ದಿಂಗಾಲೇಶ್ವರ ಶ್ರೀ ಖಾವಿ ಕಳಚಿಟ್ಟು ರಾಜಕೀಯಕ್ಕೆ ಬರಲಿ

| Published : Apr 13 2024, 01:04 AM IST

ದಿಂಗಾಲೇಶ್ವರ ಶ್ರೀ ಖಾವಿ ಕಳಚಿಟ್ಟು ರಾಜಕೀಯಕ್ಕೆ ಬರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಫಕೀರೇಶ್ವರ ಮಠ ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ ಹೆಚ್ಚು ಅಭಿವೃದ್ಧಿಯಾಗುವ ಜತೆಗೆ ಹಿರಿಯ ಶ್ರೀಗಳಿಗೆ ವಯಸ್ಸಾದ ಹಿನ್ನೆಲೆಯಲ್ಲಿ ಇವರನ್ನು ಶ್ರೀ ಮಠಕ್ಕೆ ಉತ್ತರಾಧಿಕಾರಿ ಮಾಡಲಾಗಿದೆ

ಶಿರಹಟ್ಟಿ: ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳನ್ನು ಶಿರಹಟ್ಟಿ ಭಾವೈಕ್ಯತೆ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಿದ್ದು, ಮಠದ ಉದ್ಧಾರಕ್ಕಾಗಿಯೇ ಹೊರತು, ರಾಜಕೀಯ ರಂಗ ಪ್ರವೇಶ ಮಾಡಲು ಅಲ್ಲ. ರಾಜಕೀಯ ಕ್ಷೇತ್ರ ಅವರಿಗಿಷ್ಟವಾದರೆ ಖಾವಿ ಬಟ್ಟೆ ಬಕಳಚಿಟ್ಟು ಖಾದಿ ಬಟ್ಟೆ ಧರಿಸಿ ರಾಜಕೀಯ ಮಾಡಲಿ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಎಚ್ಚರಿಕೆ ನೀಡಿದರು.

ಫಕ್ಕೀರೇಶ್ವರ ಮಠದ ಹಿರಿಯ ಭಕ್ತರೂ ಆಗಿರುವ ಮಹಾಂತಶೆಟ್ಟರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸುತ್ತ, ಫಕೀರೇಶ್ವರ ಮಠ ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ ಹೆಚ್ಚು ಅಭಿವೃದ್ಧಿಯಾಗುವ ಜತೆಗೆ ಹಿರಿಯ ಶ್ರೀಗಳಿಗೆ ವಯಸ್ಸಾದ ಹಿನ್ನೆಲೆಯಲ್ಲಿ ಇವರನ್ನು ಶ್ರೀ ಮಠಕ್ಕೆ ಉತ್ತರಾಧಿಕಾರಿ ಮಾಡಲಾಗಿದೆ. ರಾಜಕೀಯ ಅವರ ವ್ಯಕ್ತಿತ್ವಕ್ಕೆ, ಮಠಕ್ಕೆ ಶೋಭೆ ತರುವಂತದ್ದಲ್ಲ. ಅವರ ವ್ಯಕ್ತಿತ್ವಕ್ಕೆ ಮತ್ತು ಮಠಕ್ಕೆ ಚ್ಯುತಿ ಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಇದು ಪ್ರಜಾಪ್ರಭುತ್ವ ದೇಶ. ಯಾವ ವ್ಯಕ್ತಿ ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಆದರೆ ಶಿರಹಟ್ಟಿ ಫಕೀರೇಶ್ವರ ಮಠ ಭಾವ್ಯಕ್ಯತೆ ಮಠವಾಗಿದ್ದು, ಇಲ್ಲಿ ರಾಜಕೀಯ ಬೆರಸಲು ಸಾಧ್ಯವಿಲ್ಲ ಮತ್ತು ಅವಕಾಶವಿಲ್ಲ. ಪೀಠ ಬಿಟ್ಟು ರಾಜಕೀಯ ಮಾಡಲಿ. ಪ್ರಮುಖವಾಗಿ ಅವರು ರಾಜಕೀಯ ಪ್ರವೇಶ ಮಾಡುವ ವಿಷಯವನ್ನು ಕಮೀಟಿ ಸದಸ್ಯರು ಅಥವಾ ಭಕ್ತ ಸಮೂಹದ ಗಮನಕ್ಕೆ ತಂದಿಲ್ಲ. ಇದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಹೇಳಿದರು.

