ದಾವಣಗೆರೆ ವೃತ್ತಿ ರಂಗಾಯಣ ಸ್ಟಾರ್‌ಗಳನ್ನು ರೂಪಿಸುವ ಕೇಂದ್ರವಾಗಲಿ

| Published : Sep 16 2024, 01:58 AM IST

ಸಾರಾಂಶ

ರಂಗಾಯಣದ 2024-25ನೇ ಸಾಲಿನ ರಂಗ ಚಟುವಟಿಕೆಗಳ ನಾಂದಿ-ಆರಂಭೋತ್ಸವ ಕಾರ್ಯಕ್ರಮದಲ್ಲಿ ಸಿ.ಬಸವಲಿಂಗಯ್ಯ ಕರೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ವೃತ್ತಿ, ಆಧುನಿಕ ರಂಗಭೂಮಿ ಬೆಸೆದು, ಸ್ಟಾರ್‌ಗಳನ್ನು ಹೊರ ತರಬೇಕೆಂಬ ಕನಸಿನಿಂದ ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರು ರಾಜ್ಯದಲ್ಲಿ ವೃತ್ತಿ ರಂಗಾಯಣವನ್ನು ಆರಂಭಿಸಿದ್ದು, ಮೈಸೂರು ರಂಗಾಯಣದಿಂದ ಮಂಡ್ಯ ರಮೇಶ್‌, ಅರುಣ್‌ ಸಾಗರ್‌ ಇತರೆ ಸ್ಟಾರ್‌ಗಳು ಹೊರ ಹೊಮ್ಮಿದಂತೆ ದಾವಣಗೆರೆ ವೃತ್ತಿ ರಂಗಾಯಣದಿಂದಲೂ ಸ್ಟಾರ್‌ಗಳು ಬರುವಂತೆ ಇಲ್ಲಿ ಕೆಲಸ ಆಗಬೇಕು ಎಂದು ಹೆಸರಾಂತ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಕರೆ ನೀಡಿದರು.

ನಗರದ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ರಂಗಭೂಮಿ ದಾವಣಗೆರೆ ರಂಗಾಯಣದ 2024-25ನೇ ಸಾಲಿನ ರಂಗ ಚಟುವಟಿಕೆಗಳ ನಾಂದಿ-ಆರಂಭೋತ್ಸವ ಕಾರ್ಯಕ್ರಮದ ಭಾಗವಾಗಿ ನಡೆದ ‘ವರ್ತಮಾನದ ವೃತ್ತಿ ರಂಗಭೂಮಿ ಬಿಕ್ಕಟ್ಟು ಮತ್ತು ಪರಿಹಾರ ವಿಷಯ ಕುರಿತ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ಅವರು, ದಾವಣಗೆರೆ ವೃತ್ತಿ ರಂಗಾಯಣವು ವೃತ್ತಿ ಪರ ನಾಯಕರನ್ನುಹಾಗೂ ಸ್ಟಾರ್‌ಗಳನ್ನು ಕಟ್ಟಿಕೊಡುವಂತಹ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಹೇಳಿದರು.

ಕನ್ನಡದ ವೃತ್ತಿ ನಾಟಕ ಶಾಲೆ ಸ್ಥಾಪಿಸುವ ಕನಸನ್ನು ಬಿ.ವಿ.ಕಾರಂತರು ಕಂಡಿದ್ದರು. ಮಧ್ಯ ಕರ್ನಾಟಕದ ದಾವಣಗೆರೆ ವೃತ್ತಿ ರಂಗಾಯಣ ಓದಿದ ಮತ್ತು ಓದದ 30 ಜನರನ್ನು ಆಯ್ಕೆಮಾಡಿ, ಸೂಕ್ತ ತರಬೇತಿಯ ಕೇಂದ್ರದ ಜೊತೆಗೆ ಮಾದರಿ ಕಲಾ ಶಾಲೆಯಾಗಿ ಹೊರ ಹೊಮ್ಮಬೇಕು. ಇಲ್ಲಿನ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಸೇರಿ ಇತರರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ವೃತ್ತಿ ರಂಗಭೂಮಿ, ರಂಗಾಯಣ ಚಟುವಟಿಕೆಗಿಂತಲೂ ಹೆಚ್ಚಾಗಿ ವೃತ್ತಿ ರಂಗಭೂಮಿ ಚಳವಳಿ ನಡೆಸಬೇಕು. ಚಟುವಟಿಕೆಗಳಿಗಿಂತ ರಂಗಭೂಮಿ ಚಳವಳಿ ಇಲ್ಲಿ ಆಗಲಿ ಎಂದರು.

