ಸಮಾಜದಲ್ಲಿ ಪ್ರತಿಯೊಬ್ಬರು ಸಾತ್ವಿಕ ಬದುಕು ಸಾಗಿಸಿ: ಹೊನ್ನಾರೆಡ್ಡಿ

| Published : Oct 07 2024, 01:41 AM IST

ಸಾರಾಂಶ

Let everyone lead a sattvic life in society: Honnareddy

-ಗಾಂಧಿಸ್ಮೃತಿ, ಜನಜಾಗೃತಿ ಸಮಾವೇಶದಲ್ಲಿ ಹಿರಿಯ ವಕೀಲ ಆರ್.ಎಂ. ಹೊನ್ನಾರೆಡ್ಡಿ ಸಲಹೆ

------

ಕನ್ನಡಪ್ರಭ ವಾರ್ತೆ ಶಹಾಪುರ

ಸಮಾಜದಲ್ಲಿನ ಪ್ರತಿಯೊಬ್ಬರೂ ಸಾತ್ವಿಕ ಬದುಕು ಸಾಗಿಸಬೇಕು. ದೋಷಗಳನ್ನು ನಿವಾರಿಸಿಕೊಂಡು ಉನ್ನತ ದಾರಿಯಲ್ಲಿ ಸಾಗಬೇಕು ಎಂದು ಹಿರಿಯ ವಕೀಲರಾದ ಆರ್.ಎಂ. ಹೊನ್ನಾರೆಡ್ಡಿ ತಿಳಿಸಿದರು.

ನಗರದ ಅಂಬಾಭವಾನಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಶಹಾಪುರ ಘಟಕದಿಂದ ಆಯೋಜಿಸಿದ್ದ ಗಾಂಧಿಸ್ಮೃತಿ ಮತ್ತು ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಅವಿಭಕ್ತ ಕುಟುಂಬಗಳು ಇಂದು ಮಾಯವಾಗುತ್ತಿವೆ. ಮನೆಯಲ್ಲಿ ಹಿರಿಯರ ಸಲಹೆ, ಸೂಚನೆ ಇಲ್ಲದ ಪರಿಣಾಮ ಅಪರಾಧಗಳು ಘಟಿಸಲು ಕಾರಣವಾಗುತ್ತಿದೆ. ಕೆಟ್ಟವರ ಸ್ನೇಹದಿಂದ ಅವರಲ್ಲಿರುವ ದೋಷಗಳು ನಮ್ಮನ್ನು ಆವರಿಸಿಕೊಂಡು ನರಳಿ ಒದ್ದಾಡುವಂತೆ ಮಾಡುತ್ತದೆ. ಇದರಿಂದ ಒಬ್ಬನಿಗೆ ಮಾತ್ರ ಹಾನಿಯಾಗದೆ ಸುತ್ತಮುತ್ತಲಿನ ಸಮಾಜಕ್ಕೂ ಹಾನಿಯಾಗುತ್ತದೆ. ಕಾರಣ ಪ್ರತಿಯೊಬ್ಬರೂ ಉತ್ತಮ ವಿಚಾರವನ್ನು ನಡೆ-ನುಡಿ ಶುದ್ಧವಾಗಿಟ್ಟುಕೊಳ್ಳುವ ಮೂಲಕ ಕುಟುಂಬಗಳನ್ನು ರಕ್ಷಿಸಿಕೊಂಡಾಗ ಬದುಕು ಸುಂದರವಾಗುತ್ತದೆ ಎಂದರು.

ಈ ದಿಸೆಯಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಘಟಕವು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಉತ್ತಮಕಾರ್ಯ ಮಾಡುತ್ತಿದ್ದು, ಸರ್ವರು ಸಹಾಕರ ನೀಡಿದರೆ ಕಾರ್ಯಕ್ಕೆ ಸಾರ್ಥಕತೆ ಬರುತ್ತದೆ ಮತ್ತು ದುಶ್ಚಟಕ್ಕೆ ದಾಸರಾಗದೇ ಸತ್ಯ, ಶುದ್ಧ ಕಾಯಕದಿಂದ ಬದುಕು ಪಾವನ ಮಾಡಿಕೊಳ್ಳಬೇಕು ಎಂದರು.

