ಧಾರವಾಡದ ಥ್ಯಾಕರೆ ಸಮಾಧಿ ಪ್ರವಾಸಿ ತಾಣವಾಗಲಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ

| Published : Nov 24 2024, 01:46 AM IST

ಧಾರವಾಡದ ಥ್ಯಾಕರೆ ಸಮಾಧಿ ಪ್ರವಾಸಿ ತಾಣವಾಗಲಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರದ ಅನಿರೀಕ್ಷಿತ ಭೇಟಿಯಲ್ಲಿ ಥ್ಯಾಕರೆ ಸಮಾಧಿ ಸ್ಥಳ, ಹೊಸಯಲ್ಲಾಪೂರ ಕಸ ಸಂಗ್ರಹಣಾ ಸ್ಥಳ, ವಸತಿ ನಿಲಯ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲಿನ ಅವ್ಯವಸ್ಥೆ ಬಗ್ಗೆ ಸ್ಥಳೀಯ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಧಾರವಾಡ: ನಗರ ಸುಸಂಸ್ಕೃತರ ನಾಡು. ವಿದ್ಯಾವಂತರ ನಾಡು ಎಂದು ಖ್ಯಾತಿ ಪಡೆದಿದೆ. ಆದರೆ, ಇಲ್ಲಿನ ಅವ್ಯವಸ್ಥೆ ನೋಡಿ ನನಗಂತೂ ಬೇಸರವಾಗಿದೆ. ಗಟಾರುಗಳು ತುಂಬಿಕೊಂಡಿವೆ. ಎಲ್ಲೆಂದರಲ್ಲಿ ಕಸ, ಒಳಚರಂಡಿ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಕೆರೆಗಳು ಹಾಳಾಗಿವೆ. ರಸ್ತೆಗಳು ಗುಂಡಿ ಬಿದ್ದಿವೆ. ಧಾರವಾಡದ ಮೂಲಸೌಕರ್ಯಗಳ ಬಗ್ಗೆ ತುಂಬ ಬೇಸರ ಇದೆ.

ಸತತವಾಗಿ ಮೂರು ದಿನಗಳ ಕಾಲ ಧಾರವಾಡದ ಅನೇಕ ಅಸ್ತವ್ಯಸ್ತಗಳನ್ನು ಅನಿರೀಕ್ಷಿತ ಭೇಟಿ ಮೂಲಕ ಪರಿಶೀಲಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಹೇಳಿರುವ ಮಾತಿದು.

ಶನಿವಾರದ ಅನಿರೀಕ್ಷಿತ ಭೇಟಿಯಲ್ಲಿ ಥ್ಯಾಕರೆ ಸಮಾಧಿ ಸ್ಥಳ, ಹೊಸಯಲ್ಲಾಪೂರ ಕಸ ಸಂಗ್ರಹಣಾ ಸ್ಥಳ, ವಸತಿ ನಿಲಯ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲಿನ ಅವ್ಯವಸ್ಥೆ ಬಗ್ಗೆ ಸ್ಥಳೀಯ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸಮಾಧಿ ಪ್ರವಾಸಿ ತಾಣವಾಗಲಿ

ಮೊದಲಿಗೆ ಶಿವಾಜಿ ವೃತ್ತದ ಬಳಿಯ ಥ್ಯಾಕರೆ ಸಮಾಧಿಗೆ ಭೇಟಿ ನೀಡಿದಾಗ, ಅನಧಿಕೃತವಾಗಿ ಸಮಾಧಿ ಬಳಿ ದನಕರುಗಳನ್ನು ಕಟ್ಟುವುದು, ಮಾಂಸ ಮಾರಾಟ ಸ್ಥಳವನ್ನಾಗಿ ಮಾಡಿಕೊಂಡಿರುವ ಸಂಗತಿ ತಿಳಿದು ಪಾಲಿಕೆ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಿತ್ತೂರು ರಾಣಿ ಚೆನ್ನಮ್ಮಳಿಂದ ಬಲಿಯಾದ ಥ್ಯಾಕರೆ ಸಮಾಧಿ ಇದು. ಮುಂದಿನ ಪೀಳಿಗೆಗೆ ಈ ಸಂಗತಿ ಹೇಗೆ ಗೊತ್ತಾಗಬೇಕು. ಕೂಡಲೇ ಈ ಸ್ಥಳವನ್ನು ತೆರವುಗೊಳಿಸಿ ಊರ ಹೊರಗೆ ಮಾಂಸದ ಮಾರುಕಟ್ಟೆ ನಿರ್ಮಿಸಬೇಕು. ಈ ಸ್ಥಳದಲ್ಲಿ ಪ್ರವಾಸ ತಾಣ ಅಥವಾ ಉದ್ಯಾನವನ ಮಾಡಿ ಸಮಾಧಿ ರಕ್ಷಿಸಬೇಕು ಎಂದು ಸೂಚನೆ ನೀಡಿದರು.

