ಸಾರಾಂಶ
- ಕೊಲೆ ಖಂಡಿಸಿ ಪ್ರತಿಭಟನೆಯಲ್ಲಿ ಎಂ.ಆರ್.ಮಹೇಶ್ ಮನವಿ । ಸರ್ಕಾರದಿಂದಲೂ ನೆರವು ನೀಡಲು ಒತ್ತಾಯ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜಕೀಯವಾಗಿ ಗ್ಯಾರಂಟಿ ನೀಡುವ ಸರ್ಕಾರ ರಾಜ್ಯದ ಮಹಿಳೆಯರು, ಯುವತಿಯರಿಗೆ ಅವರ ಜೀವದ ಯಾವುದೇ ಗ್ಯಾರಂಟಿ ನೀಡುವಲ್ಲಿ ವಿಫಲವಾಗಿದೆ ಎಂದು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಸ್ವಾಮಿ ವಿವೇಕಾನಂದ, ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ತಾಲೂಕು ಅಧ್ಯಕ್ಷ ಎಂ.ಆರ್.ಮಹೇಶ್ ದೂರಿದರು.ಸ್ವಾಮಿ ವಿವೇಕಾನಂದ, ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅವಳಿ ತಾಲೂಕುಗಳ ಗಂಗಾಮತ ಸಮಾಜ ವತಿಯಿಂದ ಸೋಮವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗೆ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಹತ್ಯೆ ಆಗಿರುವ ಹುಬ್ಬಳಿಯ ಅಂಜಲಿ ಅಂಬಿಗೇರ ಕುಟುಂಬದ ನೇರವಿಗೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಬೆಂಬಲಕ್ಕೆ ನಿಂತಿದ್ದಾರೆ. ಅಂಜಲಿ ಅವರ ಕುಟುಂಬಕ್ಕೆ ಭಿಕ್ಷೆ ಬೇಡಿ ನೆರವು ನೀಡುವುದಾಗಿ ಭರವಸೆ ನೀಡಿರುವುದು ಶ್ಲಾಘನೀಯ. ಇವರಂತೆ ರಾಜ್ಯದ ಜನತೆ ಕೂಡ ಯುವತಿ ಕುಟುಂಬದ ನೆರವಿಗೆ ಬರಬೇಕು ಎಂದು ಅವರು ಮನವಿ ಮಾಡಿದ್ದಾರೆ.ತಾಲೂಕು ಕಚೇರಿಯಲ್ಲಿ ಉಪ ತಹಸೀಲ್ದಾರ್ ಸುರೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ನೊಂದ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ತಮ್ಮ ಕೈಲಾದ ಧನಸಹಾಯ ಮಾಡಿದ್ದು, ಇದನ್ನು ಆಂಜಲಿ ಅಂಬಿಗೇರ ಕುಟುಂಬಕ್ಕೆ ಸಲ್ಲಿಸುವುದಾಗಿ ಹೇಳಿದರು.ಬಿಜೆಪಿ ಮುಖಂಡ ಆರಕರೆ ಎ.ಬಿ ಹನುಮಂತಪ್ಪ ಅವರು ಮಾತನಾಡಿ, ಹುಬ್ಬಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಮಾಸುವ ಮುನ್ನವೇ ಒಂದೇ ತಿಂಗಳಲ್ಲಿ ಮತ್ತೊಬ್ಬ ಯುವತಿಯ ಬರ್ಬರ ಹತ್ಯೆಯಾಗಿರುವುದು ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ ಅಂಜಲಿ ಅಂಬಿಗೇರ ಎಂಬ ಬಡ ಯುವತಿಯನ್ನು ಮೇ 15ರಂದು ಚಾಕುವಿನಿಂದ ಇರಿದು ಹತ್ಯೆಗೈಯಲಾಗಿದೆ. ಈ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಹತ್ಯೆಯಾದ ಯುವತಿ ಅಂಜಲಿ ಅಂಬಿಗೇರ ಅವರ ಕುಟುಂಬಕ್ಕೆ ಕೂಡ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಸಂಭವಿಸದಂತೆ ಪೊಲೀಸ್ ಮತ್ತು ಕಾನೂನು ವ್ಯವಸ್ಥೆಗಳನ್ನು ಬಲಿಷ್ಠಗೊಳಿಸಬೇಕು ಎಂದು ಒತ್ತಾಯಪಡಿಸಿದರು.
ಅನಂತರ ಉಪ ತಹಸೀಲ್ದಾರ್ ಸುರೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಗಂಗಾಮತ ಸಮಾಜ ಅಧ್ಯಕ್ಷ ಎಚ್.ಕೆ. ವೆಂಕಟೇಶ್, ಉಪಾಧ್ಯಕ್ಷ ಹಳದಪ್ಪ ಜೆ., ಕಾರ್ಯದರ್ಶಿ ಚೀಲೂರು ಲೋಕೇಶ್, ಖಜಾಂಚಿ ಮಲ್ಲಿಕಾರ್ಜುನ್, ಸಂಚಾಲಕ ದೇವೇಂದ್ರಪ್ಪ ಕೆ.ಸದಸ್ಯರಾದ ತಿಪ್ಪೇಶ್ ,ಶಿವಪ್ಪ, ಬಿಜೆಪಿ ಮುಖಂಡ ಚನ್ನೇಶ್ ಎಚ್. ಜಿ. ನರಸಿಂಹಪ್ಪ, ಸುರೇಶ್,ಬಸವರಾಜಪ್ಪ ಅನೇಕರು ಇದ್ದರು.- - - -20ಎಚ್.ಎಲ್.ಐ1:
ಗಂಗಾಮತ ಸಮಾಜ ಮತ್ತು ಸ್ವಾಮಿ ವಿವೇಕಾನಂದ, ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಹುಬ್ಬಳಿಯ ಅಂಜಲಿ ಅಂಬಿಗೇರ ಯುವತಿ ಹತ್ಯೆ ಖಂಡಿಸಿ ಪ್ರತಿಭಟನೆ ನೆಡಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.