ಭಕ್ತಿ ಬದುಕಿನ ಭಾಗವಾಗಲಿ: ರೇವಣಸಿದ್ದೇಶ್ವರ ಶ್ರೀ

| Published : Aug 12 2025, 12:30 AM IST

ಸಾರಾಂಶ

ಭಕ್ತಿಯು ಮೂಲತತ್ವ ದೇವರಲ್ಲಿ ನಮ್ಮನ್ನು ಸಮರ್ಪಣೆ ಮಾಡಿಕೊಳ್ಳುದೆಂದರ್ಥ. ಭಕ್ತಿ ಎಂಬುದು ಕರ್ಮದ ಕ್ರಿಯಾಫಲವಲ್ಲ ಅಥವಾ ದೇವರು ನೀಡಿದ ಶಾಪವಲ್ಲ. ಇದೊಂದು ನಿತ್ಯ ಕಾಯಕಗಳಲ್ಲಿ ಒಂದಾಗಿದೆ.

ಬ್ಯಾಡಗಿ: ಭಕ್ತಿ ಬದುಕಿನ ಭಾಗವಾಗಬೇಕು. ದೈನಂದಿನ ಕ್ರಿಯೆಗಳಲ್ಲಿ ಪೂಜೆಯೂ ಒಂದೆಂದು ಮಾಡಿದಲ್ಲಿ ಮಾತ್ರ ದೇವರಿಗೆ ನಿಜವಾದ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಶಿಕಾರಿಪುರ ತಾಲೂಕಿನ ಕಡೆನಂದಿಹಳ್ಳಿ ಗ್ರಾಮದ ರೇವಣಸಿದ್ದೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ಪಟ್ಟಣದ ಶನೀಶ್ವರ ಮಂದಿರದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆ ಹಾಗೂ ವಿವಿಧ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ಉದ್ದೇಶ ಅಥವಾ ನಿರ್ದಿಷ್ಟ ಕಾರಣಗಳನ್ನು ಈಡೇರಿಸಿಕೊಳ್ಳಲು ಮಾತ್ರ ದೇವರ ಮೇಲೆ ಭಕ್ತಿ ತೋರುವ ಜನರೇ ಹೆಚ್ಚಾಗಿದ್ದು, ಇದನ್ನು ಸರ್ವತಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಭಕ್ತಿಯು ಮೂಲತತ್ವ ದೇವರಲ್ಲಿ ನಮ್ಮನ್ನು ಸಮರ್ಪಣೆ ಮಾಡಿಕೊಳ್ಳುದೆಂದರ್ಥ. ಭಕ್ತಿ ಎಂಬುದು ಕರ್ಮದ ಕ್ರಿಯಾಫಲವಲ್ಲ ಅಥವಾ ದೇವರು ನೀಡಿದ ಶಾಪವಲ್ಲ. ಇದೊಂದು ನಿತ್ಯ ಕಾಯಕಗಳಲ್ಲಿ ಒಂದಾಗಿದೆ. ನಿಜವಾದ ಭಕ್ತಿಯು ಸಾಮಾನ್ಯವಾಗಿ ನಿಸ್ವಾರ್ಥದಿಂದ ಸಮರ್ಪಣಾ ಮನೋಭಾವ ತೋರುವುದಾಗಿದೆ ಎಂದರು.

ದೃಢವಾದ ಬದ್ಧತೆ: ಭಕ್ತಿ ಕೇವಲ ಬಾಹ್ಯ ಪ್ರದರ್ಶನವಲ್ಲ, ಕಷ್ಟಗಳು ಎದುರಾದಾಗ ಪರಿಹರಿಸುವ ನಿಟ್ಟಿನಲ್ಲಿ ದೇವರಿಗೆ ಒಪ್ಪಿಸುವಂತಹ ಪ್ರಕ್ರಿಯೆಯಲ್ಲ, ಭಕ್ತಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಕೊಳ್ಳುವ ಧಾರ್ಮಿಕ ಆಚರಣೆಯಾಗಿದ್ದು, ದೃಢವಾದ ಬದ್ಧತೆ ಮತ್ತು ಅಚಲವಾದ ನಿಷ್ಠೆ ತೋರುವ ಮನುಷ್ಯನ ಆಂತರಿಕ ಕ್ರಿಯೆಗಳಲ್ಲಿ ಒಂದಾಗಿದೆ ಎಂದರು.

ಲಿಂಗಪೂಜೆಯಿಂದ ನೆಮ್ಮದಿ: ಸನಾತನ ಕಾಲದಿಂದಲೂ ದೈವ, ಧರ್ಮಗಳನ್ನು ನಂಬಿದ ನಾವು ಧಾರ್ಮಿಕ ತಳಹದಿಯ ಮೇಲೆ ಜೀವನ ಸಾಗಿಸುತ್ತಿದ್ದು, ಆಧುನಿಕ ಯುಗದಲ್ಲಿ ಭಕ್ತಿ ಭಾವಗಳು ಇಂದಿಗೂ ಉಳಿದುಕೊಂಡ ಪರಿಣಾಮ ಸಾಮಾಜಿಕ ವ್ಯವಸ್ಥೆ ಸುಗಮವಾಗಿ ಸಾಗುತ್ತಿದೆ. ಅಂಗದಲ್ಲಿರುವ ಲಿಂಗಪೂಜೆಯಿಂದ ಶಾಂತಿ, ನೆಮ್ಮದಿ ಕಂಡುಕೊಂಡಿದ್ದೇವೆ. ಪ್ರತಿದಿನ ಇಷ್ಟಲಿಂಗ ಪೂಜೆ, ಧ್ಯಾನದಿಂದ ಅರಿವು ಪಡೆದು ಉತ್ತಮ ಜೀವನ ನಡೆಸಬಹುದು ಎಂದರು.

ಶನೀಶ್ವರ ಮಂದಿರ ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ ಕಾರಗಿ ಮಾತನಾಡಿ, ದೇವಾಲಯಗಳಲ್ಲಿ ಸಂಪ್ರದಾಯ, ಆಚರಣೆಗಳನ್ನು ನೆರವೇರಿಸಬೇಕಿದೆ. ಹೊಸ ಪೀಳಿಗೆಯಲ್ಲಿ ಧಾರ್ಮಿಕ ಭಾವನೆಗಳನ್ನು ಬೆಳೆಸಬೇಕು. ಈ ಮೂಲಕ ಸನ್ಮಾರ್ಗದತ್ತ ಎಲ್ಲರ ಚಿಂತನೆಗಳ ಹರಿವು ನಡೆದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.

ಈ ವೇಳೆ ವರ್ತಕ ಚಂದ್ರಶೇಖರ ಅಂಗಡಿ, ಶಿವಾನಂದ ಸಾಲ್ಮನಿ, ಬಾಬಣ್ಣ ಹೂಲಿಹಳ್ಳಿ, ಶಂಕರರಾವ ಕುಲಕರ್ಣಿ, ಬಸನಗೌಡ ಅಣಜಿಗೌಡ್ರ, ಕುಸುಮಾ ಕಲಕಟ್ಟಿ, ಪ್ರಭಾಕರ ಸೂಡಿ, ಪ್ರಕಾಶ ಕೆಮ್ಮನಕೇರಿ, ಕುಮಾರ ಮಂಚಿಕೊಪ್ಪಇತರರಿದ್ದರು.