ಜಾನಪದ ಪ್ರತಿಭೆಗೆ ಅವಕಾಶ ಸಿಗಲಿ: ಡಾ.ಮಂತರ್‌ಗೌಡ

| Published : Feb 17 2025, 12:30 AM IST

ಸಾರಾಂಶ

ಜಾನಪದ ಪ್ರತಿಭೆಗಳು ಎಲೆಮರೆ ಕಾಯಿಯಂತಾಗಬಾರದು. ಅವರ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಡಾ.ಮಂತರ್‌ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಜಾನಪದ ಪ್ರತಿಭೆಗಳು ಎಲೆಮರೆ ಕಾಯಿಯಂತಾಗಬಾರದು. ಅವರ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಜಾನಪದ ಪರಿಷತ್ ಸೋಮವಾರಪೇಟೆ ಘಟಕ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾದ ಜಾನಪದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಕಲೆ ಮತ್ತು ಕ್ರೀಡೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜಾನಪದ ಕ್ರೀಡಾಕೂಟಗಳು ನಡೆಯುತ್ತಿರಬೇಕು. ಪ್ರತಿಯೊಬ್ಬರು ಭಾಗವಹಿಸಬೇಕು ಎಂದರು.

ಗ್ರಾಮೀಣ ಭಾಗದಲ್ಲಿ ಮಾತ್ರ ಜಾನಪದ ಕಲೆ ಮತ್ತು ಕ್ರೀಡೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರತಿ ಶಾಲಾ ಕಾಲೇಜಿನಲ್ಲಿ ಜಾನಪದ ಕ್ರೀಡಾಕೂಟಗಳನ್ನು ಅಯೋಜಿಸಬೇಕು ಎಂದು ಹೇಳಿದರು.

ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಅನಂತಶಯನ ಮಾತನಾಡಿ, ಜಾನಪದ ಸೊಗಡಿನ ಆಟಗಳು ಜನ ಮಾನಸದಿಂದ ದೂರ ಸರಿಯದಂತೆ ಮಾಡುವುದೇ ಜಾನಪದ ಪರಿಷತ್‌ನ ಕಾಯಕವಾಗಿದೆ. ಜಾನಪದ ಆಟಗಳಲ್ಲಿ ನಮ್ಮ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಆಂಶಗಳನ್ನು ಕಾಣಬಹುದಾಗಿದೆ. ಮನುಷ್ಯ ಸಂಬಂಧದ ಸಾಮರಸ್ಯವನ್ನು ಹೆಚ್ಚಿಸುವ ಆಟಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಜೀವಂತವಾಗಿಡಬೇಕೆಂಬ ಸದುದ್ದೇಶದಿಂದ ಇಂತಹ ಕ್ರೀಡಾಕೂಟಗಳನ್ನು ಪ್ರತಿವರ್ಷ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಚ್.ಎನ್.ತಂಗಮ್ಮ, ಸುಶೀಲಾ ಹಾನಗಲ್, ರೇಣುಕಾ ವೆಂಕಟೇಶ್, ಯಡೂರು ಮಲ್ಲಪ್ಪ, ಅರುಣ್ ಕೊತ್ನಳ್ಳಿ, ವಿಸ್ಮಯಿ, ಡಾ.ಮಂತರ್‌ಗೌಡ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪರಿಷತ್‌ನ ತಾಲೂಕು ಅಧ್ಯಕ್ಷ ಕೆ.ಎ.ಪ್ರಕಾಶ್, ಪ್ರಾಂಶುಪಾಲರಾದ ಡಾ.ಹರ್ಷ, ಜಯವೀರಮಾತೆ ದೇವಾಲಯದ ಧರ್ಮಗುರು ಅವಿನಾಶ್, ಹಾನ್‌ಗಲ್ ಗ್ರಾಮ ಪಂಚಾಯಿತಿ ಸದಸ್ಯ ಡಿ.ಎಸ್.ಸುರೇಶ್, ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಮುನೀರ್ ಆಹಮ್ಮದ್ ಇದ್ದರು. ಪರಿಷತ್‌ನ ಕವಿತ ವಿರೂಪಾಕ್ಷ ಕಾರ್ಯಕ್ರಮ ನಿರ್ವಹಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು ಬುಗುರಿ, ಚಿನ್ನದಾಂಡು, ಕಾಳು ಹೆಕ್ಕುವುದು, ಕಪ್ಪೆ ಕುಪ್ಪಳಿಸುವುದು, ಲಗೋರಿ, ಕುಂಟಬಿಲ್ಲೆ ಆಟಗಳನ್ನು ಆಡಿ ಸಂಭ್ರಮಿಸಿದರು. ಸಾರ್ವಜನಿಕರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಸಂತೋಷಪಟ್ಟರು. ಶಾಸಕ ಡಾ. ಮಂತರ್‌ಗೌಡ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಒಡೆದು ಪ್ರೇಕ್ಷಕರನ್ನು ರಂಜಿಸಿದರು.