ಸಾರಾಂಶ
ತೋರಣಗಲ್ಲಿನ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹೆಣ್ಣುಮಕ್ಕಳಿಗೆ ಋತುಚಕ್ರದ ನೈರ್ಮಲ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಡೂರು: ಕಿಶೋರಿಯರು ಋತುಚಕ್ರದ ಸಮಯದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಾಚಾರ್ಯ ವೀರೇಶ್ ತಿಳಿಸಿದರು.ತಾಲೂಕಿನ ತೋರಣಗಲ್ಲಿನ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹೆಣ್ಣುಮಕ್ಕಳಿಗೆ ಋತುಚಕ್ರದ ನೈರ್ಮಲ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿಶೋರಿಯರಿಗೆ ಏನಾದರೂ ಸಮಸ್ಯೆ ಇದ್ದರೆ ಶುಶ್ರೂಷಕ ಅಧಿಕಾರಿ ಇರುವರು. ಅವರ ಬಳಿ ತಿಳಿಸಬೇಕು. ಹೆಚ್ಚಿನ ಮಾಹಿತಿ, ಸಲಹೆ ಮತ್ತು ಚಿಕಿತ್ಸೆ ಕೊಡಿಸಲು ಅವರಿಗೆ ಸೂಚಿಸಲಾಗಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳಿಗೆ ಋತುಚಕ್ರ ಪ್ರಾರಂಭವಾಗುತ್ತಿದೆ. ಋತುಚಕ್ರ ಒಂದು ಸ್ವಾಭಾವಿಕ ಪ್ರಕ್ರಿಯೆ. ಹೆಣ್ಣುಮಕ್ಕಳು ಇದರ ಬಗ್ಗೆ ತಿಳಿದು, ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ದೈಹಿಕ, ಸಾಮಾಜಿಕ ಬದಲಾವಣೆಗಳು ಆಗುತ್ತವೆ.
ಜನನಾಂಗಗಳ ಸ್ವಚ್ಛತೆ ಅತಿ ಮುಖ್ಯ. ಪ್ಯಾಡ್‌ಗಳನು ಬಳಸುವುದು ಮತ್ತು ವಿಲೇವಾರಿ ಮಾಡುವುದು ಸುಲಭ. ಜನೌಷಧಿ ಕೇಂದ್ರದಲ್ಲಿ ಕೇವಲ ಹತ್ತು ರುಪಾಯಿಗೆ ಪ್ಯಾಡ್‌ಗಳು ದೊರೆಯುತ್ತವೆ. ಅಸಹಜವಾದ ಋತುಚಕ್ರವಿದ್ದಲ್ಲಿ, ವೈದ್ಯರನ್ನು ಕಾಣಬೇಕು. ಸೋಂಕು ಉಂಟಾಗದಂತೆ ಜಾಗ್ರತೆ ವಹಿಸಬೇಕು. ಉತ್ತಮ ಪೌಷ್ಟಿಕ ಆಹಾರ ಸೇವನೆಯೂ ಅಗತ್ಯವಾಗಿದೆ ಎಂದರು.
ಆರ್‌ಕೆಎಸ್‌ಕೆ ಸಮಾಲೋಚಕ ಪ್ರಶಾಂತ್‌ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕರಾದ ಲೋಕರೆಡ್ಡಿ, ಗೌಶಿಯಾ, ಶುಶ್ರೂಷಕಿ ಭಾಗ್ಯ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.