ತ್ಯಾಜ್ಯ ವಿಲೇವಾರಿ ಘಟಕ

ತದ ನಂತರ ಹೊಸಯಲ್ಲಾಪುರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನ್ಯಾಯಮೂರ್ತಿಗಳು ಭೇಟಿ ನೀಡಿ, ಇಂತಹ ಕಸದ ಬೆಟ್ಟ ಎಲ್ಲಿ ನೋಡಿಲ್ಲ. ಈಗಿರುವ ಯಂತ್ರೋಪಕರಣಗಳಿಂದ ಇದನ್ನು ಸಂಸ್ಕರಿಸಲು ಸಾಧ್ಯವೇ ಇಲ್ಲ. ಹೆಚ್ಚಿನ ಸಾಮರ್ಥ್ಯದ ಯಂತ್ರ ಬಳಸಿ ತ್ಯಾಜ್ಯವನ್ನು ಸಂಸ್ಕರಿಸಿ ವಿಲೇವಾರಿ ಮಾಡಲು ಸ್ಥಳದಲ್ಲಿದ್ದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿಗೆ ಸೂಚಿಸಿದರು.

ಹಾಸ್ಟೇಲ್‌ ಭೇಟಿ

ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ದಿಢೀರ ಭೇಟಿ ನೀಡಿದ ಉಪಲೋಕಾಯುಕ್ತರು ವಸತಿ ನಿಲಯದಲ್ಲಿ ಸ್ವಚ್ಚತೆ, ನೈರ್ಮಲ್ಯ ಕಾಪಾಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಸಮಯದಲ್ಲಿ ವಿದ್ಯಾರ್ಥಿಗಳು ಸಹ ದೂರು ನೀಡಿದರು. ಅಡುಗೆ ಕೋಣೆ, ಊಟದ ಸಭಾಂಗಣ, ವಾಚನಾಲಯ, ದಾಸ್ತಾನು ಕೊಠಡಿ, ಬಟ್ಟೆ ತೊಳೆಯುವ ಸ್ಥಳಗಳಿಗೆ ಭೇಟಿ ನೀಡಿ, ಅಸ್ವಚ್ಚತೆ, ಅನೈರ್ಮಲ್ಯ ಕಂಡು ಇನ್ಮುಂದೆ ಹೀಗಾಗದಂತೆ ವಾರ್ಡ್‌ನೆಗೆ ತಾಕೀತು ಮಾಡಿದರು. ಮುಂದಿನ ಇಪ್ಪತ್ತು ದಿನಗಳಲ್ಲಿ ಸುಧಾರಿಸಿ, ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ವಸತಿನಿಲಯದ ನಿಲಯ ಪಾಲಕಿ ಹಾಗೂ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಸ್ಪತ್ರೆ

ಆಸ್ಪತ್ರೆಯ ವಿವಿಧ ವಾರ್ಡಗಳಿಗೆ ತೆರಳಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳನ್ನು, ರೋಗಿಯ ಸಂಬಂಧಿಕರನ್ನು ಮಾತನಾಡಿಸಿ, ಗುಣಮಟ್ಟದ ಚಿಕಿತ್ಸೆ, ಉಚಿತ ಔಷಧಿ ವಿತರಣೆ, ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಸ್ಪಂದನೆ ಮತ್ತು ಆಸ್ಪತ್ರೆಯ ಮೂಲಸೌಕರ್ಯಗಳ ಕುರಿತು ವಿಚಾರಿಸಿ, ಮಾಹಿತಿ ಪಡೆದರು. ರೋಗಿಗಳ ಅಭಿಪ್ರಾಯದಿಂದಾಗಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಡವರಿಗೆ ಗುಣಮಟ್ಟದ ಚಿಕಿತ್ಸೆ, ಆರೈಕೆ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ.ಸಿಇಓ ಸ್ವರೂಪ ಟಿ.ಕೆ., ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಜಾತಾ ಹಸವೀಮಠ, ಪಾಲಿಕೆ ಆಯುಕ್ತ ಡಾ. ಉಳ್ಳಾಗಡ್ಡಿ ಮತ್ತಿತರರು ಇದ್ದರು.

