ಪ್ರತಿಯೊಬ್ಬರೂ ಸಮಾಜ ನೆನಪಿಡುವಂಥ ಸೇವೆ ಸಲ್ಲಿಸಲಿ: ಅನಂತಮೂರ್ತಿ

| Published : Nov 11 2024, 12:51 AM IST

ಪ್ರತಿಯೊಬ್ಬರೂ ಸಮಾಜ ನೆನಪಿಡುವಂಥ ಸೇವೆ ಸಲ್ಲಿಸಲಿ: ಅನಂತಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಭುವನೇಶ್ವರಿ ತಾಯಿಯ ಕನ್ನಡದ ಪ್ರಥಮ ದೇವಸ್ಥಾನ ಹಾಗೂ ಕನ್ನಡದ ಮೊಟ್ಟ ಮೊದಲ ರಾಜಧಾನಿ ಬನವಾಸಿ ಇರುವುದು ನಮ್ಮ ಊರಿನಲ್ಲಿ ಎನ್ನುವುದು ಹಮ್ಮೆಯ ವಿಷಯವಾಗಿದೆ.

ಶಿರಸಿ: ಮನುಷ್ಯರು ಒಳ್ಳೆಯ ಕೆಲಸ ಮಾಡಬೇಕು. ಆಗ ಮಾತ್ರ ಸಮಾಜವು ಅವರನ್ನು ಸದಾ ನೆನಪಿಸುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ತಿಳಿಸಿದರು.ಶನಿವಾರ ಕಾನಸೂರಿನಲ್ಲಿ ಗೆಳೆಯರ ಬಳಗದಿಂದ ಆಯೋಜಿಸಿದ್ದ ೪ನೇ ವರ್ಷದ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನವೆಂಬರ್ ತಿಂಗಳು ಕನ್ನಡಿಗರಿಗೆ ಸಂಭ್ರಮ. ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಭುವನೇಶ್ವರಿ ತಾಯಿಯ ಕನ್ನಡದ ಪ್ರಥಮ ದೇವಸ್ಥಾನ ಹಾಗೂ ಕನ್ನಡದ ಮೊಟ್ಟ ಮೊದಲ ರಾಜಧಾನಿ ಬನವಾಸಿ ಇರುವುದು ನಮ್ಮ ಊರಿನಲ್ಲಿ ಎನ್ನುವುದು ಹಮ್ಮೆಯ ವಿಷಯವಾಗಿದೆ. ಕನ್ನಡ ನುಡಿ, ನೆಲ, ಜಲ ರಕ್ಷಣೆಯ ಜತೆ ನಮ್ಮ ಕನ್ನಡ ನಾಡಿನ ಸಂಸ್ಕೃತಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಜಿಲ್ಲೆಯ ಘಟ್ಟದ ಮೇಲಿನ ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕಾದರೆ ಶಿರಸಿ ಜಿಲ್ಲೆಯಾಗುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಸಮಾನ ಮನಸ್ಕರೆಲ್ಲರೂ ಒಗ್ಗಟ್ಟಾಗಿ ಕದಂಬ ಕನ್ನಡ ಜಿಲ್ಲೆ ನಿರ್ಮಾಣಕ್ಕೆ ಆಗ್ರಹಿಸಿ, ನ. ೧೯ರಂದು ಚಂಡಿಕಾ ಯಾಗ ಮಾಡಲಾಗುತ್ತಿದೆ. ಅಂದು ಬೆಳಗ್ಗೆ ೧೦.೩೦ಕ್ಕೆ ಪೂರ್ಣಾಹುತಿ ಜರುಗಲಿದೆ ಎಂದರು.

ಇದೇ ವೇಳೆ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಕಾಶ ಪಾಲನಕರ, ಮುಳುಗುತಜ್ಞ ಗೋಪಾಲ ಗೌಡ, ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ದಿಗಂತ ಹೆಗಡೆ ಮಾದ್ನಕಳ್ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕಾನಸೂರು ಗ್ರಾಪಂ ಅಧ್ಯಕ್ಷ ಅನಿತಾ ನಾಯ್ಕ ಮಾತನಾಡಿ, ಕಾನಸೂರಿನ ಗೆಳೆಯರ ಬಳಗದ ರಾಜು ಕಾನಸೂರು ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಯೋಜಿಸಿದ್ದಾರೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಪಾಲಕರಿಂದಾಗಬೇಕು. ಇಂದಿನ ದಿನಗಳಲ್ಲಿ ಸಂಘಟನೆ ಮಾಡುವುದು ಬಹಳ ಕಷ್ಟ. ರಾಜು ಕಾನಸೂರು ಸಂಘಟನೆಯನ್ನು ಭದ್ರವಾಗಿ ಕಟ್ಟಿದ್ದಾರೆ. ಕನ್ನಡತನವನ್ನು ಉಳಿಸಿ, ಬೆಳೆಸುವ ಕೆಲಸ ಎಲ್ಲರಿಂದಲೂ ಆಗಬೇಕು ಎಂದರು.ಉಪಾಧ್ಯಕ್ಷ ಸವಿತಾ ಕಾನಡೆ ಮಾತನಾಡಿ, ಕನ್ನಡ ಶಾಲೆಯಲ್ಲಿ ಕಲಿತ ಹಲವಾರು ವ್ಯಕ್ತಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕನ್ನಡ ಭಾಷೆಯ ಮೇಲೆ ಹೆಚ್ಚು ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.ಸದಸ್ಯರಾದ ಶಶಿಪ್ರಭಾ ಹೆಗಡೆ, ಶಶಿಕಾಂತ ನಾಮಧಾರಿ ಮಾತನಾದರು. ಉದ್ಯಮಿ ಆರ್.ಜಿ. ಶೇಟ್, ಸದಸ್ಯ ಮನೋಜ ಶಾನಭಾಗ, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಮತ್ತಿತರರು ಇದ್ದರು. ಸಂಘಟಕ ರಾಜು ಕಾನಸೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗುರುರಾಜ ನಾಯ್ಕ ನಿರೂಪಿಸಿ, ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಹಿನ್ನೆಲೆ ಗಾಯಕ ಭೋಜರಾಜ ಶಿರಾಲಿ ತಂಡದ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರ ರಂಜಿಸಿತು.