ಸಾಧನೆಯ ಜತೆ ಸಂಸ್ಕಾರ ಮಿಳಿತವಾಗಿರಲಿ

| Published : Mar 14 2025, 12:36 AM IST

ಸಾರಾಂಶ

ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು ಮತ್ತು ಅದನ್ನು ಕೊಡಿಸುವುದು ಪಾಲಕರ ಕರ್ತವ್ಯ.

ಕುಮಟಾ: ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು ಮತ್ತು ಅದನ್ನು ಕೊಡಿಸುವುದು ಪಾಲಕರ ಕರ್ತವ್ಯ. ಸಾಧನೆಯೊಂದಿಗೆ ಸಂಸ್ಕಾರವೂ ಮಿಳಿತವಾಗಿದ್ದರೆ ಮೌಲ್ಯ ಹೆಚ್ಚುತ್ತದೆ ಎಂದು ಆದಿಚುಂಚನಗಿರಿ ಮಿರ್ಜಾನ ಶಾಖಾ ಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ನುಡಿದರು.

ದಿವಗಿಯಲ್ಲಿ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಹಾಲಕ್ಕಿ ಒಕ್ಕಲಿಗರ ಸಂಘದಿಂದ ಹಮ್ಮಿಕೊಂಡಿದ್ದ

ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವದಿಸಿದರು. ಯಾರೂ ದಡ್ಡರಲ್ಲ, ಪ್ರತಿಯೊಂದು ಮಗುವಿನಲ್ಲೂ ವಿಶೇಷತೆ ಇರುತ್ತದೆ. ಅದನ್ನು ಬೆಳಕಿಗೆ ತರುವ ಪ್ರಯತ್ನ ಶಿಕ್ಷಕರು, ಸಮಾಜ, ಪಾಲಕ ಪೋಷಕರು ಮಾಡಬೇಕು. ಹಾಲಕ್ಕಿ ಸಮಾಜದ ಪ್ರತಿಭೆಗಳನ್ನು ಸಂಘವು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಮತ್ತು ಸಾಧಕರನ್ನು ಗೌರವಿಸುತ್ತಿರುವುದು ಅರ್ಥಪೂರ್ಣ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ, ಹಾಲಕ್ಕಿ ಸಮಾಜದ ಬಗ್ಗೆ ನನಗೆ ಅವಿನಾಭಾವ ಸಂಬಂಧವಿದೆ. ಹಾಲಕ್ಕಿಗಳು ನಿಗರ್ವಿಗಳು, ಸ್ವಾಭಿಮಾನಿಗಳು. ಆದರೆ ಶೈಕ್ಷಣಿಕವಾಗಿ ಮುಂದೆಬರಬೇಕಿದೆ. ಹಾಲಕ್ಕಿಗಳು ಸಮಾಜದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವುದು ಆಶಾದಾಯಕವಾಗಿದೆ ಎಂದರು.ಜೆಡಿಎಸ್‌ನ ಸೂರಜ ನಾಯ್ಕ, ಹಾಲಕ್ಕಿ ಸಮುದಾಯ ಸಾಂಸ್ಕೃತಿಕವಾಗಿ ಸಾಂಪ್ರದಾಯಿಕವಾಗಿ ಅತ್ಯಂತ ಶ್ರೀಮಂತ. ಇವರ ನಾಟಿವೈದ್ಯ ಪದ್ಧತಿ, ಸುಗ್ಗಿ ಕುಣಿತ ನಾಡಿಗೆ ಮಾನ್ಯವಾಗಿದೆ. ಇದು ಸಂಶೋಧನೆಗೆ ಅರ್ಹ ಸಂಗತಿ. ಶೈಕ್ಷಣಿಕವಾಗಿಯೂ ಹಾಲಕ್ಕಿಗಳು ಮುನ್ನಡೆಯುತ್ತಿರುವುದು ಸಂತಸದಾಯಕ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಇಡೀ ಸಮುದಾಯ ಪ್ರಗತಿ ಸಾಧಿಸಬಹುದು ಎಂದರು.

ಬಿಇಒ ಆರ್.ಎಲ್. ಭಟ್, ಡಿಎಫ್‌ಒ ಯೋಗೇಶ, ಗ್ರೇಡ್-೨ ತಹಸೀಲ್ದಾರ್‌ ಸತೀಶ ಗೌಡ, ಕರಾವಳಿ ಕಾವಲು ಪಡೆಯ ಪಿಎಸ್‌ಐ ಸಂಪತ್‌ಕುಮಾರ ಇ.ಸಿ. ಅಧ್ಯಕ್ಷತೆ ವಹಿಸಿದ್ದ ಹಾಲಕ್ಕಿ ಸಂಘದ ಅಧ್ಯಕ್ಷ ಗೋವಿಂದ ಗೌಡ ಮಾತನಾಡಿದರು.

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸುಗ್ಗಿ ಕುಣಿತ ಕಲಾವಿದ ಗಣಪು ಬಡವಾ ಗೌಡ, ನಾಟಿ ವೈದ್ಯ ಸುಗ್ಗಿ ಕುಪ್ಪು ಗೌಡ, ಜಾನಪದ ಕಲಾವಿದೆ ಸೋಮ ಗಣಪು ಗೌಡ ಅವರನ್ನು ಸನ್ಮಾನಿಸಲಾಯಿತು. ೭೨ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಅಶೋಕ ಗೌಡ, ಹೊನ್ನಾವರ ಪಿಯು ಕಾಲೇಜು ಪ್ರಾಚಾರ್ಯ ರವಿ ಗೌಡ, ಹಾಲಕ್ಕಿ ನೌಕರರ ಸಂಘದ ಅಧ್ಯಕ್ಷ ಜಂಗಾ ಗೌಡ, ಹೊನ್ನಾವರ ಪಪಂ ಸದಸ್ಯ ಸುಬ್ರಾಯ ಗೌಡ ಉಪಸ್ಥಿತರಿದ್ದರು.

ಶ್ರೀಧರ ಗೌಡ ಸ್ವಾಗತಿಸಿದರು. ನೀಲಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ಗೌಡ, ಈರು ಗೌಡ ಕಾರ್ಯಕ್ರಮ ನಿರ್ವಹಿಸಿದರು.