ರೈತರು- ಸಹಕಾರಿ ಸಂಘದ ಬಾಂಧವ್ಯ ಗಟ್ಟಿಗೊಳ್ಳಲಿ: ಎನ್.ಕೆ. ಭಟ್ಟ

| Published : Mar 14 2024, 02:05 AM IST

ರೈತರು- ಸಹಕಾರಿ ಸಂಘದ ಬಾಂಧವ್ಯ ಗಟ್ಟಿಗೊಳ್ಳಲಿ: ಎನ್.ಕೆ. ಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಕೊರೋನಾ ಸಂದರ್ಭದ ಕಷ್ಟಕಾಲದಲ್ಲಿಯೂ ಗ್ರಾಮೀಣ ಭಾಗಗಳಲ್ಲಿ ಅಗತ್ಯವಾದ ಕಿರಾಣಿ ಸಾಮಗ್ರಿಗಳನ್ನು ವಿತರಿಸುವ ವ್ಯವಸ್ಥೆ ಸಹಕಾರಿ ಸಂಘಗಳಿಂದ ಸುವ್ಯವಸ್ಥಿತವಾಗಿ ನಡೆದಿದೆ

ಯಲ್ಲಾಪುರ: ರೈತರು ಹಾಗೂ ಸಹಕಾರಿ ಸಂಘಗಳ ನಡುವಿನ ಉತ್ತಮ ಬಾಂಧವ್ಯದಿಂದ ಸಹಕಾರಿ ವ್ಯವಸ್ಥೆ ಮತ್ತಷ್ಟು ಸದೃಢಗೊಳ್ಳಲು ಸಾಧ್ಯ ಎಂದು ಟಿಎಂಎಸ್‌ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದರು.

ತಾಲೂಕಿನ ನಂದೊಳ್ಳಿಯಲ್ಲಿ ಮಾ. ೧೧ರಂದು ಎಲ್ಎಸ್ಎಂಪಿ ಶಾಖಾ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಕೊರೋನಾ ಸಂದರ್ಭದ ಕಷ್ಟಕಾಲದಲ್ಲಿಯೂ ಗ್ರಾಮೀಣ ಭಾಗಗಳಲ್ಲಿ ಅಗತ್ಯವಾದ ಕಿರಾಣಿ ಸಾಮಗ್ರಿಗಳನ್ನು ವಿತರಿಸುವ ವ್ಯವಸ್ಥೆ ಸಹಕಾರಿ ಸಂಘಗಳಿಂದ ಸುವ್ಯವಸ್ಥಿತವಾಗಿ ನಡೆದಿದೆ. ರೈತರು ಅಧಿಕ ಸಂಖ್ಯೆಯಲ್ಲಿ ಸಹಕಾರಿ ವ್ಯವಸ್ಥೆಯಡಿ ಬರುವಂತಾಗಬೇಕು ಎಂದರು.

