ಬಸವೇಶ್ವರರು ಮಹಿಳೆಯರಿಗೆ ವಾಕ್, ಧಾರ್ಮಿಕ ಸ್ವಾತಂತ್ರ್ಯ ಹಾಗೂ ವಚನ ಬರೆದು ಆ ಮೂಲಕ ತಮ್ಮ ಅನುಭವಗಳನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಸ್ವಾತಂತ್ರ‍್ಯ ನೀಡಿದರು. ಕಾಯಕದ ಮೂಲಕ ಅಂದಿನ ದುಡಿಮೆ ಅಂದಿನ ಅನ್ನ ಆಗಬೇಕು.
ಧಾರವಾಡ:
12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಹೆಣ್ಣು ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಸಿದವರು ಬಸವಣ್ಣ ಎಂದು ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಹೇಳಿದರು.ಜಾನಪದ ಸಂಶೋಧನಾ ಕೇಂದ್ರ ಹಮ್ಮಿಕೊಂಡ ಬಸವ ಜಯಂತಿ ಉಪನ್ಯಾಸ ಶರಣರ ದೃಷ್ಟಿಯಲ್ಲಿ ಹೆಣ್ಣು ಹಾಗೂ ವಚನ ಗಾಯನ ನೃತ್ಯ ರೂಪಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವೇಶ್ವರರು ಮಹಿಳೆಯರಿಗೆ ವಾಕ್, ಧಾರ್ಮಿಕ ಸ್ವಾತಂತ್ರ್ಯ ಹಾಗೂ ವಚನ ಬರೆದು ಆ ಮೂಲಕ ತಮ್ಮ ಅನುಭವಗಳನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಸ್ವಾತಂತ್ರ‍್ಯ ನೀಡಿದರು. ಕಾಯಕದ ಮೂಲಕ ಅಂದಿನ ದುಡಿಮೆ ಅಂದಿನ ಅನ್ನ ಆಗಬೇಕು ಎಂದರು.
ಪ್ರಸ್ತುತ ನಾವು ಎಷ್ಟೇ ವಿದ್ಯಾವಂತರಾದರೂ ದೌರ್ಜನ್ಯ, ಶೋಷಣೆ ಹಾಗೂ ಜಾತಿಯತೆ ಇಂದಿಗೂ ಎದುರಿಸುತ್ತಿದ್ದೇವೆ. ಅದನ್ನು ಹೋಗಲಾಡಿಸಿ ಇಂದಿನ ಹೆಣ್ಣು ಮಕ್ಕಳು ಬದುಕಬೇಕಾಗಿದೆ. ವಿದ್ಯೆ, ಧೈರ್ಯ ಮತ್ತು ಹೋರಾಟ ನಮ್ಮ ಅಸ್ತ್ರಗಳಾಗಬೇಕಿದೆ ಎಂದರು.ಚಿಂತಕಿ ಸುಧಾ ಪಾಟೀಲ ಶರಣರ ದೃಷ್ಟಿಯಲ್ಲಿ ಹೆಣ್ಣು ವಿಷಯ ಕುರಿತು ಮಾತನಾಡಿದರು. ಶರಣರು ಹೆಣ್ಣು, ಹೊನ್ನು, ಮಣ್ಣು ಮಾಯೆಯಲ್ಲ. ಮೋಕ್ಷ ಅಥವಾ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುವ ಹಕ್ಕು ಗಂಡಿನಷ್ಟೇ ಹೆಣ್ಣಿಗೂ ಇದೆ ಎಂದು ಪ್ರತಿಪಾದಿಸಿದರು. ಅರಿವಿನ ಮಟ್ಟದಲ್ಲಿ ಹೆಣ್ಣು-ಗಂಡು ಎಂಬ ಭೇದವಿಲ್ಲ ಎಂದು ಹೇಳುತ್ತಾ ಅನುಭವ ಮಂಟಪದ ಮೂಲಕ 34ಕ್ಕೂ ಹೆಚ್ಚು ಶಿವಶರಣೆಯರಿಗೆ ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವೇದಿಕೆಯನ್ನು ಶರಣರು ಕಲ್ಪಿಸಿದ್ದರು ಎಂದು ಹೇಳಿದರು.
ಯೋಗ ಮಿತ್ರ ಮಹಿಳಾ ಮಂಡಳ ಹಾಗೂ ಗಾನ ಸಿಂಚನ ಮಹಿಳಾ ಮಂಡಳದ ಸಹೋದರಿಯರು ವಚನ ನೃತ್ಯ ರೂಪಕ ಪ್ರದರ್ಶಿಸಿದರು. ಜಾನಪದ ಸಂಗೀತ ಬಳಗ ವಚನ ಗಾಯನ, ಶ್ರೀನಿಧಿ ಜಕ್ಕಣ್ಣವರ್ ಹಾಗೂ ಕಲಾವತಿ ವಚನಗಳನ್ನು ಪ್ರಸ್ತುತಪಡಿಸಿದ್ದರು. ವೃಂದ ಕುಲಕರ್ಣಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು, ಸುಜಾತ ಹಡಗಲಿ ನಿರೂಪಿಸಿದರು.