ಸಾರಾಂಶ
ರಾಷ್ಟ್ರೀಯ ವೃತ್ತಿ ರಂಗೋತ್ಸವ । ರಂಗಭೂಮಿ ಜಾತಿ ಇಲ್ಲದ ಜಾಗ
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆಯಲ್ಲಿ ರಂಗಭೂಮಿಯ ಥಿಯೇಟರ್ ಮ್ಯೂಸಿಯಂ, ಸಮುಚ್ಛಯ ಅವಶ್ಯಕವಾಗಿ ಆಗಬೇಕಿದ್ದು, ಕರ್ನಾಟಕದ ರಂಗ ಸಂಸ್ಕೃತಿಯ ಕೇಂದ್ರವೂ ಇಲ್ಲಿ ಆಗಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದ ದೃಶ್ಯಕಲಾ ಮಹಾವಿದ್ಯಾಯದಲ್ಲಿ ರಂಗಮಂದಿರದ ಕೋಲ ಶಾಂತಪ್ಪ ರಂಗಮಂಟಪದಲ್ಲಿ ಶನಿವಾರ ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ವೃತ್ತಿ ರಂಗೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿನ ಅಪೂರ್ಣ ರಂಗಮಂದಿರವನ್ನು ಪೂರ್ಣಗೊಳಿಸುವ ಕೆಲಸ ಆಗಬೇಕಾಗಿದೆ ಎಂದರು.ಜಾತ್ಯತೀತ ಜಾಗವೆಂದರೆ ಅದು ರಂಗಭೂಮಿ ಮಾತ್ರ. ರಂಗಭೂಮಿಗೆ ನಟರು, ನಟನೆಯಷ್ಟೇ ಜಾತಿಯಾಗಿದ್ದು, ಇದೊಂದು ಜಾತಿ ಇಲ್ಲದ ಜಾಗವಾಗಿದೆ. ಮಹಾಭಾರತ, ರಾಮಾಯಣ ಜನಮಾನಸದಲ್ಲಿ ಉಳಿದಿದೆಯೆಂದರೆ ರಂಗಭೂಮಿಯಿಂದಲೇ ಹೊರತು, ಜನರು ಓದಿರುವುದರಿಂದ ಅಲ್ಲ. ಅವುಗಳ ಪಾತ್ರ, ಪಾತ್ರಧಾರಿಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವುದು ನಾಟಕಗಳ ಪ್ರಭಾವಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕೊಂಡಜ್ಜಿಯಲ್ಲಿ ವೃತ್ತಿ ರಂಗಾಯಣ ಸಮುಚ್ಛಯ, ಥಿಯೇಟರ್ ನಿರ್ಮಾಣಕ್ಕೆ 3 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ. ರಂಗಭೂಮಿ ನಶಿಸಿ ಹೋಗುತ್ತಿದೆ. ಸರ್ಕಾರವು ಪ್ರೋತ್ಸಾಹಿಸಿದರೆ ರಂಗಭೂಮಿಯ ನಾಟಕಗಳು ಜೀವಂತವಾಗಿ ಉಳಿಯುತ್ತದೆ ಎಂದು ಮನವಿ ಮಾಡಿದರು.ರಂಗ ನಾಟಕಗಳನ್ನು ಉದ್ಘಾಟಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ನಾಟಕಗಳು ಸಮಾಜದ ಕನ್ನಡಿಯಂತೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ನಾಟಕಗಳ ಪಾತ್ರ ಹಿರಿದಾಗಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಸಿಎಂ ಸಿದ್ದರಾಮಯ್ಯ ರಂಗಾಯಣದ ಸಮುಚ್ಛಯ, ಥಿಯೇಟರ್ ನಿರ್ಮಿಸಲು ಅನುದಾನ ನೀಡಿದ್ದಾರೆ. ನಮ್ಮ ದೊಡ್ಡ ಕನಸೊಂದು ಈಡೇರುತ್ತಿರುವುದು ಸಂತಸ ತಂದಿದೆ ಎಂದರು.ಹಿರಿಯ ರಂಗಕರ್ಮಿಗಳಾದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಶತಾಯುಷಿ ಗುಬ್ಬಿ ಚನ್ನಬಸಯ್ಯ, ಡಾ.ನಾಗರತ್ನಮ್ಮ ಮರಿಯಮ್ಮನಹಳ್ಳಿ ಜೊತೆ ಸಂವಾದ ನಡೆಯಿತು. ಸಂವಾದದಲ್ಲಿ ಹಿರಿಯರಿಗೆ ನೀಡುತ್ತಿರುವ 2 ಸಾವಿರ ರು. ಮಾಸಾಶನ ಕಡಿಮೆಯಾಗುತ್ತಿದ್ದು, ಅದನ್ನು 5 ಸಾವಿರ ರು.ಗೆ ಹೆಚ್ಚಿಸುವಂತೆ ಒತ್ತಾಯಿಸಿದರು.
ರಂಗಾಯಣದ ಸಮುಚ್ಛಯ, ಥಿಯೇಟರ್ ಗೆ 3 ಕೋಟಿ ರು. ಅನುದಾನವನ್ನು ಸರ್ಕಾರ ನೀಡಿದ್ದು ಸ್ವಾಗತಾರ್ಹ. ಇದೇ ರೀತಿ ಸರ್ಕಾರ ಸಿದ್ದರಾಮಯ್ಯ ಬಂದದ್ದೆಲ್ಲ ಬರಲಿ ಅನ್ನಬೇಕು, ಡಿಕೆ ಶಿವಕುಮಾರ ಬರದಿದ್ದೆಲ್ಲ ನಂದಲ್ಲ ಅನ್ನಬೇಕು. ಆದರೆ, ಬಂದಿದ್ದೆಲ್ಲ ನನಗೇ ಬರಬೇಕಾದ್ದು, ನನಗೆ ಅಂದರೆ ಹೇಗೆ ಎಂದು ಮುಖ್ಯಮಂತ್ರಿ ಚಂದ್ರು ತಮ್ಮದೇ ಶೈಲಿಯಲ್ಲಿ ನಗೆಚಟಾಕಿ ಹಾರಿಸಿದರು.ದಾವಿವಿ ಉಪ ಕುಲಪತಿ ಪ್ರೊ.ಬಿ.ಡಿ.ಕುಂಬಾರ್, ರಂಗಕರ್ಮಿ ಕೃಷ್ಣಮೂರ್ತಿ ಇತರರು ಇದ್ದರು. ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು. ಡಾ.ಶೃತಿ ರಾಜ ನಿರೂಪಣೆ ಮಾಡಿದರು.