ಶಿರಸಿಯ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಇರದಿದ್ದರೆ ಸಹಕಾರಿ ವ್ಯವಸ್ಥೆ ಹದಗೆಡುತ್ತದೆ. ಹಣ ಗಳಿಕೆಯ ಉದ್ದೇಶದಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ವ್ಯವಸ್ಥೆಗೆ ಮಾರಕ. ಸಹಕಾರಿ ಕ್ಷೇತ್ರದ ಕುರಿತು ಕೇವಲ ಆಡಳಿತ ಮಂಡಳಿ ಮಾತ್ರವಾಗಿರದೇ, ಪ್ರತಿಯೋರ್ವ ಸದಸ್ಯರೂ ಆಸಕ್ತಿ ವಹಿಸಿ, ಅರಿತುಕೊಳ್ಳಬೇಕು. ಇದರಿಂದ ಸಂಸ್ಥೆ ಮತ್ತು ಸದಸ್ಯರಿಬ್ಬರೂ ಬೆಳೆಯಲು ಅವಕಾಶವಾಗುತ್ತದೆ ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಹಕಾರಿ ವ್ಯವಸ್ಥೆ ಭಾರತದ ಶಕ್ತಿ. ಜಗತ್ತಿಗೆ ಅರ್ಥಿಕ ಮುಗ್ಗಟ್ಟು ಬಂದಾಗಲೂ ದೇಶದ ಆರ್ಥಿಕ ವ್ಯವಸ್ಥೆ ಬಲವಾಗಿ ನಿಲ್ಲಲು ಸಹಕಾರ ಮತ್ತು ಕೃಷಿ ವ್ಯವಸ್ಥೆ ಕಾರಣ. ಉತ್ತರಕನ್ನಡ ಜಿಲ್ಲೆ ಇಡೀ ದೇಶದಲ್ಲಿ ಉತ್ತಮ ಸಹಕಾರಿ ವ್ಯವಸ್ಥೆ ಹೊಂದಿದೆ. ಹಿಂದೆ ಸಹಕಾರಿ ಸಂಘಗಳಲ್ಲಿ ರಾಜಕೀಯ ಪ್ರವೇಶಿಸಿರಲಿಲ್ಲ. ಆದರೆ ರಾಜಕೀಯದಲ್ಲಿ ಬೆಳೆಯಲು ಸಹಕಾರಿ ಸಂಘಗಳೇ ಅಡಿಪಾಯವಾಗಿತ್ತು. ಸಹಕಾರಿ ರಂಗದಲ್ಲಿ ರಾಜಕೀಯ ಬರಲಾರಂಭಿಸಿದ್ದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಅಡಕೆ ಟಾಸ್ಕ್‌ಫೋರ್ಸ್ ಮೂಲಕ ಅಡಕೆ ಹಾನಿಕಾರಕವಲ್ಲ ಎಂಬುದನ್ನು ಸಾಬೀತುಪಡಿಸಲು ಅಧ್ಯಯನ ನಡೆಸಲಾಗುತ್ತಿದ್ದು, ಅದರ ಮಧ್ಯಂತರ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಅಂತಿಮ ವರದಿ ಬರುವವರೆಗೆ ವಿಚಾರಣೆಯನ್ನು ತಡೆಹಿಡಿಯಲಾಗಿದೆ ಎಂದು ವಿವರಿಸಿದ ಅವರು, ಈಗಿನ ರಾಜ್ಯ ಸರ್ಕಾರ ಅಡಕೆ ಟಾಸ್ಕ್‌ಫೋರ್ಸ್ ಸಮಿತಿ ರಚಿಸಿಲ್ಲ. ಬೆಳೆಗಾರರ ಹಿತದೃಷ್ಟಿಯಿಂದ ಶೀಘ್ರ ಸಮಿತಿ ನೇಮಕವಾಗಲೆಂದು ಒತ್ತಾಯಿಸಿದರು.

ಎಲ್ಎಸ್ಎಂಪಿ ಅಧ್ಯಕ್ಷ ನಾಗರಾಜ ಕವಡೀಕೆರೆ ಅಧ್ಯಕ್ಷತೆ ವಹಿಸಿದ್ದರು. ಕಟ್ಟಡ ನಿರ್ಮಿಸಿದ ವಿನಾಯಕ ಭಟ್ಟ ನಂದೊಳ್ಳಿ ಅವರನ್ನು ಗೌರವಿಸಲಾಯಿತು. ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಟಿಎಸ್ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ್, ಗ್ರಾಪಂ ಅಧ್ಯಕ್ಷೆ ಭವಾನಿ ಸಿದ್ದಿ, ಉಪಾಧ್ಯಕ್ಷೆ ನಾಗರತ್ನಾ ನಾಯ್ಕ, ಎಲ್ಎಸ್ಎಂಪಿ ಉಪಾಧ್ಯಕ್ಷ ಟಿ.ಆರ್. ಹೆಗಡೆ, ನಿರ್ದೇಶಕರಾದ ತಿಮ್ಮಣ್ಣ ಘಟ್ಟಿ, ಸುಬ್ಬಣ್ಣ ದಾನ್ಯಾನಕೊಪ್ಪ, ಮಹಾಬಲೇಶ್ವರ ಭಟ್ಟ, ಗಾಬ್ರಿಯಲ್ ಫರ್ನಾಂಡೀಸ್, ಗೋಪಾಲಕೃಷ್ಣ ಬಾಳೆಗದ್ದೆ, ಪ್ರಭಾ ಭಾಗ್ವತ, ಗಣಪತಿ ಕವಡಿಕೆರೆ, ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.