ಸಾರಾಂಶ
ಪ್ರಧಾನಿ ನರೇಂದ್ರ ಮೋದಿಯವರು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಧ್ಯೇಯದಡಿ 2047ಕ್ಕೆ ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸುತ್ತಿರುವ ಅಮೃತ ಕಾಲಘಟ್ಟದಲ್ಲಿ ಕಾಂಗ್ರೆಸ್ ನಾಯಕರ ದೇಶ ವಿರೋಧಿ ಹೇಳಿಕೆ ಅತ್ಯಂತ ಖಂಡನೀಯ ಎಂದು ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಭಾರತ್ ಜೋಡೋ ಎಂದು ಬೊಗಳೆ ಬಿಡುತ್ತಿರುವ ಕಾಂಗ್ರೆಸ್‌ನ ನೈಜ ವಿಭಜನಕಾರಿ ಮನಸ್ಥಿತಿ ಮಗದೊಮ್ಮೆ ಬಟಬಯಲಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಎಂದು ಹೆಸರಿಟ್ಟುಕೊಂಡು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ ‘ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರ’ದ ಹೇಳಿಕೆಯಿಂದ ಸಾಬೀತಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಟೀಕಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಧ್ಯೇಯದಡಿ 2047ಕ್ಕೆ ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸುತ್ತಿರುವ ಅಮೃತ ಕಾಲಘಟ್ಟದಲ್ಲಿ ಕಾಂಗ್ರೆಸ್ ನಾಯಕರ ದೇಶ ವಿರೋಧಿ ಹೇಳಿಕೆ ಅತ್ಯಂತ ಖಂಡನೀಯವಾಗಿದೆ. ಡಿ.ಕೆ. ಸುರೇಶ್ ಅವರ ಉದ್ದಟತನದ ಹೇಳಿಕೆಯ ಕುರಿತು ಪಕ್ಷದ ನಿಲುವೇನು ಎಂಬುದನ್ನು ಕಾಂಗ್ರೆಸ್ ಸಮಸ್ತ ಭಾರತೀಯರ ಮುಂದೆ ಸ್ಪಷ್ಟಪಡಿಸಬೇಕಾಗಿದೆ ಎಂದವರು ಆಗ್ರಹಿಸಿದ್ದಾರೆ.
ದೇಶದ ಸಮಗ್ರತೆ, ಅಖಂಡತೆ ಮತ್ತು ಸಾರ್ವಭೌಮತೆಗೆ ದಕ್ಕೆ ತರುವಂತಹ ಯಾವುದೇ ಹೇಳಿಕೆಗಳನ್ನು ದೇಶಭಕ್ತ ದೇಶವಾಸಿಗಳು ಸಹಿಸಲಾರರು. ಜಾತಿ, ಧರ್ಮಗಳ ಮಧ್ಯೆ ಒಡಕು ಸೃಷ್ಟಿಸಿ ಕೇವಲ ಅಧಿಕಾರಕ್ಕಾಗಿ ಹೆಣಗಾಡುವ ಕಾಂಗ್ರೆಸ್‌ನಿಂದ ಮಾತ್ರವೇ ಇಂತಹ ಹೇಳಿಕೆಗಳನ್ನು ನಿರೀಕ್ಷಿಸಲು ಸಾಧ್ಯ. ಕಾಂಗ್ರೆಸ್‌ನ ಯಾವುದೇ ದೇಶ ವಿರೋಧಿ ಕುಕೃತ್ಯಗಳು ಎಂದೂ ಕಾರ್ಯಗತವಾಗಲಾರದು ಎಂದು ಕಿಶೋರ್ ಕುಮಾರ್ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.