ಸಾರಾಂಶ
ಶಿರಸಿ: ವಾಲ್ಮೀಕಿ ನಿಗಮದಲ್ಲಿ ನಡೆದ ₹೧೮೭ ಕೋಟಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲುದಾರರಾಗಿದ್ದು, ಮೈಸೂರಿನ ಮುಡಾ ಹಗರಣದಲ್ಲಿಯೂ ಮುಖ್ಯಮಂತ್ರಿ ನೇರ ಕೈವಾಡವಿದೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಂಮತ್ರಿ ಸಿದ್ದರಾಮಯ್ಯ ಹಣಕಾಸು ಸಚಿವರೂ ಆಗಿರುವುದರಿಂದ ಹಗರಣಗಳಿಗೆ ಅವರೇ ಕಾರಣರು. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ಮುಡಾ ಹಗರಣವೂ ಇತಿಹಾಸದಲ್ಲಿ ಕಂಡು ಕೇಳಿರದ ಹಗರಣವಾಗಿದೆ. ಮೈಸೂರಿನವರಾದ ಸಿದ್ದರಾಮಯ್ಯನವರ ಕಾಲ ಬುಡದಲ್ಲಿ ಇಂತಹ ಹಗರಣಗಳು ಸಾಕಷ್ಟು ನಡೆಯುತ್ತಿದೆ. ಇಂತಹ ಭ್ರಷ್ಟ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರಿಯಲು ರಾಜ್ಯದ ಜನತೆ ಅವಕಾಶ ನೀಡಬಾರದು ಎಂದರು.ಮುಡಾ ಪ್ರಕರಣ ಮುಚ್ಚಿ ಹಾಕಲು ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿದ್ದಾರೆ. ₹೫ ಸಾವಿರ ಕೋಟಿಗಿಂತ ಅಧಿಕ ಪ್ರಮಾಣದಲ್ಲಿ ಮುಡಾ ಹಗರಣ ನಡೆದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಯಾಕೆ ಕ್ರಮ ಕೈಗೊಳ್ಳಲಿಲ್ಲ: ಹಗರಣದಿಂದ ರಕ್ಷಣೆ ಮಾಡಿಕೊಳ್ಳಲು ಶಾಸಕ ಎಸ್.ಟಿ. ಸೋಮಶೇಖರ ಅವರು ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದಾರೆ. ಅವರೇ ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆ ಸಮಯದಲ್ಲಿ ಯಾಕೆ ಕ್ರಮ ಕೈಗೊಂಡಿಲ್ಲ. ಅವರು ಈ ಹಗರಣದ ಪಾಲುದಾರರಾಗಿದ್ದಾರೆಯೋ ಎಂಬ ಸಂಶಯ ಮೂಡುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ, ಸಹಕಾರಿ ಪ್ರಕೋಷ್ಠದ ಆರ್.ವಿ. ಹೆಗಡೆ ಚಿಪಗಿ, ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ಬಿಜೆಪಿ ಜಿಲ್ಲಾ ಕಚೇರಿ ಕಾರ್ಯದರ್ಶಿ ಶ್ರೀರಾಮ ನಾಯ್ಕ, ಸಾಮಾಜಿಕ ಜಾಲತಾಣ ಸಂಚಾಲಕ ರವೀಂದ್ರ ಶೆಟ್ಟಿ ಮತ್ತಿತರರು ಇದ್ದರು.