ಕೊಡಗಿನ ಶ್ರೇಷ್ಠ ಸಂಸ್ಕೃತಿ ಎಲ್ಲರಿಗೂ ಎಲ್ಲರಿಗೂ ಪರಿಚಯವಾಗಲಿ: ಒಕ್ಕಲಿಗ ಸಂಘದ ನಿರ್ದೇಶಕ ಕೆ.ವಿ. ಶ್ರೀಧರ್

| Published : Aug 03 2025, 11:45 PM IST

ಸಾರಾಂಶ

ಸಮಾಜದ ಹಿರಿಯರಾದ ಕುಯ್ಯುಮುಡಿ ರಾಮಪ್ಪ, ನಡುಮನೆ ರುಕ್ಮಿಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಮೈಸೂರುತಮ್ಮದೇ ಸಂಸ್ಕೃತಿ ಸಂಪ್ರದಾಯವನ್ನು ಹೊಂದಿರುವ ಕೊಡಗು ಗೌಡ ಸಮುದಾಯದವರು ತಮ್ಮ ಶ್ರೇಷ್ಠ ಸಂಸ್ಕೃತಿ ಪರಂಪರೆಯನ್ನು ಸಾರ್ವಜನಿಕ ಸಮಾರಂಭಗಳ ಮೂಲಕ ಇತರರಿಗೂ ಪಸರಿಸುವ ಪ್ರಯತ್ನ ಮಾಡಬೇಕು ಎಂದು ನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಕೆ.ವಿ. ಶ್ರೀಧರ್ ಅಭಿಪ್ರಾಯಪಟ್ಟರು.ಆಟಿ 18ರ ಪ್ರಯುಕ್ತ ಮೈಸೂರು ಕೊಡಗುಗೌಡ ಸಮಾಜದಲ್ಲಿ ಏರ್ಪಡಿಸಿದ್ದ ಆಟಿ ಗೌಜಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿ, ಕೊಡಗು ಗೌಡರ ಶ್ರೇಷ್ಠ ಭಾಷೆ ಸಂಸ್ಕೃತಿ ಆಹಾರ ಪದ್ಧತಿ ಕ್ರಮಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ, ತಮ್ಮ ಸಂಸ್ಕೃತಿ ಇತರರಿಗೂ ಹಂಚಿಕೆಯಾಗಿ ಅದು ಶಾಶ್ವತವಾಗಿರುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಕೊಡು ಗೌಡ ಸಮಾಜದ ಅಧ್ಯಕ್ಷರಾದ ಕೊಂಬಾರನ ಬಸಪ್ಪ ಮಾತನಾಡಿ, ಕೊಡಗಿನಲ್ಲಿ ಮಳೆಗಾಲದ ವಾತಾವರಣದಲ್ಲಿ ಪರಿಸರದಲ್ಲಿ ಸಿಗುವ ಆಹಾರ ಉತ್ಪನ್ನಗಳನ್ನು ಬಳಸಿ ಜನರು ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಮೈಸೂರಿನಲ್ಲಿ ನೆಲೆಸಿರುವ ನಮ್ಮ ಸಮುದಾಯದ ಜನರಿಗೆ ಈ ಆರೋಗ್ಯದಾಯಕ ಆಹಾರವನ್ನು ಒದಗಿಸುವ ಉದ್ದೇಶದಿಂದ ಆಟಿ ಗೌಜಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಕೊಡಗು ಗೌಡ ಮಹಿಳಾ ಒಕ್ಕೂಟದ ನಡುಬೆಟ್ಟಿ ಗೀತಾ ಲಕ್ಷ್ಮಣ ಮಾತನಾಡಿ, ಆಟಿ ಗೌಜಿ ಕಾರ್ಯಕ್ರಮದ ಪ್ರಯುಕ್ತ ವಿವಿಧ ಮಳಿಗೆಗಳಲ್ಲಿ ವಿವಿಧ ಆರೋಗ್ಯದಾಯಕ ಆಹಾರ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದ್ದು ಸಮುದಾಯದ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಸಮಾಜದ ಹಿರಿಯರಾದ ಕುಯ್ಯುಮುಡಿ ರಾಮಪ್ಪ, ನಡುಮನೆ ರುಕ್ಮಿಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೊನ್ನೆಟಿ ನಂದ ಹಾಗೂ ಕೊಡಗು ಗೌಡ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕುಂಟುಪಣಿ ಶೀಲ ಇದ್ದರು.ಕೊಡಗು ಗೌಡ ಸಮಾಜದ ನಿರ್ದೇಶಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರೆ, ಕರ್ಣಯನ ಸುನಿತಾ ಪ್ರಾರ್ಥಿಸಿದರು ಹೊಸೂರು ಮಮತಾ ವಂದಿಸಿದರು.ಆಟಿ ಗೌಜಿ ಕಾರ್ಯಕ್ರಮದ ಪ್ರಯುಕ್ತ, 18 ಮಳಿಗೆಗಳಲ್ಲಿ ವಿವಿಧ ಬಗೆಯ ಕೊಡಗಿನ ಆಹಾರ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿತ್ತು, ಆಟಿ-ಪಾಯಸ, ಪತ್ರೊಡೆ, ಕೂಗಲೆ ಹಿಟ್ಟು, ಸೂಸಲೇ ಹಿಟ್ಟು, ಎಳ್ಳು ಮೆಂತೆ, ಮೊದಲಾದ ಪದಾರ್ಥಗಳು ಬಹುಬೇಗನೆ ಮಾರಾಟವಾದವು, ಕೊಡಗಿನ ವಿಶೇಷ ಮಾಂಸಹಾರವು ಬಹು ಬೇಡಿಕೆ ಗಳಿಸಿತ್ತು. ಪ್ರದರ್ಶನ ಆರಂಭವಾದ ಒಂದು ಗಂಟೆಯೊಳಗೆ ಬಹುತೇಕ ಆಹಾರ ಪದಾರ್ಥಗಳು ಖಾಲಿಯಾಗಿ, ಮಳಿಗೆ ದಾರರು ಹರ್ಷ ವ್ಯಕ್ತಪಡಿಸಿದರು.