ಸಾರಾಂಶ
ಶಿರಸಿ: ಮನುಷ್ಯನಿಗೆ ಆರೋಗ್ಯವೇ ಮೊದಲಾಗಬೇಕು. ಅದಕ್ಕಾಗಿ ಅಂತರಂಗ ಹಾಗೂ ಬಹಿರಂಗ ಸ್ವಚ್ಛತೆ ಇಟ್ಟುಕೊಳ್ಳಬೇಕಿದೆ ಎಂದು ಕಾಗಿನೆಲೆಯ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ನುಡಿದರು.
ಮಂಗಳವಾರ ರಾತ್ರಿ ಗಣೇಶ ನಗರದ ವೇದ ಆರೋಗ್ಯ ಕೇಂದ್ರದ ನಿಸರ್ಗ ಮನೆಯಲ್ಲಿ ಮಾತನಾಡಿ, ಕಲೆ ನಮ್ಮ ಬದುಕಿನಲ್ಲಿ ಪೌರಾಣಿಕ ಕಥಾನಕ ತಿಳಿಸುತ್ತವೆ. ಕಲೆಯಿಂದ ಏಕಾಗ್ರತೆ, ಮಾನಸಿಕ ನೆಮ್ಮದಿ ಸಾಧ್ಯವಿದೆ. ಪೌರಾಣಿಕ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ನೈತಿಕತೆ ಕೂಡ ವೃದ್ಧಿಸಿಕೊಳ್ಳಲು ಸಾಧ್ಯವಿದೆ ಎಂದರು.ಹೊಸದುರ್ಗದ ಕುಂಚಟಿಗ ಮಹಾ ಸಂಸ್ಥಾನದ ಶಾಂತವೀರ ಸ್ವಾಮೀಜಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ಸ್ವಚ್ಛತೆಗಾಗಿ ಮೀಸಲಿಟ್ಟು ಕೆಲಸ ಮಾಡುತ್ತೇವೆ. ಫೇಸ್ಬುಕ್, ವಾಟ್ಸ್‌ಆ್ಯಪ್‌ಗಳಿಗೆ ಮಾತ್ರ ಸೀಮಿತ ಮಾಡಿಕೊಳ್ಳುತ್ತೇವೆ. ಆದರೆ, ನಿತ್ಯವೂ ಸ್ವಚ್ಚತಾ ದಿನವಾಗಿಸಿಕೊಳ್ಳಬೇಕು. ಕೇವಲ ಬಹಿರಂಗ ಸ್ವಚ್ಛತಾ ಕಾರ್ಯವಲ್ಲ, ಅಂತರಂಗದ ಸ್ವಚ್ಛತೆಗೆ ಕೂಡ ಆದ್ಯತೆ ನೀಡಬೇಕು ಎಂದರು.ನಿಸರ್ಗ ವೈದ್ಯ ಡಾ. ವೆಂಕಟರಮಣ ಹೆಗಡೆ ಮಾತನಾಡಿ, ವೇದ ಆರೋಗ್ಯ ಕೇಂದ್ರದ ನಿಸರ್ಗ ಮನೆಗೆ ಆಗಮಿಸಿದ ಗುರುಗಳು ಇಲ್ಲಿನ ನೆಲವನ್ನೂ ಪಾವನಗೊಳಿಸಿದ್ದಾರೆ. ನಮ್ಮ ಆಹಾರ ಪದ್ಧತಿಗಳಿಂದ, ಜೀವನ ಕ್ರಮದಿಂದ ಅನಾರೋಗ್ಯ ಹೆಚ್ಚಾಗುತ್ತಿದೆ ಎಂದರು.
ಯಕ್ಷರೂಪಕ ಪ್ರದರ್ಶಿಸಿದ ತುಳಸಿ ಹೆಗಡೆ, ಪ್ರಸಾಧನ ಕಲಾವಿದರಾಗಿ ಸಹಕಾರ ನೀಡಿದ ವೆಂಕಟೇಶ ಹೆಗಡೆ ಅವರನ್ನು ಉಭಯ ಶ್ರೀಗಳು ಗೌರವಿಸಿದರು. ಈ ವೇಳೆ ನಾರಾಯಣ ಹೆಗಡೆ, ಸಂಗೀತಾ ವಿ.ಹೆಗಡೆ ಇತರರು ಇದ್ದರು.ಕಲೆ ಗೌರವಿಸಿದರೆ ಸಾಧನೆ ಸಾಧ್ಯ: ರಾಜೀವ ಅಜ್ಜೀಬಳ
ಶಿರಸಿ: ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಶಿಷ್ಯರು ಮುಂದುವರಿಸಬೇಕು. ಆಗ ಮಾತ್ರ ಕಲೆಯ ಹರಿವು, ಉಳಿವು ಸಾಧ್ಯ ಎಂದು ಕವಿ, ಹಿರಿಯ ಪತ್ರಕರ್ತ ರಾಜೀವ ಅಜ್ಜೀಬಳ ತಿಳಿಸಿದರು.ನಗರದ ಸಾಮ್ರಾಟ್ ವಿನಾಯಕ ಸಭಾಂಗಣದಲ್ಲಿ ನಿನಾದ ಸಂಗೀತ ಸಭಾದಿಂದ ಆಯೋಜಿಸಿದ್ದ ಗುರುಪೂರ್ಣಿಮಾ, ಸಮ್ಮಾನ, ಸಂಗೀತ ಕಾರ್ಯಕ್ರಮದಲ್ಲಿ ಉಡುಪಿಯ ಪ್ರಸಿದ್ಧ ಗಾಯಕ ಪಂಡಿತ್ ಎಂ.