ಸ್ವಚ್ಛ ನಗರಗಳ ಪಟ್ಟಿಯಲ್ಲಿ ಚಿತ್ರದುರ್ಗ ಸ್ಥಾನ ಪಡೆಯಲಿ

| Published : Feb 08 2024, 01:33 AM IST

ಸ್ವಚ್ಛ ನಗರಗಳ ಪಟ್ಟಿಯಲ್ಲಿ ಚಿತ್ರದುರ್ಗ ಸ್ಥಾನ ಪಡೆಯಲಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ತರಾಸು ರಂಗಮಂದಿರದಲ್ಲಿ ನಗರಸಭೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಷ್ಟ್ರಮಟ್ಟದಲ್ಲಿ ಕೊಡ ಮಾಡುವ ಸ್ವಚ್ಚ ನಗರಗಳ ಪಟ್ಟಿಯಲ್ಲಿ ಚಿತ್ರದುರ್ಗದ ಹೆಸರು ನಮೂದಾಗಬೇಕಾದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಾಕೀತು ಮಾಡಿದರು.

ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಚಿತ್ರದುರ್ಗ ನಗರಸಭೆ ವತಿಯಿಂದ ನಗರಸಭೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛ ಹಾಗೂ ಸುಂದರ ಚಿತ್ರದುರ್ಗ ನಗರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಗರಸಭೆ ಸಿಬ್ಬಂದಿ, ನೌಕರರು ತಮ್ಮ ಜವಾಬ್ಧಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದರು.

ಪೌರಕಾರ್ಮಿಕರಿಂದ ಪೌರಾಯುಕ್ತರವರೆಗೂ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂದು ಭಾವಿಸಿ, ಕೆಲಸ ಮಾಡಿದಾಗ ಮಾತ್ರ ನಗರಕ್ಕೆ ಹಾಗೂ ನಾಗರಿಕರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಲಿದೆ. ನಗರದ ತೇರು ಎಳೆಯಲು ನಗರಸಭೆ ಸಿಬ್ಬಂದಿ, ನೌಕರರೆಲ್ಲರೂ ಸಾರಥಿಗಳಾಗಬೇಕು. ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಸ್ವಚ್ಛತೆ, ಕುಡಿವ ನೀರು, ಮನೆ ಸೇರಿ ಮೂಲಸೌಕರ್ಯಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ನೌಕರರು ಹಾಗೂ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ನೌಕರರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ನಗರವನ್ನು ಸುಂದರ ಹಾಗೂ ಸ್ವಚ್ಛ ನಗರವನ್ನಾಗಿ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಚಿತ್ರದುರ್ಗ ಕವಾಡಿಗರಹಟ್ಟಿಯಲ್ಲಿ ಈಚೆಗೆ ಜರುಗಿದ ಅಹಿತಕರ ಪ್ರಕರಣದಿಂದಾಗಿ ರಾಜ್ಯದ ಎಲ್ಲ ನಗರಸ್ಥಳೀಯ ಸಂಸ್ಥೆಗಳು ಎಚ್ಚೆತ್ತು, ಜನರಿಗೆ ಶುದ್ಧವಾದ ಕುಡಿವ ನೀರು ಪೂರೈಕೆ, ಜಲಸಂಗ್ರಹಾರಗಳ ಸ್ವಚ್ಛತೆ ಸೇರಿ ಹಲವು ಜಾಗೃತ ವ್ಯವಸ್ಥೆ ನಿರ್ವಹಣೆಗೆ ಮುಂದಾಗಿವೆ. ಅಧಿಕಾರಿ, ಸಿಬ್ಬಂದಿ ಮುಂಜಾಗ್ರತಾ ಕ್ರಮ ವಹಿಸಿದಲ್ಲಿ, ಇಂತಹ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಬಹುದು ಎಂದು ಕುಮಾರಸ್ವಾಮಿ ಹೇಳಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಮಾತನಾಡಿ, ನಗರಸಭೆ ಸಿಬ್ಬಂದಿ, ನೌಕರರಿಗೆ ಜ್ಞಾನ, ಕೌಶಲ್ಯ, ಕಾರ್ಯ ದಕ್ಷತೆ ಮತ್ತು ಮನೋಭಾವದಲ್ಲಿನ ಬದಲಾವಣೆ ಹಾಗೂ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಉತ್ತೇಜಿಸುವ ಬಗ್ಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಉತ್ತಮ ನಡೆಯಾಗಿದೆ ಎಂದರು.

ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ನಗರಸಭೆ ಸಿಬ್ಬಂದಿ ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಇಚ್ಛಾಶಕ್ತಿಯಿಂದ ನಿರ್ವಹಿಸಿದಾಗ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರರಾಗತ್ತಾರೆ. ನಗರದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ನಿಗಧಿತ ಸಮಯಕ್ಕೆ, ಸಮರ್ಪಕವಾಗಿ ಒದಗಿಸಬೇಕು ಎಂದು ತಿಳಿಸಿದರು.

ಚಿತ್ರದುರ್ಗ ನಗರಸಭೆ ಎಲ್ಲಾ ವಿಭಾಗಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಸಿಬ್ಬಂದಿಯು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಇಂಟರ್ ನ್ಯಾಷನಲ್ ಮೋಟಿವೇಟರ್ ಬೆಂಗಳೂರಿನ ಡಾ.ಬಿ.ಎಸ್. ಗುರುದಕ್ಷಿಣ್ ಅವರು ಕಚೇರಿ ನಿರ್ವಹಣೆಯಲ್ಲಿ ಸಿಬ್ಬಂದಿ ಪಾತ್ರ, ಸಾರ್ವಜನಿಕರೊಂದಿಗೆ ಸಂವಹನ ಮತ್ತು ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಮೈಸೂರು ಎಟಿಐ ನಿವೃತ್ತ ತರಬೇತಿ ಸಂಯೋಜಕ ಜಿ.ಎಂ.ಸರ್ವೇಶ್ ಅವರು ನೀರಿನ ನಿರ್ವಹಣೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಉಪನ್ಯಾಸ ನೀಡಿದದರು. ನಗರಸಭೆ ವ್ಯವಸ್ಥಾಪಕಿ ಮಂಜುಳಾ,ಕಂದಾಯ ಅಧಿಕಾರಿ ಜಯ್ಯಪ್ಪ, ಪರಿಸರ ಇಂಜಿನಿಯರ್ ಜಾಫರ್ ಸೇರಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.