹಿಮಾ, ಫಾತಿಮಾ, ಲಲಿತ, ರೇಣುಕಾ, ಸಹಾಯಕಿಯರಾದ ಮಮತಾ, ಶೈಲಾ, ದೀಪ, ಸವಿತಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.