ನಾವೂ ನಿರ್ಧಾರಕ್ಕೆ ಬರುತ್ತೇವೆ: ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಮಾತನಾಡಿ, ಏ.೧೮ ನಂತರ ಶ್ರೀಗಳ ನಡೆ ಗಮನಿಸಿ ಮುಂದಿನ ತೀರ್ಮಾನ ಮಾಡೋಣ. ಅಲ್ಲಿಯವರೆಗೆ ಶ್ರೀಗಳ ರಾಜಕೀಯ ನಡೆ ಬಗ್ಗೆ ಕಾದು ನೋಡೋಣ, ಮುಖ್ಯವಾಗಿ ಇನ್ನು ಒಂದು ಸುತ್ತು ಅವರ ಮನವೊಲಿಸುವ ಪ್ರಯತ್ನ ಮಾಡೋಣ. ಇದನ್ನು ಮೀರಿ ಅವರು ಚುನಾವಣಾ ಕಣದಲ್ಲಿ ನಿಂತರೆ ಅಂದೇ ಎಲ್ಲ ಭಕ್ತಸಮೂಹ ಹಾಗೂ ಮುಖಂಡರನ್ನು ಕರೆಯಿಸಿ ಪತ್ರಿಕಾಗೋಷ್ಠಿ ನಡೆಸಿ ನಮ್ಮ ನಡೆ ಮತ್ತು ನಿರ್ಧಾರ ಪ್ರಕಟ ಮಾಡುತ್ತೇವೆ. ನಾವೂ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಕಟುವಾಗಿ ಎಚ್ಚರಿಸಿದರು.

ಮಾಜಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ರಾಜಕೀಯ ನಡೆ ಶ್ರೀಗಳಿಗೆ ಶೋಭೆ ತರುವಂಥದ್ದಲ್ಲ. ಶ್ರೀಮಠಕ್ಕೆ ಎಲ್ಲ ಜಾತಿ ಜನಾಂಗ, ವರ್ಗಗಳ ಭಕ್ತರಿದ್ದು, ಅವರ ಮನಸ್ಸನ್ನು ಕದಡುವಂತಹ ಪ್ರಯತ್ನ ಮಾಡುವದು ಸೂಕ್ತವಲ್ಲ. ಇನ್ನೊಮ್ಮೆ ಮಗದೊಮ್ಮೆ ಅವರ ಮನ ಪರಿವರ್ತನೆ ಮಾಡುವ ಕೆಲಸ ಮಾಡೋಣ. ಕಾಲಾವಕಾಶ ಮಿಂಚಿಲ್ಲ. ಮಠದ ಪರಂಪರೆ ಗಮನದಲ್ಲಿಟ್ಟುಕೊಂಡು ಸೂಕ್ಷ್ಮವಾಗಿ ಶ್ರೀಗಳು ಚಿಂತನ ಮಂಥನ ಮಾಡಬೇಕು ಎಂದು ಹೇಳಿದರು.

ನಿಲುವು ಬದಲಿಸಲು ಕಿವಿಮಾತು: ಶ್ರೀಗಳ ರಾಜಕೀಯ ಪ್ರವೇಶದ ನಡೆ ಶಿರಹಟ್ಟಿ ಮಠದ ಭಕ್ತರೆಲ್ಲರಿಗೂ ನೋವನ್ನುಂಟು ಮಾಡಿದೆ. ಈಗಲೂ ಕಾಲ ಮಿಂಚಿಲ್ಲ, ತಮ್ಮ ರಾಜಕೀಯ ನಿಲುವು ಬಿಟ್ಟು ಹೊರಗೆ ಬಂದು ಮಠ ಮುನ್ನೆಡಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್.ಗೋವಿಂದಗೌಡ್ರ, ಚಂದ್ರಕಾಂತ ನೂರಶೆಟ್ಟರ, ಬಿ.ಡಿ. ಪಲ್ಲೇದ, ಸಣ್ಣವೀರಪ್ಪ ಹಳ್ಳೆಪ್ಪನವರ, ನಾಗರಾಜ ಲಕ್ಕುಂಡಿ, ಸಂದೀಪ ಕಪ್ಪತ್ತನವರ, ಫಕೀರೇಶ ರಟ್ಟಿಹಳ್ಳಿ, ಯಲ್ಲಪ್ಪ ಇಂಗಳಗಿ, ಅಶೋಕ ವರವಿ, ಸುರೇಶ ಹವಳದ, ದೇವಪ್ಪ ವರವಿ, ಮಹೇಶ ಕಲ್ಲಪ್ಪನವರ, ಬಸವರಾಜ ತುಳಿ, ಅಶೋಕ ಕೋಲಾರ, ಎಂ.ಸಿ. ಹಿರೇಮಠ, ಸುದೀರ ಜಮಖಂಡಿ, ಅಕ್ಬರ ಯಾದಗಿರಿ, ಬಸವರಾಜ ವಡವಿ, ಚನ್ನವೀರಪ್ಪ ಕಲ್ಯಾಣಿ, ಶಿವು ಕಲ್ಯಾಣಿ ಮತ್ತಿತರರು ಉಪಸ್ಥಿತರಿದ್ದರು.