ಕನಕಗಿರಿ ತಾಲೂಕು ಕಸಾಪದಿಂದ ಶುಕ್ರವಾರ ಆಯೋಜಿಸಿದ್ದ ಕನಕಗಿರಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜ್ಯ ಡಿಐಜಿ ಕಚೇರಿಯ ಉಪ ನಿರ್ದೇಶಕ ರವಿ ಕಮಲಾಪುರಕರ ಉದ್ಘಾಟಿಸಿದರು.

ಪ್ರಹ್ಲಾದರೆಡ್ಡಿ ಮಾದಿನಾಳ

ಅನುಭಾವಿ ಶ್ರೀ ಚಿದಾನಂದ ಅವಧೂರ ವೇದಿಕೆ

ಕನಕಗಿರಿ: ಶಿಕ್ಷಣ, ಉದ್ಯೋಗ ಹಾಗೂ ಆಡಳಿತದ ಕ್ರಮವೂ ಕನ್ನಡದಲ್ಲಿ ನಡೆದಾಗ ಮಾತ್ರ ಜನ ಸಾಮಾನ್ಯರಿಗೂ ಭಾಷೆಯ ಮಹತ್ವ ಅರ್ಥವಾಗಲು ಸಾಧ್ಯವಾಗಲಿದೆ ಎಂದು ರಾಜ್ಯ ಡಿಐಜಿ ಕಚೇರಿಯ ಉಪ ನಿರ್ದೇಶಕ ರವಿ ಕಮಲಾಪುರಕರ ಹೇಳಿದರು.

ತಾಲೂಕು ಕಸಾಪದಿಂದ ಶುಕ್ರವಾರ ಆಯೋಜಿಸಿದ್ದ ಕನಕಗಿರಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕನಕಗಿರಿ ಐತಿಹಾಸಿಕ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಶ್ರೀಮಂತವಾಗಿದೆ. ಇಂತಹ ಪುಣ್ಯಭೂಮಿಯಲ್ಲಿ ಸಾಹಿತ್ಯದ ತೇರನೆಳೆಯುತ್ತಿರುವುದು ಸಂತೋಷವಾಗಿದೆ. ಕನ್ನಡ ಬೆಳವಣಿಗೆಗೆ ಭಾಷೆ ಮತ್ತು ಸಾಹಿತ್ಯವನ್ನು ಸಮವಾಗಿ ಆಯ್ಕೆ ಮಾಡಿಕೊಳ್ಳಬೇಕು. ಪರ್ಶಿಯನ್, ಆಂಗ್ಲ, ಮರಾಠಿಗರ ಎಷ್ಟೇ ದಬ್ಬಾಳಿಕೆ ಮಾಡಿದರೂ ಕನ್ನಡವನ್ನು ಅಳಿಸಿ ಹಾಕಲಾಗಲಿಲ್ಲ. ಕನ್ನಡ ಎಂದಿಗೂ ಮರೆಯಾಗಲು ಸಾಧ್ಯವಿಲ್ಲ. ಈ ದಿಶೆಯಲ್ಲಿ ಜನ ಸಾಮಾನ್ಯರಿಗೂ ಕನ್ನಡ ಭಾಷೆ ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಶಿಕ್ಷಣ, ಉದ್ಯೋಗ ಹಾಗೂ ಆಡಳಿತ ಇವು ಕನ್ನಡ ಭಾಷೆಯಲ್ಲಿಯೇ ನಡೆಯಬೇಕು ಎಂದು ತಿಳಿಸಿದರು.

