ಸೃಜನಾತ್ಮಕ ಪ್ರತಿಭೆ ಅರಳಿಸುವ ಕೆಲಸವಾಗಲಿ: ಪ್ರೊ. ಹೊನ್ನೂರಾಲಿ

| Published : Dec 18 2024, 12:45 AM IST

ಸಾರಾಂಶ

ಬಳ್ಳಾರಿ ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 20 ದಿನಗಳ ಕಾಲೇಜು ಯುವ ರಂಗ ತರಬೇತಿ ಮತ್ತು ರಂಗೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳ್ಳಾರಿ: ಹೊಸ ತಲೆಮಾರಿನವರಲ್ಲಿ ಸೃಜನಾತ್ಮಕ ಪ್ರತಿಭೆ ಅರಳಿಸುವ, ಹೊಸ ಭರವಸೆ ತುಂಬುವ ಕೆಲಸಗಳು ಹೆಚ್ಚೆಚ್ಚು ನಡೆಯಬೇಕಾದ ಅಗತ್ಯವಿದೆ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಹೊನ್ನೂರಾಲಿ ಅಭಿಪ್ರಾಯಪಟ್ಟರು.

ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಟಕ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಂಗಾಯಣ ಕಲಬುರಗಿ ಸಹಯೋಗದಲ್ಲಿ ಆಯೋಜಿಸಿದ್ದ 20 ದಿನಗಳ ಕಾಲೇಜು ಯುವ ರಂಗತರಬೇತಿ ಮತ್ತು ರಂಗೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾವಪೂರ್ಣ ಅಭಿನಯದಿಂದ ಚಲನಚಿತ್ರ ರಂಗದಲ್ಲಿ ಯಾರು ಗಟ್ಟಿಯಾಗಿ ನೆಲೆನಿಂತಿದ್ದಾರೋ ಅವರೆಲ್ಲರೂ ರಂಗಭೂಮಿಯ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಸಂಕಟ, ವಿಷಾದ ಮತ್ತು ಹಾಸ್ಯದ ಭಾವಗಳನ್ನು ಅವರು ಮಾತ್ರ ಕಲಾತ್ಮಕವಾಗಿ ಅಭಿನಯಿಸಿ ಹೊಸ ಹೊಳಪು ಕೊಡಲು ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ನಾಟಕ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಬ್ಬ ಕಲಾವಿದನಿದ್ದಾನೆ. ಸಂದರ್ಭಕ್ಕನುಗುಣವಾಗಿ ಆತ ಹೊರಗಡೆ ಕಾಣಿಸಿಕೊಳ್ಳುತ್ತಾನೆ. ಸುಳ್ಳನ್ನು ಸತ್ಯ ಎಂದು ಸತ್ಯವೇ ಅಚ್ಚರಿಯಾಗುವಂತೆ ಹೇಳುವ ಜನರನ್ನು ನಿತ್ಯ ಬದುಕಿನ ಜಂಜಾಟದಲ್ಲಿ ಕಾಣುತ್ತೇವೆ ಎಂದರು.

ರಂಗಭೂಮಿಗೆ ಬಹುದೊಡ್ಡ ಶಕ್ತಿ ಇದೆ. ನಾಟಕದ ಮೂಲಕ ನಾವು ನಿಜವಾದ ಮನುಷ್ಯರಾಗಲು ಸಾಧ್ಯ. ಸಮರ್ಥ ಹಾಗೂ ಪ್ರಭಾವಿ ಮಾಧ್ಯಮವಾದ ರಂಗಭೂಮಿಯ ತರಬೇತಿಯನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ರಂಗಭೂಮಿ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.

ರಂಗಾಯಣದ ಸಂಚಾಲಕ ಸರ್ದಾರ್ ಬಾರೇಗಿಡದ ಮಾತನಾಡಿ, ನಾಟಕ ಮನೋರಂಜನೆಯ ಜತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತದೆ. ನಿತ್ಯ ಅನುಭವಿಸುವ ನಮ್ಮ ತಲ್ಲಣಗಳಿಗೆ ರಂಗಭೂಮಿಯ ಚಟುವಟಿಕೆ ಔಷಧದಂತೆ ಸಹಕಾರಿಯಾಗಿವೆ ಎಂದರು.

ನಾಟಕ ವಿಭಾಗದ ಅತಿಥಿ ಉಪನ್ಯಾಸಕ ವಿಷ್ಣು ಹಡಪದ, ನೇತಿ ರಘುರಾಮ್ ಹಾಗೂ ನಿರ್ದೇಶಕ ಚಂದ್ರಶೇಖರ್ ಉಪಸ್ಥಿತರಿದ್ದರು.