ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಒಂದಿಂಚು ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಿಡುವುದಿಲ್ಲ. ಈ ಯೋಜನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಮಾತ್ರವಲ್ಲ ಯಾರು ಬೇಕಾದರು ಬಹಿರಂಗ ಚರ್ಚೆಗೆ ಬರಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸವಾಲು ಹಾಕಿದರು

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಒಂದಿಂಚು ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಿಡುವುದಿಲ್ಲ. ಈ ಯೋಜನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಮಾತ್ರವಲ್ಲ ಯಾರು ಬೇಕಾದರು ಬಹಿರಂಗ ಚರ್ಚೆಗೆ ಬರಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸವಾಲು ಹಾಕಿದರು.

ಬಿಡದಿ ಹೋಬಳಿಯ ಬೈರಮಂಗಲದ ಶ್ರೀ ಭಕ್ತಾಂಜನೇಯ ದೇವಾಲಯದ ಆವರಣದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಹಿರಂಗ ಚರ್ಚೆಗೆ ಅವರುಗಳೇ ದಿನಾಂಕ ಮತ್ತು ವೇದಿಕೆ ನಿಗದಿ ಪಡಿಸಲಿ ಬರುತ್ತೇನೆ. ಕೊನೆ ಉಸಿರು ಇರುವವರೆಗೂ ಹೋರಾಡಲು ನೀವು ಶಕ್ತಿ ಕೊಟ್ಟಿದ್ದೀರಿ. ಬೆನ್ನು ತೋರಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಡಿಕೆಶಿಗೂ ನನಗೂ ಹೋಲಿಸಬೇಡಿ:

ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೌನ್ ಶಿಪ್ ಬೇರೆ. ಅಂದು ನಾನು ಆಲೋಚನೆ ಮಾಡಿದ್ದ ಯೋಜನೆಯೇ ಬೇರೆ. ನಿಮ್ಮ ಜಮೀನು ಇಟ್ಟುಕೊಂಡು ಹಣ ಸಂಪಾದಿಸಲು ಹೊರಟಿದ್ದಾರೆ. ಶಿವಕುಮಾರ್ ಗೂ ನನಗೂ ಹೋಲಿಕೆ ಮಾಡಬೇಡಿ. ನಾನು ಅವರಂತೆ ದಬ್ಬಾಳಿಕೆ ನಡೆಸಿಲ್ಲ. ಕಲ್ಲು ಬಂಡೆ ಹೊಡೆದು ಜೀವನ ನಡೆಸಿಲ್ಲ. ನಾನು ಮನಸ್ಸು ಮಾಡಿದ್ದರೆ ಅಧಿಕಾರದಲ್ಲಿದ್ದಾಗ ಶಿವಕುಮಾರರ ಅಪ್ಪನಂತೆ ಆಸ್ತಿ ಮಾಡುತ್ತಿದ್ದೆ. ಅವರಪ್ಪ ಹಳ್ಳಿಗಳಲ್ಲಿ ಕಡಲೆ ಬೀಜ ಅಳೆಯುತ್ತಿದ್ದರಂತೆ. ಅವರಪ್ಪನನ್ನೂ ಹೋಲಿಕೆ ಮಾಡಿಕೊಳ್ಳಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದರು.

ನಾನು ಐದನೇ ಬಾರಿ ಸಾವಿನ ಅಂಚಿಗೆ ಹೋಗಿ ಬಂದಿದ್ದೇನೆ. ಜನರ ಹಾರೈಕೆ ಮತ್ತು ದೇವರ ಅನುಗ್ರಹದಿಂದ ಬದುಕುಳಿದಿದ್ದೇನೆ. ನಾಟಕೀಯವಾಗಿ ಮಾತನಾಡುತ್ತಿಲ್ಲ. ದೇವರು ನನ್ನಿಂದ ಒಳ್ಳೆಯ ಕೆಲಸ ಮಾಡಲು ಉಳಿಸಿದ್ದಾನೆ. ಒಂದಿಂಚು ಭೂಮಿನು ಸರ್ಕಾರ ಪಡೆದುಕೊಳ್ಳದಂತೆ ನೋಡಿಕೊಳ್ಳುತ್ತೇನೆ. ನಾನು ಜನರ ಅಭಿಪ್ರಾಯಕ್ಕೆ ತಲೆ ಬಾಗಿ ಕೆಲಸ ಮಾಡುತ್ತೇನೆ. ನೀವೆಲ್ಲರು ಬೇಡ ಎಂದಾಗ ನಾನು ಮರು ಮಾತನಾಡದೆ ಆ ಯೋಜನೆ ನಿಲ್ಲಿಸಿದೆ. ಆಗ ಇಲ್ಲಿನ ಭೂಮಿಯ ಬೆಲೆ 1 ಲಕ್ಷದೊಳಗೆ ಇತ್ತು. ನಾನು ಅಂದು ನಿಮ್ಮೆಲ್ಲರನ್ನು ಕೃಷ್ಣಾ ಕಚೇರಿಗೆ ಕರೆದು ಚರ್ಚೆ ನಡೆಸಿದೆ. ಆದರೆ, ಇವರಿಗೆ ರೈತರಿಗೆ ಮುಖ ಕೊಡುವ ಧೈರ್ಯವೇ ಇಲ್ಲ ಎಂದು ಕಿಡಿಕಾರಿದರು.