ಆನಂತರ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಮಾತನಾಡಿ, ನಾಡಿನ ಸಾಹಿತ್ಯಕ್ಕೆ ಕನಕಗಿರಿ ಬರಹಗಾರರ ಕೊಡುಗೆ ಅಪಾರವಾಗಿದೆ. ಮೊಬೈಲ್ ಸೇರಿದಂತೆ ಆಧುನಿಕ ಉಪಕರಣಗಳಿಂದ ಕನ್ನಡ ಭಾಷೆ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ನಾವು ಪುಸ್ತಕಗಳನ್ನು ಓದುವುದರಿಂದ ಸಾಹಿತ್ಯ ಕ್ಷೇತ್ರವನ್ನು ಬೆಳೆಸಿ, ಉಳಿಸಬೇಕಾಗಿದೆ. ಸಮ್ಮೇಳನದಲ್ಲಿ ಚರ್ಚೆಯಾದ ಅಭಿವೃದ್ಧಿ ವಿಷಯಗಳನ್ನು ಕ್ರೋಡೀಕರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಕಸಾಪದಿಂದ ಆಗುತ್ತಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಡಾ. ಚನ್ನಮಲ್ಲ ಶ್ರೀ ಮಾತನಾಡಿ, ಮಕ್ಕಳಿಗೆ ಸಾಲ ಮಾಡಿ ಶಿಕ್ಷಣ ಕೊಡಿಸುವುದು ಮುಖ್ಯವಲ್ಲ. ನಾವು ಕೊಡಿಸುವ ಶಿಕ್ಷಣ ಸಂಸ್ಕಾರದಿಂದ ಕೂಡಿರಬೇಕು. ಪ್ರತಿಷ್ಠೆಯ ಕಲಿಕೆ ಅಪಾಯಕಾರಿಯಾಗಿದ್ದು, ಅದಕ್ಕೆ ಯಾವ ಪಾಲಕ, ಪೋಷಕರು ಆದ್ಯತೆ ನೀಡಬಾರದು. ಸಂಸ್ಕಾರಯುತ ಕಲಿಕೆ ಮಕ್ಕಳ ಬದುಕಿಗೆ ಪೂರಕವಾಗಿದೆ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಾಗೂ ಅಂತಾರಾಷ್ಟ್ರೀಯ ಗಾಯಕ ಹುಸೇನದಾಸ ಅವರು ಪ್ರಸಕ್ತ ವರ್ಷದ ಸರ್ವಾಧ್ಯಕ್ಷ ವೆಂಕಟೇಶ ಜನಾದ್ರಿ ಅವರಿಗೆ ಧ್ವಜ ಹಸ್ತಾಂತರಿಸಿದರು. ತಾಲೂಕು ಕಸಾಪ ಅಧ್ಯಕ್ಷ ಮೆಹಬೂಬ ಹುಸೇನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನಾಧ್ಯಕ್ಷರ ಕತ್ತಲೊಳಗಣ ಬೆಳಕು, ಸಾಹಿತಿ ಮನೋಹರ ಬೊಂದಾಡೆ ಅವರ ಕನಕಗಿರಿ ಸುತ್ತಮುತ್ತ ಒಂದು ನೋಟ ಹಾಗೂ ಉಪನ್ಯಾಸಕ ಪಂಪಾಪರೆಡ್ಡಿ ಗಚ್ಚಿನಮನಿ ಅವರ ನಿನ್ನಗಳೆಂಬ ಸುಂದರ ಭೂತಗಳು ಪುಸ್ತಕಗಳು ಬಿಡುಗಡೆಗೊಂಡವು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು.

ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಲಿಂಗಪ್ಪ, ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಬಿ. ಕನಕಪ್ಪ, ಪ್ರಮುಖರಾದ ವೀರೇಶ ಸಮಗಂಡಿ, ಶರಣಬಸಪ್ಪ ಭತ್ತದ, ಮಹಾಂತೇಶ ಸಜ್ಜನ್, ವೈದ್ಯ ಸಿದ್ರಾಮೇಶ, ರಮೇಶ ನಾಯಕ, ಸಿದ್ದಪ್ಪ ನಿರ್ಲೂಟಿ, ವೆಂಕಟೇಶ ಕುಲಕರ್ಣಿ, ಹಜರತಹುಸೇನ, ಗೋವರ್ಧನಮ್ಮರೆಡ್ಡಿ ಇದ್ದರು.

ಹೋರಾಟ ಸ್ಮರಿಸಲೇಬೇಕು: ಬಡ ಕಲಾವಿದ ಹುಸೇನದಾಸರನ್ನು ವಚನ ಹಾಗೂ ದಾಸ ಸಾಹಿತ್ಯ ಅಂತಾರಾಷ್ಟ್ರೀಯ ಮಟ್ಟದ ವರೆಗೆ ಬೆಳೆಸಿದೆ. ಸಾಹಿತ್ಯಕ್ಕೆ ಇರುವ ಶಕ್ತಿ ಬೇರಾವುದಕ್ಕೂ ಇಲ್ಲ. ನೆಲದ ಉಳಿವಿಗಾಗಿ ಹೋರಾಡಿದವರನ್ನು ನಾವು ಸ್ಮರಿಸಲೇಬೇಕು ಎಂದು ಸುವರ್ಣಗಿರಿ ಮಠದ ಡಾ. ಚನ್ನಮಲ್ಲಶ್ರೀ ಹೇಳಿದರು.