ಸಾರಾಂಶ
ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಕಾರವಾರಮಹಿಳೆಯರು ತಮ್ಮ ಮೇಲೆ ನಡೆಯುವ ಯಾವುದೇ ರೀತಿಯ ದೌರ್ಜನ್ಯಗಳ ಬಗ್ಗೆ ಉಚಿತ ಸಹಾಯವಾಣಿ ಸಂಖ್ಯೆ 181 ಕರೆ ಮಾಡುವ ಮೂಲಕ ತಕ್ಷಣವೇ ನೆರವು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಮೂಲಕ ಪ್ರಸಕ್ತ ಸಾಲಿನಲ್ಲಿ ಸೆಪ್ಟಂಬರ್‌ವರೆಗೆ 74 ಪ್ರಕರಣಗಳು ದಾಖಲಾಗಿದ್ದು, ನೊಂದ ಮಹಿಳೆಯರಿಗೆ ಕಾನೂನು ನೆರವು, ವೈದ್ಯಕೀಯ ನೆರವು, ಪೊಲೀಸ್ ನೆರವು ಹಾಗೂ ಸಮಾಲೋಚನೆ ನಡೆಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಾಂತ್ವನ ಯೋಜನೆಯ ಮೂಲಕ ನೊಂದ ಮಹಿಳೆಯರಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅಗತ್ಯ ನೆರವು ನೀಡಲಾಗುತ್ತಿದ್ದು, ಈ ಕೇಂದ್ರಗಳ ಸಿಬ್ಬಂದಿ 24x7 ಮಹಿಳೆಯರಿಗೆ ನೆರವಿಗೆ ಸ್ಪಂದಿಸಬೇಕು, ಪ್ರಸಕ್ತ ಸಾಲಿನಲ್ಲಿ ಈ ಕೇಂದ್ರಗಳ ಮೂಲಕ 395 ದೂರು ಸ್ವೀಕರಿಸಿ ಎಲ್ಲಾ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಸಾಂತ್ವನ ಕೇಂದ್ರದ ಸಿಬ್ಬಂದಿ ಮಹಿಳೆಯರು ನೀಡುವ ದೂರುಗಳ ಕುರಿತು ಇನ್ನಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುವ ಮೂಲಕ ತಪ್ಪು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗುವಂತೆ ನೋಡಿಕೊಳ್ಳಬೇಕು ಎಂದರು.ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತಂತೆ ರಚಿಸಲಾಗಿರುವ ಗ್ರಾಮ ಮಟ್ಟದಿಂದ ರಚಿಸಲಾಗಿರುವ ಎಲ್ಲಾ ಸಮಿತಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳು ನಡೆಯದಂತೆ ಈ ಬಗ್ಗೆ ಸಾರ್ವಜನಿಕವಾಗಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಆಯೋಜಿಸಬೇಕು, ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಪ್ರಸಕ್ತ ಸಾಲಿನಲ್ಲಿ 17 ಪೋಕ್ಸೋ ಪ್ರಕರಣಗಳು ವರದಿಯಾಗಿದ್ದು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮ ಆಯೋಜಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಶೇ.100ರಷ್ಟು ಸಾಧನೆ ಆಗಬೇಕು, ತೀವ್ರ ಅಪೌಷ್ಠಿಕತೆಯಿಂದ ಬಳಸುತ್ತಿರುವ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದರು.ಗೃಹಲಕ್ಷ್ಮಿ ಯೋಜನೆಯಡಿ ನೊಂದಾವಣೆಯಾಗಿರುವ ಎಲ್ಲಾ ಮಹಿಳೆಯರಿಗೆ ಯೋಜನೆಯ ಪ್ರಯೋಜನೆ ದೊರೆಯುವಂತೆ ನೋಡಿಕೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಹಿಳಾ ಅಭಿವೃದ್ದಿ ನಿಗಮದಿಂದ, ಲಿಂಗತ್ವ ಅಲ್ಪಸಂಖ್ಯಾತರು, ಎಚ್.ಐ.ವಿ. ಸೋಂಕಿತರು ಮತ್ತು ದಮನಿತ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಿ ಅವರಿಗೆ ಈ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಜೂಫಿಶಾನ್ ಹಕ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ನಟರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ನಿರೂಪಣಾಧಿಕಾರಿ ವಿರೂಪಾಕ್ಷ ಗೌಡ ಪಾಟೀಲ್ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))