ರೈತರಿಗೊಂದು ಈಗಲ್‌ಟನ್‌ಗೊಂದು ಲೆಕ್ಕಾನ :

ಡಿ.ಕೆ.ಶಿವಕುಮಾರ್ ಅವರೇ ರೈತರ ಬದುಕಿನ ಬಗ್ಗೆ ಗೌರವ ಇಟ್ಟುಕೊಳ್ಳಿ. ಈಗಲ್ ಟನ್ ಖರಾಬು ಭೂಮಿ ಬಗ್ಗೆ ಏನ್ ಮಾಡಿದ್ದೀರಿ ಎನ್ನುವುದು ಗೊತ್ತಿದೆ. ಎಕರೆಗೆ 13 ಕೋಟಿ ದಂಡ ನಿಗದಿ ಮಾಡಿದ್ದು ನೆನಪಿದಿಯಾ. ಆದರೆ, ಈ ರೈತರ ಭೂಮಿಗೆ ಎಕರೆಗೆ ಕೇವಲ 2.45 ಕೋಟಿ ಕೊಡುತ್ತೇವೆ ಅನ್ನುತ್ತೀರಾ. ಇದು ಯಾವ ನ್ಯಾಯ. ರೈತರಿಗೆ ಒಂದು ಲೆಕ್ಕ, ಈಗಲ್‌ಟನ್‌ಗೆ ಇನ್ನೊಂದು ಲೆಕ್ಕಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಭೂಮಿಯನ್ನು ಉಳಿಸಿಕೊಡಿ ಎಂದು ರೈತ ಮಹಿಳೆ ಸೆರಗೊಡ್ಡಿ ಬೇಡಿದ್ದನ್ನು ನೆನೆದು ಗದ್ಗದಿತರಾದ ಕುಮಾರಸ್ವಾಮಿ, ನನ್ನ ಸಹೋದರಿಯರ ಈ ಭೂಮಿಯನ್ನು ಉಳಿಸಿಕೊಡುವ ಭಾರ ನನ್ನದು. ಒಂದಿಂಚು ಭೂಮಿಯನ್ನು ಬಿಡುವುದು ಬೇಡ. ಅದು ಹೇಗೆ ಸ್ವಾಧೀನ ಮಾಡಿಕೊಳ್ಳುತ್ತಾರೋ ನೋಡೋಣ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

ನೀವು ಯಾರೂ ಹೆದರಬೇಕಿಲ್ಲ. ನಿಮ್ಮ ಜತೆ ನಾನಿದ್ದೇನೆ. ಅದೇನೆ ಬಂದರೂ ಎದುರಿಸೋಣ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಜನರು ಶಾಶ್ವತ. ಸರ್ಕಾರಗಳು ಜನಾಭಿಪ್ರಾಯಕ್ಕೆ ಮಣಿಯಬೇಕು. ಇಲ್ಲವಾದರೆ ಹೇಗೆ ಬುದ್ಧಿ ಕಲಿಸಬೇಕು ಎಂಬುದು ಜನರಿಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಗುಡುಗಿದರು.

ಇಲ್ಲಿನ ಕೆಲ ರೈತರು ಭೂ ಸ್ವಾಧೀನದ ಪರವಾಗಿರುವುದು ಒಳ್ಳೆಯದಲ್ಲ. ಸರ್ಕಾರ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಈ ಫಲವತ್ತಾದ ಭೂಮಿಯನ್ನು ಅಗ್ಗದ ಬೆಲೆಗೆ ಹೊಡೆದುಕೊಳ್ಳಲು ಹೊರಟಿದೆ. ಕೆಲವರು ಈಗಾಗಲೇ ಬೇನಾಮಿಗಳ ಹೆಸರಿನಲ್ಲಿ ಲ್ಯಾಂಡ್ ಬ್ಯಾಂಕ್ ಮಾಡಿಕೊಂಡು ದರೋಡೆ ಮಾಡಲು ಹೊರಟಿದ್ದಾರೆ. ಅವರು ಜನರಿಗೆ, ಸರ್ಕಾರಕ್ಕೆ ಮೋಸ, ವಂಚನೆ ಮಾಡುತ್ತಿದ್ದಾರೆ. ಇಂತಹವರನ್ನು ಬೀದಿಯಲ್ಲಿ ನಿಲ್ಲಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.