ವರದಿ ಕೊಡುವ ಅಧಿಕಾರವಿದೆ, ಕ್ರಮ ಕೈಗೊಳ್ಳಲು ಇಲ್ಲವ್ಯವಸ್ಥೆ ಸುಧಾರಣೆ ವರದಿ ನೀಡುತ್ತೇವೆ, ಸರ್ಕಾರ ಕ್ರಮ ಕೈಗೊಳ್ಳಲಿದೆ

ಧಾರವಾಡ: ಲೋಕಾಯುಕ್ತ ಸಂಸ್ಥೆಯು ವ್ಯವಸ್ಥೆ ಸುಧಾರಣೆಯ ಕುರಿತು ಸರ್ಕಾರಕ್ಕೆ ವರದಿ ನೀಡುವ ಅಧಿಕಾರ ಮಾತ್ರ ಹೊಂದಿದೆ. ಆದರೆ, ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿಲ್ಲ. ಈ ವಿಷಯವಾಗಿ ಕ್ರಮ ಕೈಗೊಳ್ಳುವ, ತೀರ್ಮಾನ ಕೈಗೊಳ್ಳುವ ಹೆಚ್ಚಿನ ಅಧಿಕಾರ ಕೊಟ್ಟಿದ್ದರೆ ಒಳ್ಳೆಯದಿತ್ತು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ವ್ಯವಸ್ಥೆಯಲ್ಲಿನ ಲೋಪದೋಷಗಳ ಸುಧಾರಣೆ ಬಗ್ಗೆ ಸರ್ಕಾರಕ್ಕೆ ವರದಿಗಳನ್ನು ನೀಡುತ್ತಿದ್ದೇವೆ. ಕ್ರಮ ಕೈಗೊಳ್ಳಲು ಸೂಚಿಸಲೂಬಹುದು. ಆದರೆ, ಕ್ರಮ ಕೈಗೊಳ್ಳುವ ವಿಚಾರ ಮಾತ್ರ ಸರ್ಕಾರಕ್ಕೆ ಬಿಟ್ಟಿದ್ದು. ಈ ವಿಷಯದಲ್ಲಿ ತಮ್ಮ ಅಧಿಕಾರ ಏನಿಲ್ಲ. ತಮಗೆ ಅಧಿಕಾರ ಕೊಡುವ ಬಗ್ಗೆ ಅನೇಕ ಬಾರಿ ಸರ್ಕಾರಕ್ಕೆ ಕೇಳಲಾಗಿದೆ. ಒತ್ತಡ ಹೇರುವ ಹಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಕಷ್ಟು ಬಾರಿ ತಾವು ನೀಡಿದ ವರದಿ ಅನ್ವಯ ಸರ್ಕಾರ ಕ್ರಮ ಕೈಗೊಂಡಿದೆ. ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವ್ಯವಸ್ಥೆ ಸುಧಾರಣೆಯಾಗಿದ್ದು, ದಾಖಲಾದ ಪ್ರಕರಣಗಳ ಬೆನ್ನು ಹತ್ತಿ ವ್ಯವಸ್ಥೆ ಸರಿ ಮಾಡಲು ಪಣ ತೊಟ್ಟಿದ್ದೇವೆ. ಲೋಕಾಯುಕ್ತ ಬಗ್ಗೆ ಸಾರ್ವಜನಿಕರು ಇನ್ನೂ ಹೆಚ್ಚಿನ ಮಾಹಿತಿ ಪಡೆದು ಸಂಸ್ಥೆಯನ್ನು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.