ಸಿಂಗನಹಳ್ಳಿ ರಾಮಲಿಂಗ ಮಠದ ಪ್ರಣವಲಿಂಗ ಮಹಾಸ್ವಾಮಿ ಮಾತನಾಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ಅಹಿಂಸಾ ಮಾರ್ಗದ ಮೂಲಕ, ಸತ್ಯದ ದಾರಿಯಲ್ಲಿ ಹೋರಾಟ ಮಾಡಿ ಯಶಸ್ಸು ಕಂಡ ಮಹಾತ್ಮಾ ಗಾಂಧೀಜಿಯವರ ಆದರ್ಶಗಳು ಪರಿಪಾಲನೆಯಾಗಬೇಕು. ಸಮಾಜದ ಪ್ರತಿಯೊಬ್ಬರ ಕುಟುಂಬಗಳು ಸುಖೀ ಕುಟುಂಬಗಳಾಗಬೇಕು. ಗುರುವಿನ ಮಾರ್ಗದರ್ಶನ, ಮಾತೆಯರ ಕಾಳಜಿಯಿಂದ ಯುವಪೀಳಿಗೆ ಸರಿಯಾದ ದಾರಿಯಲ್ಲಿ ಸಾಗಬೇಕು. ಜನಜಾಗೃತಿ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.

ಆರಕ್ಷಣೆ ಇಲಾಖೆಯ ಶ್ಯಾಮಸುಂದರ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರ ಯೋಜನಾಧಿಕಾರಿ ಕಲ್ಲಪ್ಪ ಎ. ಯಾವಗಲ್ ತಾಲೂಕಿನಲ್ಲಿ ಕೈಗೊಂಡ ಕಾರ್ಯಯೋಜನೆಗಳ ಕುರಿತು ಮಾತನಾಡಿದರು. ಪ್ರಮುಖರಾದ ಲಿಯಾಖತ್‌ ಪಾಷಾ, ನಗರ ಸಭೆಯ ಸದಸ್ಯ ಸತೀಶ ಪಂಚಭಾವಿ, ತುಳಜಾರಾಮ ಬಾಸೂತ್ಕರ, ಬಸವರಾಜ ಸಾಗರ, ಅಶೋಕ ತಳವಾರ, ಪತ್ರಕರ್ತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರು, ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ ಸೇರಿದಂತೆ ಪ್ರಮುಖರು ಇದ್ದರು. ಅಂಕಿತಾ, ಸಂಗೀಯಾ ಪ್ರಾರ್ಥಿಸಿದರು. ಶ್ರೀಕಾಂತ ಪವಾಡಿಗೌಡರ್ ಸ್ವಾಗತಿಸಿ, ರಾಜೇಶ್ವರಿ ನಿರೂಪಿಸಿ, ರೇಣುಕಾ ವಂದಿಸಿದರು. 2023-24ನೇ ಸಾಲಿನ ವಾರ್ಷಿಕ ಪ್ರಗತಿ ಪ್ರಸ್ತುತ ಪಡಿಸಲಾಯಿತು.

--ಫೋಟೋ: 6ವೈಡಿಆರ್2

ಶಹಾಪುರ ನಗರಡಾ ಅಂಬಾಭವಾನಿ ಸಭಾಭವನದಲ್ಲಿ ನಡೆದ ಗಾಂಧಿಸ್ಮೃತಿ ಮತ್ತು ಜನಜಾಗೃತಿ ಸಮಾವೇಶದಲ್ಲಿ ಹಿರಿಯ ವಕೀಲರಾದ ಆರ್.ಎಂ. ಹೊನ್ನಾರೆಡ್ಡಿ ಮಾತನಾಡಿದರು.