ಈ ಭಾಗದ ಕಾಂಗ್ರೆಸ್ ನಾಯಕರು ಇಲ್ಲಿ ನಡೆಯುತ್ತಿರುವ ಮೋಸವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಸರ್ಕಾರದಲ್ಲಿ ಇರುವವರು ನಿಮ್ಮನ್ನು ಕೂಡ ಮೋಸ ಮಾಡುತ್ತಿದ್ದಾರೆ. ನಿಮ್ಮನ್ನು ದಾಳವನ್ನಾಗಿ ಮಾಡಿಕೊಂಡು ನಿಮ್ಮ ಬದುಕನ್ನು ಕೂಡ ಕಸಿದುಕೊಳ್ಳುತ್ತಿದ್ದಾರೆ. ನನ್ನ ಜೊತೆಯಲ್ಲೇ ಇದ್ದವರು ಅಧಿಕಾರ ದರ್ಪದಿಂದ ಮಾತನಾಡುತ್ತಿದ್ದಾರೆ. ಅವರಿಗೆ ಗೊತ್ತಿರಲಿ, ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಶಾಸಕ ಬಾಲಕೃಷ್ಣ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಜನಪ್ರತಿನಿಧಿಗಳಾದವರು ರೈತರ ಕಣ್ಣೀರು ಒರೆಸಬೇಕೇ ಹೊರತು ಕಣ್ಣೀರಿಗೆ ಕಾರಣರಾಗಬಾರದು. ಈಗ ಯಾವುದೇ ಭಾಗಕ್ಕೆ ಹೋದರು ಭೂಮಿಗೆ ಚಿನ್ನದ ಬೆಲೆಯಿದೆ. ಜಿಲ್ಲಾಡಳಿತ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ಹಣ ಕೊಟ್ಟು ಭೂಮಿ ಖರೀದಿಸುವವರು ಇದ್ದಾರೆ. ಚಿನ್ನದ ಬೆಲೆ ಇಳಿಯಬಹುದು, ಆದರೆ, ಭೂಮಿ ಬೆಲೆ ಇಳಿಯಲ್ಲ. ನಾನು ರೈತರ ಭಾವನೆಯ ಜೊತೆ ಇರುವವನು. ಭೂಮಿ ಉಳಿಸಿ ಕೊಡುವ ಜವಾಬ್ದಾರಿ ನನ್ನದಾಗಿದ್ದು, ನಿಮ್ಮ ಜೊತೆ ನಿಲ್ಲುತ್ತೇನೆ ಎಂದು ರೈತರಲ್ಲಿ ಧೈರ್ಯ ತುಂಬಿದರು.

ತಪ್ಪು ಮಾಡದಂತೆ ಡಿಸಿಗೆ ಎಚ್ಚರಿಕೆ:

ಜಿಲ್ಲೆಯ ಜಿಲ್ಲಾಧಿಕಾರಿ ನನ್ನ ಮೊಬೈಲ್ ಕರೆಯನ್ನೇ ಸ್ವೀಕರಿಸುವುದಿಲ್ಲ. ಯಾರೋ ಒತ್ತಡ ಹೇರಿದರೂ ಅಂತ ತಪ್ಪು ಮಾಡಬೇಡಿ. ನಿವೃತ್ತರಾದರೂ ನೀವು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಚಿತ್ರದುರ್ಗದ ಎಂಜಿನಿಯರೊಬ್ಬರು ಅಧಿಕಾರದಲ್ಲಿ ಇದ್ದಾಗ ಮುಖ್ಯ ಅಭ್ಯಂತರರಾಗಿ ಮಾಡಿದ ತಪ್ಪಿಗೆ ಈಗ ಜೈಲಿಗೆ ಹೋಗಿದ್ದಾರೆ. ಇಡೀ ರಾಜ್ಯದ ಅಧಿಕಾರಿಗಳಿಗೆ ಹೇಳುತ್ತಿದ್ದೇನೆ. ಈ‌ ಸರ್ಕಾರದ ಸಚಿವರು ಮತ್ತು ಶಾಸಕರ ಒತ್ತಡಕ್ಕೆ ಮಣಿದು ಜನರಿಗೆ ದ್ರೋಹ ಬಗೆಯಬೇಡಿ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್, ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ,

ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಪಂಗಳ ರೈತರ ಭೂ ಹಿತರಕ್ಷಣಾ ಸಂಘ ಅಧ್ಯಕ್ಷ ರಾಮಣ್ಣ, ಪದಾಧಿಕಾರಿಗಳಾದ ಪ್ರಕಾಶ್, ನಾಗರಾಜು, ಹೊಸೂರು ಶ್ರೀಧರ್, ಮುಖಂಡರಾದ ಶೇಷಪ್ಪ, ಇಟ್ಟುಮಡು ಗೋಪಾಲ್, ಲಕ್ಷ್ಮಿ ಮಂಜುನಾಥ್, ರೈತ ಹೋರಾಟಗಾರ್ತಿ ಉಮಾ ಮತ್ತಿತರರು ಉಪಸ್ಥಿತರಿದ್ದರು.

25ಕೆಆರ್ ಎಂಎನ್ 5.ಜೆಪಿಜಿ

ಬಿಡದಿ ಹೋಬಳಿಯ ಬೈರಮಂಗಲ ಗ್ರಾಮದ ಶ್ರೀ ಭಕ್ತಾಂಜನೇಯ ದೇವಾಲಯದ ಆವರಣದಲ್ಲಿ ಬಿಡದಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿದರು.