ಯಕ್ಷಗಾನ, ಡೊಳ್ಳು ಕುಣಿತ, ಪೂಜಾ ಕುಣಿತ, ಜಾನಪದ ಗಾಯನ, ಭರತನಾಟ್ಯ, ಸುಗಮ ಸಂಗೀತ ಹೀಗೆ ಹಲವು ಕಲೆಗಳು ನಾಡನ್ನು ಪ್ರತಿಬಿಂಭಿಸುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವಂತಾಗಬೇಕು. ಜೊತೆಗೆ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಸಂಪಾಜೆ ಗ್ರಾಪಂ ಅಧ್ಯಕ್ಷೆ ರಮಾದೇವಿ ಕಳಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಯಕ್ಷಗಾನ, ಡೊಳ್ಳು ಕುಣಿತ, ಪೂಜಾ ಕುಣಿತ, ಜಾನಪದ ಗಾಯನ, ಭರತನಾಟ್ಯ, ಸುಗಮ ಸಂಗೀತ ಹೀಗೆ ಹಲವು ಕಲೆಗಳು ನಾಡನ್ನು ಪ್ರತಿಬಿಂಭಿಸುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವಂತಾಗಬೇಕು. ಜೊತೆಗೆ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಸಂಪಾಜೆ ಗ್ರಾಪಂ ಅಧ್ಯಕ್ಷೆ ರಮಾದೇವಿ ಕಳಗಿ ಹೇಳಿದರು.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಪಾಜೆ ಗ್ರಾಪಂ ಹಾಗೂ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮಿತಿಯ ಸಹಯೋಗದಲ್ಲಿ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಂಸ್ಕೃತಿಕ ಹಾಗೂ ಜಾನಪದ ಕಲೆಗಳು ನಾಡಿನ ಅಸ್ಮಿತೆಯನ್ನು ಪ್ರತಿಬಿಂಭಿಸುತ್ತಿದ್ದು, ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರೆ ಯುವ ಜನರು ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.ಯಕ್ಷಗಾನ, ಜಾನಪದ ಸೋಭಾನೆ ಸೇರಿದಂತೆ ಜಾನಪದ ಕಲೆಗಳು ಹಿಂದಿನ ಐತಿಹಾಸಿಕವಾಗಿ ಮಹತ್ವದ ಪರಂಪರೆಯನ್ನು ಹೊಂದಿದ್ದು, ಗ್ರಾಮೀಣ ಪ್ರದೇಶದ ಸೊಗಡನ್ನು ತಿಳಿಸುತ್ತವೆ. ಆ ನಿಟ್ಟಿನಲ್ಲಿ ನಾಡಿನ ವಿವಿಧ ಕಲಾ ಪ್ರಕಾರಗಳಿಗೆ ಉತ್ತೇಜನ ನೀಡುವಂತಾಗಬೇಕು ಎಂದು ಹೇಳಿದರು.
ಕನ್ನಡ ಜಾಗೃತಿ ಸಮಿತಿ ಸದಸ್ಯ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಕೊಡಗು ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿದ್ದು, ಹಲವು ಜನಪದ ಹಾಗೂ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಕಾಣಬಹುದಾಗಿದೆ ಎಂದರು.ಸಾಂಸ್ಕೃತಿಕ ಮತ್ತು ಜಾನಪದ ಕಲೆಗಳು ಉಳಿದಲ್ಲಿ ನಾಡಿನ ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ಆ ದಿಸೆಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಕಲೆಗಳ ಮಹತ್ವ ಸಾರುವಲ್ಲಿ ಸಾಂಸ್ಕೃತಿಕ ಸೌರಭ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಗಮಕ ಕಲಾವಿದ ಗಣೇಶ್ ಉಡುಪ ಅವರು ಮಾತನಾಡಿ, ಗಮಕ ಸೇರಿದಂತೆ ಹಲವು ಜಾನಪದ ಕಲೆಗಳು ಅಪರೂಪದಲ್ಲಿ ಅಪರೂಪವಾಗಿದ್ದು, ಸಂಗೀತ ಮತ್ತು ವ್ಯಾಖ್ಯಾನ ಮೂಲಕ ಗಮಕವನ್ನು ವಾಚಿಸಲಾಗುತ್ತದೆ. ಇದೊಂದು ಅದ್ಭುತ ಎಂದು ವಿವರಿಸಿದರು.ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಚಿದ್ಕಾರು ಮಾತನಾಡಿದರು. ಬಿ.ಎಸ್. ಲೋಕೇಶ್ ಸಾಗರ್ ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ಎಚ್.ಜಿ. ಕುಮಾರ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.
ಕನ್ನಡ ಶಾಸ್ತ್ರೀಯ ಸಂಗೀತವನ್ನು ವಿರಾಜಪೇಟೆಯ ಸ್ವರ್ಣ ಸಂಗೀತ ಶಾಲೆಯ ದಿಲೀಪ್ ಕುಮಾರ್ ತಂಡದವರು ಹಾಡಿದರು. ಕುಶಾಲನಗರದ ಕನ್ನಡ ಸಿರಿ ಕಲಾ ವೃಂದದ ಬಿ.ಎಸ್. ಲೋಕೇಶ್ ಸಾಗರ್ ಸುಗಮ ಸಂಗೀತ ಹಾಡಿದರು. ಸೋಮವಾರಪೇಟೆಯ ಹಿರಿಯ ಆಕಾಶವಾಣಿ ಕಲಾವಿದ ಬಿ.ಎ. ಗಣೇಶ್ ಶಾಂತಳ್ಳಿ ಮತ್ತು ತಂಡದವರು ಜಾನಪದ ಗಾಯನ ಹಾಡಿದರು. ಸುಂಟಿಕೊಪ್ಪದ ಕುಮಾರಿ ವಿಧುಷಿ ಸ್ನೇಹಾ ಮತ್ತು ತಂಡದವರು ಭರತನಾಟ್ಯ ನೃತ್ಯ ಪ್ರದರ್ಶಿಸಿದರು. ಮಂಡ್ಯ ಜಿಲ್ಲೆಯ ವೀರಗಾಸೆ ಕುಣಿತದ ಪ್ರದೀಪ್ ಮತ್ತು ತಂಡದವರು ಡೊಳ್ಳು ಕುಣಿತ ಪ್ರದರ್ಶಿಸಿದರು. ಮಂಡ್ಯ ಜಿಲ್ಲೆಯ ಸಂತೋಷ್ ಕೆ.ಪಿ. ಮತ್ತು ತಂಡದವರು ವೀರಗಾಸೆ ಕುಣಿತ ಪ್ರದರ್ಶಿಸಿದರು. ಸುಳ್ಯ ತಾಲೂಕಿನ ಯುವಕ ಯಕ್ಷಗಾನ ಕಲಾ ತಂಡದ ಶೇಖರ್ ಮಣಿಯಾನಿ ಅವರು ಯಕ್ಷಗಾನ ನಾಟ್ಯ ಪ್ರದರ್ಶಿಸಿದರು. ಗಣೇಶ್ ಉಡುಪ ಮತ್ತು ಪ್ರೊ.ಜಿ.ಎನ್. ಅನಸೂಯ ಅವರು ಗಮಕ ಕಾವ್ಯ ಭಾಗ, ಕುಮಾರ ವ್ಯಾಸ ಭಾರತ ವಾಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಗಳು ಪ್ರೇಕ್ಷಕರ ಗಮನ ಸೆಳೆದವು.