ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಮಧ್ಯವರ್ತಿಗಳಿಂದ, ಪ್ರಜೆಗಳ ಕೆಲಸವನ್ನು ನಿರ್ಲಕ್ಷಿಸುವ ಸರ್ಕಾರಿ ಅಧಿಕಾರಿಗಳಿಂದ ಮುಕ್ತಿ ಸಿಗಬೇಕಾದರೆ ಇ-ಆಡಳಿತ ಗ್ರಾಮೀಣ ಭಾಗದಜನರಿಗೆ ಪರಿಣಾಮಕಾರಿಯಾಗಿ ತಲುಪಬೇಕು ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ಆರ್.ಎಸ್. ದೇಶಪಾಂಡೆ ಹೇಳಿದರು.ತುಮಕೂರು ವಿವಿ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಭಾರತದಲ್ಲಿ ಇ-ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿ: ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರದ ಇ-ಆಡಳಿತಕ್ಕೆ ಪ್ರವೇಶ, ಆಡಳಿತ ಮತ್ತು ಆಡಳಿತಾಧಿಕಾರಿಗಳ ಜವಾಬ್ದಾರಿ, ಹೊಸ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಸರ್ಕಾರ ಗಮನವಹಿಸಬೇಕು ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ದಿನವೇ ‘ಗಣರಾಜ್ಯ ಭಾರತವಿದು’ ಎಂದು ಹೇಳಿದ್ದರು. ಪ್ರಜೆಗಳಿಗಾಗಿ ದುಡಿಯಬೇಕಾದ ಆಡಳಿತವೇ ಪ್ರಜೆಗಳಿಂದ ಕಿತ್ತುತಿನ್ನುವ ವ್ಯವಸ್ಥೆಯಾಗಿ ಬದಲಾಗಿದೆ. 11 ಬಾರಿ ಬಜೆಟ್ ಮಂಡಿಸಿದ ಕೇಂದ್ರದ ಹಣಕಾಸು ಸಚಿವರಾಗಿದ್ದವರೂ ಕೂಡ ಇ-ಆಡಳಿತದ ಕನಸು ಕಂಡಿರಲಿಲ್ಲ. ಇ-ಆಡಳಿತದಿಂದ ಪಾರದರ್ಶಕತೆ ಆಡಳಿತದಲ್ಲಿದ್ದವರಿಗೆ ಬೇಕಾಗಿರಲಿಲ್ಲವೆಂದೇ ಹೇಳಬಹುದು ಎಂದು ವ್ಯವಸ್ಥೆಯ ಮೇಲಿನ ಅಸಮಾಧಾನ ವ್ಯಕ್ತಪಡಿಸಿದರು.ನಗರಗಳ ಅಭಿವೃದ್ಧಿಯೇ ಸಮಾಜದ ಅಭಿವೃದ್ಧಿಯೆಂಬ ತಪ್ಪು ಕಲ್ಪನೆ ಇದೆ. ಗ್ರಾಮೀಣ ಭಾಗದಲ್ಲಿ ಬಡತನ, ಅನಕ್ಷರತೆ, ಮೂಲಭೂತ ಸೌಕರ್ಯಗಳ ಕೊರತೆ ತಾಂಡವವಾಡುತ್ತಿದೆ. ಇವೆಲ್ಲದರಿಂದ ಹೊರಬರಬೇಕಾದರೆ ಪಾರದರ್ಶಕತೆ ಆಡಳಿತದ ಅವಶ್ಯಕತೆ ತುರ್ತಾಗಿದೆ. ಮಧ್ಯವರ್ತಿಗಳಿಂದಾಗಿ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ಗ್ರಾಮೀಣಾಭಿವೃದ್ಧಿಗೆ ಇ-ಆಡಳಿತ ಸರಳ ಹಾಗೂ ಸೂಕ್ತ ವೇದಿಕೆ. ಪತ್ರರಹಿತ ಸಂವಹನ, ವ್ಯಕ್ತಿರಹಿತ ಆಡಳಿತ ಮತ್ತು ಪಾರದರ್ಶಕತೆಯ ವ್ಯವಸ್ಥೆಗಾಗಿ ಇ-ಆಡಳಿತದ ಅವಶ್ಯಕತೆಇದೆ. ಆಡಳಿತಕ್ಕೆ ಉನ್ನತೀಕರಣದ ಗುರಿ ಇರಬೇಕು. ಗುಣಮಟ್ಟ ಸೌಲಭ್ಯಗಳನ್ನು ಪಡೆಯಲು ಹಳ್ಳಿಗಳಿಂದ ಜನರು ನಗರಕ್ಕೆ ಬರುತ್ತಿದ್ದಾರೆ. ಬ್ಯಾಂಕ್ ಖಾತೆ ಮಾಡಿಸುವುದರಿಂದ ಹಿಡಿದು ಕುಳಿತಲ್ಲೇ ಸೆಕೆಂಡುಗಳಲ್ಲಿ ಗ್ಯಾಸ್ ಬುಕ್ ಮಾಡುವ ಅವಕಾಶವನ್ನು ಇ-ಆಡಳಿತ ಕಲ್ಪಿಸಿಕೊಟ್ಟಿದೆ ಎಂದರು.ಕುಲಸಚಿವೆ ನಾಹಿದಾ ಜಮ್‌ಜಮ್ ಮಾತನಾಡಿ, ಇ-ಆಡಳಿತ ಸೇವೆಗಳಿರುವ ಕರ್ನಾಟಕ-ಒನ್, ಬೆಂಗಳೂರು-ಒನ್, ಗ್ರಾಮ್-ಒನ್ ಜನರಿಗೆ ಸರ್ಕಾರದ ಸೇವೆಗಳು ಸರ್ವರಿಗೂ ಲಭ್ಯವಾಗಲಿ ಎಂದು ಶುರುವಾದ ವೇದಿಕೆಗಳು. ಆಡಳಿತಕ್ಕೂ ಇದರಿಂದ ಅನುಕೂಲವಾಗುತ್ತದೆ. ಇದರಲ್ಲಿ ನ್ಯೂನತೆಯೆಂದರೆ ಸರ್ವರ್ ಸಮಸ್ಯೆ. ಈ ಸಮಸ್ಯೆಯೊಂದಿಗೆ ಸರ್ಕಾರಿ ಅಧಿಕಾರಿಗಳ ಜವಾಬ್ದಾರಿ ಪ್ರಜೆಗಳ ಕೆಲಸಗಳನ್ನು ಸೂಕ್ತ ರಿತಿಯಲ್ಲಿ ನಿರ್ವಹಿಸುವುದು. ಅಸಡ್ಡೆ ಮಾಡಿದಾಗಲೇ ಆಡಳಿತದ ವಿರುದ್ಧ ಅಸಮಾಧಾನ ಉಂಟಾಗುತ್ತದೆ ಎಂದು ಹೇಳಿದರು.
‘ಭಾರತದಲ್ಲಿ ಇ-ಆಡಳಿತದ ಆಯಾಮ - ಗ್ರಾಮೀಣದೃಷ್ಟಿಕೋನ’ ಕುರಿತ ಪುಸ್ತಕ ಬಿಡುಗಡೆಗೊಳಿಸಲಾಯಿತು.ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ನೀಲಕಂಠ ಎನ್.ಟಿ., ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಜಯಶೀಲಾ, ಪ್ರಾಧ್ಯಾಪಕ ಪ್ರೊ. ರವೀಂದ್ರ ಕುಮಾರ್ ಬಿ., ಪ್ರೊ. ವಿಲಾಸ್ ಎಂ. ಕದ್ರೋಳ್ಕರ್ರ್, ಸಹಾಯಕ ಪ್ರಾಧ್ಯಾಪಕ ಡಾ. ಮುನಿರಾಜು ಎಂ. ಉಪಸ್ಥಿತರಿದ್ದರು.Quote
ಭಾರತದ ಪ್ರತೀ ನಾಗರಿಕನಿಗೂ ಕೂಡ ಇ-ಆಡಳಿತದ, ಸರ್ಕಾರದೊಂದಿಗೆ ನೇರ ಪ್ರವೇಶವಿರಬೇಕು. ಎಲ್ಲವೂ ಸ್ಮಾರ್ಟ್ ಆಗುತ್ತಿರುವ ಕಾಲದಲ್ಲಿ ಇಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದರಲ್ಲಿ ದೇಶ ಹಿಂದೆ ಬಿದ್ದಿದೆ. ಇ-ಆಡಳಿತದ ಸೌಲಭ್ಯವಿದ್ದರೂ, ಸರಿಯಾದ ಮಾರ್ಗದಲ್ಲಿ ಬಳಸಲು ತಿಳಿಸುವ, ಪ್ರಜೆಗಳಿಗಾಗಿ ಕೆಲಸ ನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಗ್ರಾಮ ಲೆಕ್ಕಿಗ ಬರೆದದ್ದೆ ಶಾಸನವಾಗಿ, ಯೋಜನೆಗಳು ಹಳ್ಳಿಗಳನ್ನು ತಲುಪುವುದೇ ಇಲ್ಲ.ಪ್ರೊ.ಆರ್.ಎಸ್. ದೇಶಪಾಂಡೆ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಮಾಜಿ ನಿರ್ದೇಶಕ