ಸರ್ಕಾರಿ ಶಾಲೆ ಅಭಿವೃದ್ಧಿಗೆ ದಾನಿಗಳು ಕೈ ಜೋಡಿಸಲಿ

| Published : Feb 03 2024, 01:47 AM IST

ಸರ್ಕಾರಿ ಶಾಲೆ ಅಭಿವೃದ್ಧಿಗೆ ದಾನಿಗಳು ಕೈ ಜೋಡಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಾರೆ. ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು. ಅದೇ ರೀತಿ ಹೆಚ್ಚಿನ ಸವಲತ್ತುಗಳನ್ನು ಒದಗಿಸಬೇಕು. ಶಾಲೆಗಳು ದೇವಾಲಯಗಳಿದ್ದಂತೆ

ಕನ್ನಡಪ್ರಭ ವಾರ್ತೆ ಮಾಲೂರು

ಸರ್ಕಾರ ನೀಡುವ ಸವಲತ್ತುಗಳ ಜೊತೆಗೆ ದಾನಿಗಳು ಕೈಜೋಡಿಸಿದಾಗ ಸರ್ಕಾರಿ ಶಾಲಾ ಆವರಣದಲ್ಲಿ ಉತ್ತಮ ಸೌಲಭ್ಯ ಕಲ್ಪಿಸುವ ಮೂಲಕ ಸರ್ಕಾರಿ ಶಾಲಾ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ದೊಡ್ಡ ಶಿವಾರ ಗ್ರಾಪಂ ವ್ಯಾಪ್ತಿಯ ಕೋಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದಾನಿಗಳಾದ ಪುರಸಭಾ ಸದಸ್ಯ ಎಂ.ವಿ.ವೇಮನ ಹಾಗೂ ಮಾರಿಕಾಂಬ ದೇವಾಲಯ ಟ್ರಸ್ಟಿನ ಸದಸ್ಯ ತಬಲಾ ನಾರಾಯಣಪ್ಪ ಅವರು ನಿರ್ಮಿಸಿರುವ ಮುಖ್ಯದ್ವಾರ ಸರಸ್ವತಿ ಪ್ರತಿಮೆ ಹಾಗೂ ರಂಗ ಮಂದಿರ ಲೋಕಾರ್ಪಣೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಂಗ್ಲ ಮಾಧ್ಯಮ ವ್ಯಾಮೋಹ

ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಾರೆ. ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು. ಅದೇ ರೀತಿ ಹೆಚ್ಚಿನ ಸವಲತ್ತುಗಳನ್ನು ಒದಗಿಸಬೇಕು. ಶಾಲೆಗಳು ದೇವಾಲಯಗಳಿದ್ದಂತೆ, ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆ ವ್ಯಾಮೋಹದಿಂದ ಪೋಷಕರು ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ತರಬೇತಿ ಕಾರ್ಯಗಾರಗಳನ್ನು ನಡೆಸಿ ಪರಿಣಿತರನ್ನಾಗಿ ಮಾಡುತ್ತಿರುವುದರಿಂದ ನುರಿತ ಅನುಭವಿ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಚಟುವಟಿಕೆ ಮೌಲ್ಯಾಧಾರಿತ ಶಿಕ್ಷಣವನ್ನು ಮಕ್ಕಳಿಗೆ ಹೇಳಿಕೊಡುತ್ತಾರೆ ಆ ಕಲಿಕೆ ಮಕ್ಕಳಲ್ಲಿ ನಿರಂತರವಾಗಿ ಉಳಿಯುತ್ತದೆ ಎಂದರು.

ದಾನಿಗಳ ಸಹಕಾರ ಅಗತ್ಯ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಹಲವು ರೀತಿಯ ಸವಲತ್ತುಗಳನ್ನು ಸರ್ಕಾರ ಒದಗಿಸುತ್ತದೆ, ಜೊತೆಗೆ ದಾನಿಗಳು ಸಹ ಕೈಜೋಡಿಸಿದಾಗ ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬಹುದು, ಈ ನಿಟ್ಟಿನಲ್ಲಿ ಪುರಸಭಾ ಸದಸ್ಯ ಎಂ.ವಿ.ವೇಮನ ಅವರು ಸರ್ಕಾರಿ ಶಾಲೆಗೆ ಮಹಾದ್ವಾರ ನಿರ್ಮಿಸಿ ಸರಸ್ವತಿ ಪುತ್ಥಳಿ ಮಾಡಿಸಿಕೊಟ್ಟಿದ್ದಾರೆ, ಅದೇ ರೀತಿ ಮಾರಿಕಾಂಬ ದೇವಾಲಯ ಟ್ರಸ್ಟಿನ ಸದಸ್ಯ ತಬಲಾ ನಾರಾಯಣಪ್ಪ ಅವರು ಬಯಲು ರಂಗ ಮಂದಿರ ನಿರ್ಮಿಸಿ ಕೊಟ್ಟಿದ್ದಾರೆ. ದಾನಿಗಳು ಸರ್ಕಾರಿ ಶಾಲೆಗಳಿಗೆ ಸವಲತ್ತುಗಳನ್ನು ಒದಗಿಸಿದಾಗ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ದೊಡ್ಡ ಶಿವಾರ ಗ್ರಾಪಂ ಅಧ್ಯಕ್ಷ ಮಂಜುನಾಥ್, ಮುಖ್ಯ ಶಿಕ್ಷಕ ಷಣುಖಯ್ಯ, ಗ್ರಾಪಂ ಸದಸ್ಯ ಅಮರ್, ಎಸ್‌ಡಿಎಂಸಿ ಅಧ್ಯಕ್ಷ ನಂದೀಶ್, ಮುಖಂಡರಾದ ಎಂ.ಬಿ.ನಂಜುಂಡಪ್ಪ, ಗುಟ್ಟಸ್ವಾಮಿ, ಶಿಕ್ಷಕರುಗಳಾದ ಕೆಂಪಣ್ಣ, ಶ್ರೀನಿವಾಸ್, ರಾಮಯ್ಯ, ಇಸಿಓ ಜಗದಾಂಬ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಯಂತಿ, ಸಹಶಿಕ್ಷಕರಾದ ಅನಿತಾಕುಮಾರಿ, ಪುಟ್ಟಮ್ಮ, ಚಂದ್ರೀಕಾ ಇದ್ದರು.