ಸಾರಾಂಶ
ವಿವಿಧ ಸಹಕಾರಿ ಸಂಘಗಳು ಸರ್ಕಾರಕ್ಕಿಂತಲೂ ಹೆಚ್ಚು ರೈತರ ಆರ್ಥಿಕ ಸ್ವಾವಲಂಬನೆಗೆ ಆಶಾಕಿರಣಗಳಾಗಿವೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಯಲಬುರ್ಗಾ: ರೈತರ ಶ್ರೇಯೋಭಿವೃದ್ಧಿಗಾಗಿ ಸಹಕಾರಿ ಸಂಘಗಳು ಶ್ರಮಿಸುತ್ತಿವೆ. ಅದರ ಸಂಪೂರ್ಣ ಸದುಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದಾಗ ಸಹಕಾರಿ ಸಂಘಗಳು ಹೆಚ್ಚು ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಶನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸಂಘದ ವಾಣಿಜ್ಯ ಮಳಿಗೆಗಳ ಹಾಗೂ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.ವಿವಿಧ ಸಹಕಾರಿ ಸಂಘಗಳು ಸರ್ಕಾರಕ್ಕಿಂತಲೂ ಹೆಚ್ಚು ರೈತರ ಆರ್ಥಿಕ ಸ್ವಾವಲಂಬನೆಗೆ ಆಶಾಕಿರಣಗಳಾಗಿವೆ ಎಂದರು.
ಸಹಕಾರಿ ಸಂಘಗಳು ಹೆಚ್ಚು ಅಭಿವೃದ್ಧಿಗೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ಸಹಾಯ ಸಹಕಾರ ನೀಡುತ್ತೇನೆ. ಇಲ್ಲಿಯ ಸಹಕಾರಿ ಸಂಘ ನರ್ಬಾಡ್‌ನಿಂದ ₹೫೦ ಲಕ್ಷ ಸಾಲ ಪಡೆದುಕೊಂಡು ಸುಸಜ್ಜಿತ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಸಾರ್ವಜನಿಕರ ಅನುಕೂಲ ಕಲ್ಪಿಸುವ ಉದ್ದೇಶದ ಜತೆಗೆ ಸಂಘಕ್ಕೆ ಆದಾಯ ತಂದುಕೊಡುವ ಈ ಕಾರ್ಯ ನಿಜಕ್ಕೊ ಶ್ಲಾಘನೀಯವಾಗಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುವ ಈ ಸಂಘಗಳು ರೈತರ ಸರ್ವಾಂಗೀಣ ಏಳ್ಗೆಗೆ ಶ್ರಮಿಸುತ್ತಿವೆ. ಜೊತೆಗೆ ಆಡಳಿತ ಮಂಡಳಿ ನಿಸ್ವಾರ್ಥ ಸೇವಾ ಮನೋಭಾವ ರೂಢಿಸಿಕೊಂಡಾಗ ಸಹಕಾರಿ ಸಂಘಗಳು ಸಮಗ್ರ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಹೇಳಿದರು.ತಾಲೂಕಿನಲ್ಲಿ ಎಂಜಿನೀಯರ್ ಕಾಲೇಜು, ಕೌಶಲ್ಯಾಭಿವೃದ್ಧಿ ಕೇಂದ್ರ, ೨೦ಕ್ಕೊ ಹೆಚ್ಚು ಪ್ರೌಢಶಾಲೆ, ಅತೀ ಹೆಚ್ಚು ಮೊರಾರ್ಜಿ ವಸತಿ ಶಾಲೆ, ಜೂನಿಯರ್ ಕಾಲೇಜು, ೧೫ ಬಸ್ ನಿಲ್ದಾಣ, ಎಲ್ಲ ಗ್ರಾಮಗಳ ರಸ್ತೆಗಳ ಡಾಂಬರೀಕರಣ ಸೇರಿದಂತೆ ತಾಲೂಕಿನ ರೈತರ ಜಮೀನುಗಳ ಅಂತರ್ಜಲ ಹೆಚ್ಚಳವಾಗಲಿ ಎಂದು ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಶೀಘ್ರದಲ್ಲೇ ಮಾಡಿ ರೈತರ ಹಿತ ಕಾಪಾಡಲಾಗುವುದು ಎಂದರು.
ಸಂಘದ ಅಧ್ಯಕ್ಷ ವೆಂಕಟೇಶ ವಾಲ್ಮೀಕಿ ಸಭೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ತಳವಾರ, ಸಂಘದ ಅಧ್ಯಕ್ಷ ವೆಂಕಟೇಶ ವಾಲ್ಮೀಕಿ, ಉಪಾಧ್ಯಕ್ಷ ಬಾಲನಗೌಡ ಪಾಟೀಲ, ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪಿರ್ಕಾಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಮಹೇಶ ಹಳ್ಳಿ, ಅಪ್ಪಣ್ಣ ಜೋಶಿ, ನಜೀರಮೀಯಾ, ದಸ್ತಗಿರಿಸಾಬ ಅಲಿ, ಚಂದ್ರಶೇಖರ, ವೀರೇಶ ಪಗಡದಿನ್ನಿ, ಪ್ರಕಾಶ ಸಜ್ಜನ್, ಶರಣಗೌಡ ಪಾಟೀಲ, ರುದ್ರಪ್ಪ ಮರಕಟ್, ಬಸವರಾಜ ಹಿರೇಮನಿ, ಲಕ್ಷ್ಮಣರಾವ್ ಕುಲಕರ್ಣಿ ಸೇರಿದಂತೆ ಸಹಕಾರಿ ಸಂಘದ ಸರ್ವ ನಿರ್ದೇಖರು ಇದ್ದರು.