ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸುನೀಲ ಹೆಗಡೆ

| Published : Aug 22 2024, 12:58 AM IST

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸುನೀಲ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಹಿಂದಿನ ಲೋಕಾಯುಕ್ತದಲ್ಲಿ 65 ಪ್ರಕರಣಗಳಿದ್ದವು. ಆದರೆ ಇವರು ಲೋಕಾಯುಕ್ತವನ್ನೇ ರದ್ದು ಮಾಡಿ ಎಸಿಬಿ ರಚಿಸಿ ತಮ್ಮ ವಿರುದ್ಧದ 65 ಪ್ರಕರಣಗಳಿಗೆ ತಿಲಾಂಜಲಿಯನ್ನಿಟ್ಟಿದ್ದಾರೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಆರೋಪಿಸಿದರು.

ಹಳಿಯಾಳ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಪ್ಪೇ ಮಾಡಿಲ್ಲವೆಂದೂ ಹೇಳುತ್ತಿದ್ದು, ಹಾಗಾದರೆ ತನಿಖೆ ಎದುರಿಸಲು ಹಿಂಜರಿಯುತ್ತಿರುವುದು ಏಕೆ? ಅಲ್ಲದೇ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದು ಒಳಿತು ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಸುನೀಲ ಹೆಗಡೆ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಲವತ್ತು ವರ್ಷದ ರಾಜಕೀಯ ಜೀವನದಲ್ಲಿ ತಾವು ಪರಿಶುದ್ಧರಾಗಿದ್ದೇವೆ, ಒಂದೇ ಒಂದು ಕಪ್ಪುಚುಕ್ಕೆಯಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯದ ಮುಖವಾಡ ಕಳಚಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ವಿಚಾರಣೆಯನ್ನು ಎದುರಿಸಲಿ ಎಂದು ಸವಾಲೆಸೆದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಹಿಂದಿನ ಲೋಕಾಯುಕ್ತದಲ್ಲಿ 65 ಪ್ರಕರಣಗಳಿದ್ದವು. ಆದರೆ ಇವರು ಲೋಕಾಯುಕ್ತವನ್ನೇ ರದ್ದು ಮಾಡಿ ಎಸಿಬಿ ರಚಿಸಿ ತಮ್ಮ ವಿರುದ್ಧದ 65 ಪ್ರಕರಣಗಳಿಗೆ ತಿಲಾಂಜಲಿಯನ್ನಿಟ್ಟಿದ್ದಾರೆ ಎಂದು ಆರೋಪಿಸಿದರು. ದೇಶಪಾಂಡೆ ರಾಜೀನಾಮೆ ನೀಡಲಿ:

ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳು ಶಾಮೀಲಾಗಿರುವುದು ಜಗಜ್ಜಾಹೀರಾಗಿದೆ. ಅಧಿಕಾರಿಗಳ ಸಹಕಾರವಿಲ್ಲದೇ ಇಷ್ಟೊಂದು ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆಯಲು ಅಸಾಧ್ಯ. ಹೀಗಿರುವಾಗ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ದೇಶಪಾಂಡೆಯವರು ಈ ಹಗರಣಗಳಲ್ಲಿ ಅಧಿಕಾರಿಗಳ ಪಾತ್ರವಿರುವುದನ್ನು ಒಪ್ಪಿಕೊಳ್ಳಬೇಕು. ಆಡಳಿತ ಸುಧಾರಣೆ ಮಾಡುವುದರಲ್ಲಿ ತಮ್ಮ ವಿಫಲತೆಯನ್ನು ಸ್ವೀಕರಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಘಟಕ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ, ಸಂತೋಷ ಘಟಕಾಂಬ್ಳೆ, ಉದಯ ಹೂಲಿ, ಯಲ್ಲಪ್ಪ ಹಿನ್ನೋಜಿ, ಜ್ಞಾನೇಶ ಮಾನಗೆ, ಪಾಂಡು ಪಾಟೀಲ, ಆಕಾಶ ಉಪ್ಪಿನ, ಸುಭಾಸ ಪಾಟೀಲ, ಹನುಮಂತ ಚಿನಗಿನಕೊಪ್ಪ, ಹನುಮಂತ ಚಲವಾದಿ, ಸಂಜಯ ಹಿರೇಕರ, ಶಕುಂತಲಾ ಜಾಧವ ಇದ್ದರು.