ಸಾರಾಂಶ
ಶಿರಸಿ: ಇಂದಿನ ಪೀಳಿಗೆಗೆ ಸಂಸ್ಕಾರದ ಕೊರತೆಯಾಗದಂತೆ ನೋಡಿಕೊಳ್ಳಬೇಕಾದದ್ದು ಎಲ್ಲರ ಜವಬ್ದಾರಿ ಎಂದು ತಾನ್ಸೇನ್ ಪ್ರಶಸ್ತಿ ಪುರಸ್ಕೃತ ಪಂ. ಗಣಪತಿ ಭಟ್ಟ ಹಾಸಣಗಿ ತಿಳಿಸಿದರು.ಶುಕ್ರವಾರ ನಗರದ ಯೋಗ ಮಂದಿರದಲ್ಲಿ ಜಿಲ್ಲಾ ಸಂಸ್ಕಾರ ಭಾರತಿ ಘಟಕದ ಉದ್ಘಾಟನೆ ಹಾಗೂ ಸಾಧಕರಿಗೆ ಗೌರವ ಸಮ್ಮಾನ ನೆರವೇರಿಸಿ ಮಾತನಾಡಿದರು.ಸಂಸ್ಕಾರ ಹುಟ್ಟಿನಿಂದಲೇ ಸಿಗಬೇಕು. ಅದರ ಕೊರತೆ ಮನೆಗಳಲ್ಲಿ ಆಗಬಾರದು. ಸಂಸ್ಕಾರ ಎಂದರೆ ಯಾರಿಗೂ ನೋವು ಮಾಡಬಾರದು. ಬದುಕಿನಲ್ಲಿ ಹಿಂಸೆ ಇರಬಾರದು. ಎಲ್ಲರ ಜತೆ ಪ್ರೀತಿಯಿಂದ ಬದುಕಬೇಕು ಎಂಬುದನ್ನು ಮಕ್ಕಳಲ್ಲಿ ಬೆಳೆಸಬೇಕು. ಇದು ಕೊರತೆ ಇದೆ ಎಂದರೆ ಎಲ್ಲೊ ತಪ್ಪಿದೆ ಅಂತ ಅರ್ಥ ಎಂದರು. ಸಂಸ್ಕಾರ ಭಾರತಿಯ ಪ್ರಾಂತ ಉಪಾಧ್ಯಕ್ಷ, ಕಲಾವಿದ ಶಿವಾನಂದ ಕೆರೆಮನೆ ಅಧ್ಯಕ್ಷತೆ ವಹಿಸಿ, ನೂತನ ಪದಾಧಿಕಾರಿಗಳನ್ನು ಘೋಷಿಸಿ, ಭಾರತ ಎಂದರೆ ಸಂಸ್ಕೃತಿಯಾಗಿದೆ. ದೇಶದ ಸಂಸ್ಕೃತಿ ಹಾಗೂ ಕಲೆಯ ಅಸ್ಮಿತೆಯ ಗಟ್ಟಿಗೊಳಿಸಬೇಕಾದ ಕಾರ್ಯ ಎಲ್ಲರದ್ದೂ ಇದೆ ಎಂದರು.ವಿದೇಶದಲ್ಲಿ ಕಟ್ಟಡ, ರಸ್ತೆ ಚೆನ್ನಾಗಿರಬಹುದು. ಆದರೆ, ಭಾರತದಲ್ಲಿ ಇರುವಷ್ಟು ಕಲೆ, ಸಾಹಿತ್ಯ ಇಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಆರ್ಥಿಕ ಇಲಾಖೆಗೆ ಕೊಟ್ಟ ಆದ್ಯತೆ ಕಲೆ ಹಾಗೂ ಸಂಸ್ಕೃತಿ ಇಲಾಖೆಗೆ ಇಲ್ಲ. ದೇಶವನ್ನು ಪ್ರತಿನಿಧಿಸುವುವುದು ಕಲೆಯೇ ಆಗಿದೆ. ಕಲೆ, ಸಂಸ್ಕೃತಿಗೆ ಆದ್ಯತೆ ಸಿಗಬೇಕಿದೆ. ಮುಖ್ಯವಾಹಿನಿಯಲ್ಲಿ ಬರಬೇಕಾಗಿದೆ ಎಂದರು.ವಕ್ತಾರರಾಗಿ ವಿದುಷಿ ಹೇಮಾ ವಾಗ್ಮೋಡೆ ಮಾತನಾಡಿ, ಕಲೆ ಹಾಗೂ ಸಂಸ್ಕೃತಿಗೆ ಬೆನ್ನೆಲುಬಾಗಿ ಕಾರ್ಯ ಮಾಡುತ್ತದೆ. ಕಲೆಯನ್ನು ಇನ್ನೂ ತಳಮಟ್ಟದ ಜನರಿಗೆ ತಲುಪಬೇಕಾಗಿದೆ ಎಂದರು.ಉತ್ತರ ಪ್ರಾಂತ ಕಾರ್ಯದರ್ಶಿ ಮಾರುತಿ ಹುಟಗಿ, ಜಿಲ್ಲಾ ಕಾರ್ಯದರ್ಶಿ ರವಿ ಗುನಗ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಕೇಶವ ಹೆಗಡೆ ಕೊಳಗಿ, ವಿದ್ವಾನ್ ವಿ.ಡಿ. ಭಟ್ಟ ಕರಸುಳ್ಳಿ, ನಾಗೇಂದ್ರ ಮುತ್ಮುರ್ಡು, ನಿರ್ಮಲಾ ಗೋಳಿಕೊಪ್ಪ, ವೇ.ಮೂ. ಮಂಜುನಾಥ ಭಟ್ಟ, ಲಲಿತಕಲಾ ಅಕಾಡಮಿ ಸದಸ್ಯೆ ಶಾಂತ ಕೊಲ್ಲೆ, ಕವಯತ್ರಿ ಪದ್ಮಾ ಎಸ್. ಅವರನ್ನು ಗೌರವಿಸಲಾಯಿತು. ಪವಿತ್ರಾ ಹೆಗಡೆ ಪ್ರಾರ್ಥಿಸಿದರು. ಸತೀಶ ಗೋಳಿಕೊಪ್ಪ ಸ್ವಾಗತಿಸಿದರು. ಶ್ರೀಧರ ಹಿರೇಹದ್ದ ನಿರ್ವಹಿಸಿದರು. ಜನಾರ್ಧನ ಆಚಾರ್ಯ ಸಾಧಕರನ್ನು ಪರಿಚಯಿಸಿದರು.
ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟಕಾರವಾರ: ಗಣರಾಜ್ಯೋತ್ಸವದ ದಿನಾಚರಣೆಯ ಅಂಗವಾಗಿ ಜನವರಿ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲ ಪುಸ್ತಕಗಳನ್ನು ಶೇ. 50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಬೇಕು. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯ ದೂ. (080) 22107705 ಹಾಗೂ ಎಲ್ಲ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್‌ಲೈನ್ https://kpp.karnataka.gov.in ನಲ್ಲಿ ಕೂಡ ಶೇ. 50 ರಿಯಾಯಿತಿ ಲಭ್ಯವಿದೆ ಎಂದು ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.