ಸಾರಾಂಶ
ಪ್ರತಿಯೊಬ್ಬರು ಸಂಘಟನೆ ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪ್ರತಿಯೊಬ್ಬರು ಸಂಘಟನೆ ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಛಲವಾದಿ ಸಮಾಜದ ಅಧ್ಯಕ್ಷ ಅಂದಪ್ಪ ಹಾಳಕೇರಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಛಲವಾದಿ ಮಹಾಸಭಾ ತಾಲೂಕಾ ಮಟ್ಟದ ಸಭೆಯಲ್ಲಿ ನಾನಾ ಇಲಾಖೆಗಳಿಗೆ ನೂತನವಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಮಾಜದ ಪ್ರತಿಯೊಬ್ಬರು ತಂತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಸಮಾಜ ತಾನಾಗಿಯೇ ಅಭಿವೃದ್ಧಿ ಹೊಂದುತ್ತದೆ ಎಂದರು.
ಇನ್ನೂ ಜ. ೫ರಂದು ತಾಲೂಕಾ ಛಲವಾದಿ ಮಹಾಸಭಾ ಘಟಕಕ್ಕೆ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದರು.ನಿವೃತ್ತ ಶಿಕ್ಷಕ ಭರಮಪ್ಪ ಕಟ್ಟಿಮನಿ ಮಾತನಾಡಿ, ಎಲ್ಲಾ ಸಮಾಜಗಳಲ್ಲೂ ಭಿನ್ನಾಭಿಪ್ರಾಯಗಳು, ಅಸಮಾಧಾನ ಸಹಜ. ಅವುಗಳನ್ನು ಎಲ್ಲರೂ ಮರೆತು ಸಮಾಜ ಕಟ್ಟುವ ಕಾರ್ಯಕ್ಕೆ ಅಣಿಯಾಗಬೇಕು ಎಂದರು.
ಸಮಾಜದ ಮುಖಂಡರಾದ ಛತ್ರೆಪ್ಪ ಛಲವಾದಿ ಹಾಗೂ ಡಿ.ಕೆ. ಪರಶುರಾಮ ಮಾತನಾಡಿದರು.ಈ ಸಂದರ್ಭ ಭೂ ನ್ಯಾಯ ಮಂಡಳಿ ಸದಸ್ಯರಾಗಿ ಮಲ್ಲು ಜಕ್ಕಲಿ, ಪಪಂ ಆಶ್ರಯ ಸಮಿತಿ ಸದಸ್ಯರಾಗಿ ಸಿದ್ದಪ್ಪ ಕಟ್ಟಿಮನಿ ಹಾಗೂ ಆರೋಗ್ಯ ಇಲಾಖೆಗೆ ನಾಮನಿರ್ದೇಶನ ಸದಸ್ಯರಾಗಿ ಪ್ರಕಾಶ ಛಲವಾದಿ ನೇಮಕಗೊಂಡಿರುವುದಕ್ಕೆ ಛಲವಾದಿ ಸಮಾಜದ ಹಿರಿಯರು, ಮುಖಂಡರು ಸನ್ಮಾನಿಸಿದರು.
ಸಮಾಜದ ಮುಖಂಡರಾದ ತಿಪ್ಪಣ ಹಿರೇಮ್ಯಾಗೇರಿ, ರಮೇಶ ಛಲವಾದಿ, ಯಮನೂರಪ್ಪ ಅರಬರ, ಬಸಪ್ಪ ಬಿನ್ನಾಳ, ವಿಜಯ ಜಕ್ಕಲಿ, ಶಶಿಧರ ಹೊಸ್ಮನಿ ಮತ್ತಿತರರಿದ್ದರು.