ಹರಿಹರ ತಾಲೂಕಿನಲ್ಲಿ ಕೊಂಡಜ್ಜಿಯಲ್ಲಿ ನೀಡಿದ 10 ಎಕರೆ ಜಾಗದಲ್ಲಿ ರಂಗಭೂಮಿ ಪರಂಪರೆ ಕಟ್ಟಿಕೊಂಡುವ ವಸ್ತು ಸಂಗ್ರಹಾಲಯ ಸ್ಥಾಪಿಸುವ ಕನಸು ನನಸಾಗಲಿ. ನಟರು ಮತ್ತು ಪ್ರೇಕ್ಷಕರ ಮಧ್ಯೆ ಕೊಂಡಿಯಾದ ವೃತ್ತಿ ರಂಗಭೂಮಿ ಮತ್ತೆ ತನ್ನ ಗತವೈಭವ ಮರಳಿ ಪಡೆಯುವಂತಹ ಅವಕಾಶ ನಿರ್ಮಾಣವಾಗಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳುವ ಕೆಲಸವಾಗಲಿ ಎಂದು ನುಡಿದರು.

ರಂಗಭೂಮಿ ಎಂಬುದು ಎಂದಿಗೂ ವ್ಯವಹಾರದ ಕೇಂದ್ರ ಆಗಬಾರದು. ರಾಜ್ಯಕ್ಕೆ ಕರ್ನಾಟಕ ಹೆಸರು ಬಂದು 50ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಟಕೋತ್ಸವ ಆಚರಿಸಲು ಸಿದ್ಧತೆ ನಡೆದಿದೆ ಎಂದು ಅವರು ಹೇಳಿದರು.

ಸಂಸ್ಥೆಯ ಪ್ರಸಕ್ತ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಿದ ಡಿಸಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಲಾಗುವುದು. ಜಿಲ್ಲೆಯ ಜನತೆಗೆ ಸಾಂಸ್ಕೃತಿಕ ಮನೋರಂಜನೆ ಒದಗಿಸುವ ಉದ್ದೇಶದಿಂದ ಗಾಜಿನಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರುವಂತೆ ಹೆಚ್ಚು ಕಾರ್ಯಕ್ರಮ ನಡೆಸಲಾಗುವುದು. ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಕಲಾವಿದರರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಷೇಕ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವೃತ್ತಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕ ನುಡಿಗಳಾಡಿದರು. ಡಾ.ಪ್ರಕಾಶ ಗರುಡ, ನಾಟಕ ಕಂಪನಿ ಪರಂಪರೆ ಮತ್ತು ಪ್ರಯೋಗಶೀಲತೆ, ಬಸವರಾಜ ಬೆಂಗೇರಿ, ಸಾಹಿತ್ಯ ಮತ್ತು ಸಂಗೀತ, ಅರುಣ್ ಸಾಗರ್, ರಂಗ ಪರಿಕರ ಮತ್ತು ರಂಗಸಜ್ಜಿಕೆ ಬಗ್ಗೆ ವಿಷಯ ಮಂಡನೆ ಮಾಡಿದರು. ವಿಶೇಷಾಧಿಕಾರಿ ರವಿಚಂದ್ರ ಇತರರು, ಅನೇಕ ರಂಗಕರ್ಮಿ, ನಟರು ಇದ್ದರು.

*ದಾವಣಗೆರೆ ಮತ್ತೆ ರಂಗಭೂಮಿ ತವರಾಗುತ್ತಿದೆ: ಡಾ.ಪ್ರಭಾ

ಮಧ್ಯ ಕರ್ನಾಟಕದಲ್ಲಿ ವಿಶ್ವ ರಂಗಭೂಮಿ ಸ್ಥಾಪನೆಗೆ ಹಂಸಲೇಖ ಕೂಗು

ಕನ್ನಡಪ್ರಭ ವಾರ್ತೆ ದಾವಣಗೆರೆ:

