ʼಭಕ್ತಿ ಹರಿಯುವ ನದಿಯಂತೆ ಜೀವಂತವಾಗಿರಲಿʼ

| Published : Feb 11 2025, 12:49 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಪಾರ್ವತಾಂಭ ದೇವಾಲಯ ಲೋಕಾರ್ಪಣೆ ಮತ್ತು ಧಾರ್ಮಿಕ ಸಮಾರಂಭವನ್ನು ಕನಕಪುರ ಶ್ರೀ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತೀವ್ರವಾದ ಪ್ರೀತಿ ಇದ್ದರೆ ತಾನಾಗಿಯೇ ಭಕ್ತಿ ಬರಲಿದ್ದು, ಭಕ್ತಿ ಹರಿಯುವ ನದಿಯಂತೆ ಜೀವಂತವಾಗಿರಬೇಕು ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಹಸಗೂಲಿ ಗ್ರಾಮದ ಪಾರ್ವತಾಂಭ ದೇವಿ ನೂತನ ಶಿಲಾ ಪ್ರಾಣ ಪ್ರತಿಷ್ಠಾಪನೆ ಹಾಗೂ ಪಾರ್ವತಾಂಭ ದೇವಾಲಯದ ಕಳಸಾರೋಹಣ, ದೇವಾಲಯ ಲೋಕಾರ್ಪಣೆ ಮತ್ತು ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶ್ರದ್ಧೆ, ನಿಷ್ಠೆ, ವಿಶ್ವಾಸವಿದ್ದರೆ ಭಗವಂತ ಒಲಿಯುತ್ತಾನೆ. ಶ್ರದ್ಧೆ, ನಿಷ್ಠೆ ಇರಿಸಿಕೊಂಡು ನಡೆದರೆ ಭಗವಂತ ಖಂಡಿತ ಕಾಪಾಡುತ್ತಾನೆ. ಭಗವಂತನ ಪೂಜಿಸಿದರೆ ಸಮಾಧಾನ ಸಿಗಲಿದೆ ಎಂದರು.

ಕಷ್ಟದಲ್ಲಿರುವ ಸಕಲ ಜೀವ ರಾಶಿಗಳ ಕಾಪಾಡಿದರೆ ಅಥವಾ ಉಪಕಾರ ಮಾಡಿದರೆ ನಮಗೆ ಅರಿವಿಲ್ಲದಂತೆ ಮನಸ್ಸಿಗೆ ತೃಪ್ತಿ ಸಿಗಲಿದೆ. ಪಾರ್ವತಾಂಭ ಜನರ ಹಾಗೂ ಜಾನುವಾರುಗಳ ರಕ್ಷಿಸಿ ಎಂದರು. ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಮಠ, ದೇವಸ್ಥಾನಗಳಿಗೆ ಭಕ್ತರು ತಮ್ಮ ಕೈಲಾದ ನೆರವು ನೀಡುತ್ತಾರೆ ಗುಂಡ್ಲುಪೇಟೆಯ ಜನರಂತೂ ಉದಾರಿಗಳು ಹಾಗೂ ದಾನಿಗಳು ಎಂದರು.

ಇಲ್ಲೂ ನವರಾತ್ರಿ:

