ಗಣೇಶ ಮಂಡಳಿ ಹಾಗೂ ಸಾರ್ವಜನಿಕರು ಡಿಜೆ ಬಳಕೆ ಸ್ವಯಂಪ್ರೇರಿತವಾಗಿ ಕೈಬಿಟ್ಟು, ಗೌರಿ-ಗಣೇಶೋತ್ಸವವನ್ನು ಶಾಂತಿ, ಸೌಹಾರ್ದ ಹಾಗೂ ಸುರಕ್ಷಿತವಾಗಿ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಸುರಪುರ
ಗಣೇಶ ಮಂಡಳಿ ಹಾಗೂ ಸಾರ್ವಜನಿಕರು ಡಿಜೆ ಬಳಕೆ ಸ್ವಯಂಪ್ರೇರಿತವಾಗಿ ಕೈಬಿಟ್ಟು, ಗೌರಿ-ಗಣೇಶೋತ್ಸವವನ್ನು ಶಾಂತಿ, ಸೌಹಾರ್ದ ಹಾಗೂ ಸುರಕ್ಷಿತವಾಗಿ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಸಲಹೆ ನೀಡಿದರು.ನಗರದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಗೌರಿ-ಗಣೇಶೋತ್ಸವದ ಪೂರ್ವಭಾವಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣೇಶೋತ್ಸವವು ಭಕ್ತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಪ್ರತೀಕ. ಡಿಜೆಯ ಅತಿಯಾದ ಶಬ್ದದಿಂದ ಮಕ್ಕಳು, ವೃದ್ಧರು, ಗರ್ಭಿಣಿಯರು, ರೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಎಲ್ಲ ಗಣೇಶ ಮಂಡಳಿಗಳು ಮೆರವಣಿಗಳನ್ನು ಕಡ್ಡಾಯವಾಗಿ ರಾತ್ರಿ 11ರ ಒಳಗೆ ಮುಕ್ತಾಯಗೊಳಿಸಬೇಕು ಎಂದರು.
ಯಾದಗಿರಿ, ಶಹಾಪುರ ಸಹಿತ ಜಿಲ್ಲೆಯ ಹಲವು ಪ್ರಮುಖ ಗಣೇಶ ಮಂಡಳಿಗಳು ಡಿಜೆ ಬಳಸದಿರಲು ಸ್ವಯಂಪ್ರೇರಿತವಾಗಿ ನಿರ್ಧರಿಸುವುದು ಸಂತೋಷದ ಸಂಗತಿ. ಸುರಪುರದಲ್ಲಿಯೂ ಇದೇ ಮಾದರಿ ಅನುಸರಿಸಿ ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಡಿವೈಎಸ್ಪಿ ಜಾವೀದ್ ಇನಾಮದಾರ್ ಮಾತನಾಡಿ, ಡಿಜೆಗೆ ಖರ್ಚು ಮಾಡುವ ಹಣವನ್ನು ಸ್ಥಳೀಯ ಕಲಾತಂಡಗಳು, ಡೊಳ್ಳು ಕುಣಿತ, ಬ್ಯಾಂಜೋ ಹಾಗೂ ತಮಟೆ ಕಲಾವಿದರನ್ನು ಪ್ರೋತ್ಸಾಹಿಸಲು ಬಳಸಬಹುದು. ಇತಂಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಮಹಿಳೆಯರು, ಮಕ್ಕಳು ಆಗಮಿಸುತ್ತಾರೆ. ಎಸ್ಸೆಸೆಲ್ಸಿ, ಪಿಯುಸಿ ಹಾಗೂ ನೀಟ್ ಪರೀಕ್ಷೆಗಳಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದು, ಅನ್ನಪ್ರಸಾದ ವಿತರಣೆಯಂತಹ ಸಮಾಜಮುಖಿ ಕಾರ್ಯಗಳಿಗೆ ಬಳಸಬೇಕ ಎಂದು ಸಲಹೆ ನೀಡಿದರು.
ಪಿಐ ಉಮೇಶ ಎಂ.ನಾಯಕ, ವೆಂಕಟೇಶ ಎಚ್. ಬೇಟೆಗಾರ್, ವೆಂಕಟೇಶ ಬೈರಿಮಡ್ಡಿ, ವಿಷ್ಣು ಎಸ್.ಗುತ್ತೇದಾರ, ಶರಣು ನಾಯಕ, ರಾಘವೇಂದ್ರ, ನಾಗರಾಜ ನಾಯಕ ಪ್ಯಾಪ್ಲಿ, ಭೀಮು ಎಚ್.ನಾಯಕ ಮಲ್ಲಿಭಾವಿ, ಶಿವಲಿಂಗ ಎಂ.ಹಸನಾಪುರ, ಸಂಗನಗೌಡ ಕೋನಾಳ ಸೇರಿದಂತೆ ವಿವಿಧ ಗಣೇಶ ಮಂಡಳಿಗಳ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.ಡಿಜೆ ಬಳಸದ ಮಂಡಳಿಗೆ ಗೌರವ: ಡಿಜೆ ಬಳಕೆ ಸ್ವಯಂಪ್ರೇರಿತರಾಗಿ ನಿಲ್ಲಿಸುವ ಗಣೇಶ ಮಂಡಳಿಗಳಿಗೆ ಪೊಲೀಸ್ ಇಲಾಖೆಯಿಂದ ವಿಶೇಷ ಸನ್ಮಾನ ಹಾಗೂ ಬಹುಮಾನ ನೀಡಲಾಗುವುದು. ಹಬ್ಬದ ಸಂದರ್ಭ ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆ ನಡೆದರೂ ತಕ್ಷಣ ಪೊಲೀಸರ ಗಮನಕ್ಕೆ ತಂದು ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಡಿವೈಎಸ್ಪಿ ಜಾವೀದ್ ಇನಾಮದಾರ್ ಹೇಳಿದರುವಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ಅವರು ಮಾತನಾಡಿದರು.