ಬಹು ವರ್ಷಗಳ ನಂತರ ದಾವಣಗೆರೆಯಲ್ಲಿ ನಾಟಕ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮತ್ತೆ ವೃತ್ತಿ ರಂಗಭೂಮಿಯ ತವರಾಗುತ್ತಿರುವುದು ಆಶಾದಾಯಕ ಸಂಗತಿಯಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ರಂಗಬೂಮಿ ದಾವಣಗೆರೆ ರಂಗಾಯಣದ 2024-25ನೇ ಸಾಲಿನರಂಗ ಚಟುವಟಿಕೆಗಳ ನಾಂದಿ-ಆರಂಭೋತ್ಸವದಲ್ಲಿ ಮಾತನಾಡಿದ ಅವರು, ಜಿಲ್ಲಾ ರಂಗಭೂಮಿ ದುರಸ್ಥಿಗೆ ₹4.5 ಕೋಟಿ ಜೊತೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲೂ ಎಲ್ಲಾ ರೀತಿಯ ನೆರವು, ಸಹಕಾರ ನೀಡುತ್ತೇವೆ ಎಂದರು.

ದಾವಣಗೆರೆ ಸಾಕಷ್ಟು ಅಭಿವೃದ್ಧಿಯಾಗಿದ್ದು, ಸಾಂಸ್ಕೃತಿಕವಾಗಿಯೂ ಮತ್ತಷ್ಟು ಬೆಳೆಸಬೇಕಾಗಿದೆ. ಪಾಲಕರು ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು. ಇದರಿಂದ ಮಕ್ಕಳ ಸಮಗ್ರ ಅಭಿವೃದ್ಧಿ ಸಾಧ್ಯ. ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ಕನಸು ನನಸಾಗಿಸಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಸಂಸದರು ಭರವಸೆ ನೀಡಿದರು.

ರಂಗಜ್ಯೋತಿ ಬೆಳಗಿದ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ದಾವಣಗೆರೆಯಲ್ಲಿ ವಿಶ್ವ ರಂಗಭೂಮಿಯಾಗಬೇಕು. ಸಮಾಜದಲ್ಲಿ ಸಾಮರಸ್ಯ ಕಾಪಾಡುವುದೇ ಕಲೆಯಾಗಿದೆ. ರಾಜ್ಯದಲ್ಲಿ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಇವೆ. ಕೊಂಡಜ್ಜಿಯಲ್ಲಿ ವೃತ್ತಿ ರಂಗಭೂಮಿ ರಂಗಾಯಣಕ್ಕೆ ನೀಡಿದ 10 ಎಕರೆಯಲ್ಲಿ ವಿಶ್ವ ರಂಗಭೂಮಿಯಾಗಲಿ. ಥೈಲ್ಯಾಂಡ್‌ನಲ್ಲಿ ದೊಡ್ಡ ರಂಗಭೂಮಿ ಇದೆ. ಸಿಯಾಮ್ ನಿರಾಮಿತ್‌ ನಂತರ ದೊಡ್ಡ ರಂಗ ವೇದಿಕೆ ದಾವಣಗೆರೆಯಲ್ಲಿ ಆಗಬೇಕು. ಶ್ರೀ ವೃತ್ತಿ ರಂಗಾಯಣವಾಗಲಿ. ದೊಡ್ಡ ವಿಶ್ವ ರಂಗಮಂದಿರ ಇಲ್ಲಿ ನಿರ್ಮಾಣವಾಗಲಿ ಎಂದು ಹಾರೈಸಿದರು.

ಸಾಣೇಹಳ್ಳಿ ರಂಗ ಜಂಗಮ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಂಗ ಸಾನ್ನಿಧ್ಯ ವಹಿಸಿದ್ದರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ವಿಪ ಮಾಜಿ ಸದಸ್ಯ ಮೋಹನಕುಮಾರ ಕೊಂಡಜ್ಜಿ, ರಂಗ ಭೂಮಿ ನಟರಾದ ರಾಜು ತಾಳಿಕೋಟೆ, ಚಿಂದೋಡಿ ಶ್ರೀಕಂಠೇಶ್, ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ವಿಶೇಷಾಧಿಕಾರಿ ರವಿಚಂದ್ರ ಇತರರು ಇದ್ದರು.

ಸಂಜೆ ಗದಗದ ಶ್ರೀಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದಿಂದ ಪ್ರಸ್ತುತ ಪಡಿಸುವ ಅಕ್ಕ ಮಹಾದೇವಿ ನಾಟಕ ಪ್ರದರ್ಶನಗೊಂಡಿತು.