ಟಿ. ಭಾಗವತ್ ಅವರನ್ನು ಗೌರವಿಸಿ ಮಾತನಾಡಿದರು.ಯಾವುದೇ ಲಲಿತ ಕಲೆಗಳ ಕಲಿಕೆಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು. ಪ್ರದರ್ಶನಕ್ಕೆ ಸೀಮಿತಗೊಳ್ಳದೇ ನಿರಂತರ ಸಾಧನೆ ಮಾಡಿದರೆ ಒಂದಿಲ್ಲೊಂದು ಕಲಾ ಕ್ಷೇತ್ರದ ನಕ್ಷತ್ರಗಳಾಗಲು ಸಾಧ್ಯವಿದೆ ಎಂದು ಸಲಹೆ ನೀಡಿದ ಅವರು, ಕಲೆ ದೊಡ್ಡದೇ ಹೊರತು ಕಲಾವಿದನಲ್ಲ. ಕಲೆಯನ್ನು ಸದಾ ಗೌರವಿಸಬೇಕು. ಗುರುವಿನ ಮೂಲಕ ಕಲೆ ಕಲಿತಾಗ ಶಿಷ್ಯರಿಂದ ಇನ್ನಷ್ಟು ಸಾಧನೆ ಸಾಧ್ಯವಿದೆ. ಗುರುಗಳಿಗೆ ಹಾಗೂ ಕಲೆಗೆ ಗೌರವ ಕೊಡುವವರು ಸಾಧನೆ ಮಾಡುತ್ತಾರೆ ಎಂದರು.
ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಪಂಡತ್ ಎಂ.ಪಿ. ಹೆಗಡೆ ಪಡಿಗೇರಿ ಮಾತನಾಡಿ, ಸಂಗೀತ ಸಭಾವು ನಿರಂತವರವಾಗಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಕಲೆಯ ಜತೆ, ಶಿಷ್ಯರನ್ನೂ ಬೆಳೆಸುವ ಮೂಲಕ ಈ ಪರಂಪರೆ ಮುಂದುವರಿಸುತ್ತಿದೆ. ಇದು ಸದಾ ಮುಂದುವರಿಯಲಿ ಎಂದರು.ಸಮ್ಮಾನ ಪಡೆದ ಪಂಡಿತ್ ಎಂ.ಟಿ. ಭಾಗವತ್ ಮಾತನಾಡಿ, ವಿದ್ಯಾರ್ಥಿಗಳ ಗಾಯನ, ವಾದನ ಪ್ರಸ್ತುತಿ ಕಲಿಸುವ ಗುರುವಿನ ಆಸಕ್ತಿಯ ದ್ಯೋತಕ. ನಿನಾದ ಸಂಗೀತ ಸಭಾದ ಗುರು ವೃಂದಕ್ಕೆ ವಿಶೇಷ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ವೇದಿಕೆಯಲ್ಲಿ ಪಂಡಿತ್ ಮೋಹನ ಹೆಗಡೆ ಹುಣಸೆಕೊಪ್ಪ, ಪ್ರಾಚಾರ‍್ಯ ಶ್ರೀಪಾದ ಹೆಗಡೆ ಸೋಮನಮನೆ, ಗುರು, ವಿದುಷಿ ಬಕುಲಾ ಹೆಗಡೆ ಇತರರು ಇದ್ದರು. ಮುಂಜಾನೆಯಿಂದ ಇಳಿಹೊತ್ತಿನ ತನಕ ಕಲಾ ಶಾಲೆಯ ಮಕ್ಕಳಿಂದ ಶಾಸ್ತ್ರೀಯ ಸಂಗೀತ ಪ್ರಸ್ತುತಿಗಳು ಗಮನ ಸೆಳೆದವು.ಬಳಿಕ ಎಂ.ಟಿ. ಭಾಗವತ್, ಶ್ರೀಪಾದ ಹೆಗಡೆ, ಬಕುಲಾ ಹೆಗಡೆ ಅವರು ಹಾಡಿದರು. ತಬಲಾದಲ್ಲಿ ಪಂ. ಮೋಹನ್ ಹೆಗಡೆ, ಅಕ್ಷಯ ಭಟ್ಟ ಅಂಸಳ್ಳಿ, ವಿಜಯೇಂದ್ರ ಹೆಗಡೆ ಅಜ್ಜಿಬಳ, ಭಾಸ್ಕರ ಹೆಗಡೆ ಮುತ್ತಿಗೆ, ಹಾರ್ಮೋನಿಯಂದಲ್ಲಿ ಭರತ್ ಹೆಗಡೆ ಹೆಬ್ಬಲಸು ಸಹಕಾರ ನೀಡಿದರು. ಇದೇ ವೇಳೆ ಪಂಡಿತ್ ಶ್ರೀಪಾದ ಹೆಗಡೆ ಸೋಮನಮನೆ ಹಾಗೂ ಬಕುಲಾ ಹೆಗಡೆ ಅವರನ್ನು ಶಿಷ್ಯರು ಗುರು ನಮನ ಸಲ್ಲಿಸಿ ಅಭಿನಂದಿಸಿದರು.