ಪ್ರತಿಯೊಬ್ಬರಲ್ಲೂ ಕನ್ನಡಾಭಿಮಾನವಿರಲಿ: ವಿಶ್ವನಾಥ ಕಮ್ಮಾರ

| Published : Nov 02 2025, 03:30 AM IST

ಪ್ರತಿಯೊಬ್ಬರಲ್ಲೂ ಕನ್ನಡಾಭಿಮಾನವಿರಲಿ: ವಿಶ್ವನಾಥ ಕಮ್ಮಾರ
Share this Article
  • FB
  • TW
  • Linkdin
  • Email

ಸಾರಾಂಶ

ರೋಣ ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ ಉದ್ಘಾಟಿಸಿದರು.

ರೋಣ: ಕನ್ನಡ ಕೇವಲ ಭಾಷೆಯಾಗಿರದೆ ನಮ್ಮ ನಾಡು, ನುಡಿ, ಸಂಸ್ಕೃತಿಯ ಅಸ್ಮಿತೆಯಾಗಿದೆ. ಇಂತಹ ಅಸ್ಮಿತೆಯನ್ನು ಎಷ್ಟೇ ಪೀಳಿಗೆಗಳು ಕಳೆದರೂ ಮರೆಯಬಾರದು. ಕೊನೆಯ ಉಸಿರು ಇರುವವರೆಗೂ ಪ್ರತಿಯೊಬ್ಬರಲ್ಲೂ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಲಿ ಎಂದು ಶಿಕ್ಷಕ ವಿಶ್ವನಾಥ ಕಮ್ಮಾರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದವರನ್ನು ಸ್ವಾತಂತ್ರ್ಯ ಚಳವಳಿಯ ಹೋರಾಟಗಾರರಂತೆ ಗೌರವಿಸಬೇಕು. ಬಂಗಾಳದ ಏಕೀಕರಣಕ್ಕಾಗಿ ನಡೆದ ಚಳವಳಿ ಕರ್ನಾಟಕ ಏಕೀಕರಣ ಚಳವಳಿಗೆ ಸ್ಫೂರ್ತಿಯಾಗಿದೆ. ಚರಿತ್ರೆಯ ಹಲವು ರಾಜಮನೆತನಗಳು ಕನ್ನಡದ ಬೆಳವಣಿಗೆಗೆ ಕೊಡುಗೆ ನೀಡಿವೆ. ಜಾತಿ, ಧರ್ಮಗಳಿಗಿಂತ ಮಿಗಿಲಾಗಿದ್ದು ಭಾಷೆ. ಅದನ್ನು ಉಳಿಸಲು ಹೋರಾಡಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ದೊರೆಯುತ್ತದೆ. ಭಾಷೆ ಉಳಿಸಲು ಮಾತೃಭಾಷ ಶಿಕ್ಷಣ ಅವಶ್ಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ ಮಾತನಾಡಿ, ಕನ್ನಡ ನಾಡಿನ ನೆಲ, ಜಲ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಕರ್ನಾಟಕದ ಭವ್ಯ ಪರಂಪರೆ ಇಡಿ ಭಾರತಕ್ಕೆ ಆದರ್ಶ ಪ್ರಾಯವಾಗಿದೆ. ಹಲವು ಸಮಸ್ಯೆಗಳ ಮಧ್ಯೆಯೂ ಏಕೀಕರಣಕ್ಕಾಗಿ ಶ್ರಮಿಸಿದವರ ಕನಸನ್ನು ನನಸು ಮಾಡಲು ಕನ್ನಡಿಗರು ತಮ್ಮ ಮಧ್ಯದ ಭೇದ-ಭಾವಗಳನ್ನು ಮರೆತು ಒಂದಾಗಬೇಕು ಎಂದರು.

ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್‌ ನಾಗರಾಜ ಕೆ., ತಾಪಂ ಇಒ ಚಂದ್ರಶೇಖರ ಕಂದಕೂರ, ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಸದಸ್ಯ ಮಲ್ಲಯ್ಯ ಮಹಾಪುರುಷಮಠ, ಸಂಗಪ್ಪ ಜಿಡ್ಡಿಬಾಗಿಲ, ಪಿಎಸ್‌ಐ ವಿ.ಎಸ್. ಚವಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಆಲೂರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ಎಂ. ನಾಯ್ಕರ, ಗಿರೀಶ ಹೊಸೂರ, ಕಸಾಪ ಅಧ್ಯಕ್ಷ ರಮಾಕಾಂತ ಕಮತಗಿ ಉಪಸ್ಥಿತರಿದ್ದರು.