ಮೈಸೂರಲ್ಲಿ ನವರಾತ್ರಿ ನಡೆಯುತ್ತದೆ. ೧೦ನೇ ದಿನ ದಸರಾ ನಡೆಯುತ್ತದೆ. ಆದರೆ ಹಸಗೂಲಿಯಲ್ಲಿ ಪಾರ್ವತಾಂಭ ದೇವಸ್ಥಾನ ಉದ್ಘಾಟನೆ ಕಳೆದ ೯ ದಿನಗಳಿಂದಲೂ ನವರಾತ್ರಿಯಂತೆ ಜನರು ದಸರಾದಂತೆ ಆಚರಿಸಿದ್ದಾರೆ ಎಂದರು. ಹಸಗೂಲಿಯಲ್ಲಿ ಜಾತ್ರೆಯ ಸಂಭ್ರಮ ಕಂಡೆ. ಪಾರ್ವತಾಂಭೆ ಈ ಭಾಗದ ಪ್ರಸಿದ್ಧ ದೇವತೆ ಆಗಿದ್ದು, ಜನರು ಕೂಡ ಭಕ್ತಿ ತೋರಿಸುವ ಕಾರಣ ದೊಡ್ಡ ಜಾತ್ರೆಯಂತೆ ಭಾಸವಾಗುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕನಕಪುರ ದೇಗುಲ ಮಠಾಧೀಶ ಚನ್ನಬಸವಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿ ವೈವಿದ್ಯಮಯವಾಗಿದೆ. ಧಾರ್ಮಿಕ ಪ್ರಜ್ಞೆ ಬರಬೇಕು ಎಂದರು. ಸೋಮಹಳ್ಳಿ ಮಠಾಧೀಶ ಸಿದ್ದಮಲ್ಲಸ್ವಾಮೀಜಿ, ಗಾವಡೆಗೆರೆ ಗುರುಲಿಂಗ ಜಂಗಮ ದೇವರ ಮಠಾಧೀಶ ನಟರಾಜಸ್ವಾಮೀಜಿ, ಅಂಕನಹಳ್ಳಿ ಗವಿ ಮಠಾಧೀಶ ಶಿವರುದ್ರಸ್ವಾಮೀಜಿ, ಸರಗೂರು ಹೊಸಮಠಾಧೀಶ ಬಸವರಾಜೇಂದ್ರ ಸ್ವಾಮೀಜಿ, ಚಿಕ್ಕತುಪ್ಪೂರು ಮಠಾಧೀಶ ಚನ್ನವೀರಸ್ವಾಮೀಜಿ, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಮಾತನಾಡಿದರು.

ದೇವನೂರು ಮಠಾಧೀಶ ಮಹಾಂತಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್‌, ಖಚಾಂಜಿ ಎಚ್.ಎಸ್.ಮಹೇಶ್‌, ಗೌಡಿಕೆ ಉಮೇಶ್‌, ಅಶೋಕ್‌, ಶಂಕರಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

ಸಹಸ್ರಾರು ಮಂದಿಗೆ ಪ್ರಸಾದ:ಪಾರ್ವತಾಂಭ ದೇವಿನ ನೂತನ ಶಿಲಾ ದೇವತೆಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಪಾರ್ವತಾಂಭ ದೇವಾಲಯದ ಕಳಸಾರೋಹಣ, ದೇವಾಲಯ ಲೋಕಾರ್ಪಣೆ ಮತ್ತು ಧಾರ್ಮಿಕ ಸಮಾರಂಭಕ್ಕೆ ಆಗಮಿಸಿದ್ದ ಸಹಸ್ರಾರು ಮಂದಿ ಪ್ರಸಾದ ಸ್ವೀಕರಿಸಿದರು.

ಸಿದ್ದಗಂಗಾ ಶ್ರೀ ಭೇಟಿ:

ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಪಾರ್ವತಾಂಭ ದೇವಾಲಯ ಲೋಕಾರ್ಪಣೆ ಮತ್ತು ಧಾರ್ಮಿಕ ಸಮಾರಂಭಕ್ಕೆ ಸಿದ್ದಗಂಗಾ ಮಠಾಧೀಶ ಸಿದ್ದಲಿಂಗ ಮಹಾಸ್ವಾಮೀಜಿ ಸೇರಿದಂತೆ ಮೈಸೂರು, ಚಾಮರಾಜನಗರ ಜಿಲ್ಲೆಯ ವಿವಿಧ ಸ್ವಾಮೀಜಿ ಭೇಟಿ ನೀಡಿದರು.